ಹುನಗುಂದ ಪಟ್ಟನದ ಗುರು ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯನ್ನು ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿದರು. ತಹಸೀಲ್ದಾರ ಪ್ರದೀಪ ಕುಮಾರ ಹಿರೇಮಠ, ಎಂ.ಎಚ್. ಕಟ್ಟಿಮನಿ, ಪರಶುರಾಮ ಮಹಾರಾಜನವರ ಇತರರಿದ್ದರು.
- ಶಾಸಕ ವಿಜಯಾನಂದ ಕಾಶಪ್ಪನವರ ಅಭಿಮತ
- ಗುರುಭವನದಲ್ಲಿ ಆಯೋಜನೆ
- ಸಂವಿಧಾನ ದಿನ ಕಾರ್ಯಕ್ರಮ
ಹುನಗುಂದ : ವಿಶ್ವದ ಎಲ್ಲಾ ಸಂವಿಧಾನಗಳನ್ನು ಅವಲೋಕಿಸಿ ಸರ್ವ ಜನರಿಗೂ ಅನ್ವಯವಾಗುವಂತೆ ಏಕತೆ ಮತ್ತು ಸಮಾನತೆಯ ಸಂವಿಧಾನವನ್ನು ಡಾ. ಬಿ.ಆರ್. ಅಂಬೇಡ್ಕರ್ ನಮಗೆ ನೀಡಿದ್ದಾರೆ. ಇದರಿಂದ ದೇಶದ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಪಟ್ಟಣದ ಅಮರಾವತಿ ರಸ್ತೆಯಲ್ಲಿರುವ ಗುರು ಭವನದಲ್ಲಿ ಬುಧವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಬೇಕು. ಇದರಿಂದ ಮಕ್ಕಳಿಗೆ ನಾಗರಿಕತೆ, ಸಂವಿಧಾನ, ಪ್ರಜಾಪ್ರಭುತ್ವ ಬಗ್ಗೆ ಅರಿವು ಬರುತ್ತದೆ ಎಂದರು.
ರಾಜ್ಯ ಸತ್ಯ ಶೋಧಕ ಸಂಘದ ಅಧ್ಯಕ್ಷ ಪರಶುರಾಮ ಮಹಾರಾಜನವರ ಮಾತನಾಡಿ, ದೇಶದಲ್ಲಿ ಸಮಾನತೆ ಸಾರುವ ಈ ಸಂವಿಧಾನದ ಆಶಯವು ಈ ತನಕವೂ ಕಾಣದಿರುವುದು ಶೋಚನೀಯ. ಸರ್ಕಾರ ಮತ್ತು ಕಚೇರಿಗಳಲ್ಲಿ ಮಾತ್ರ ಈ ಸಂವಿಧಾನ ಆಚರಣೆ ಆಗುತ್ತಿದೆ. ಎಲ್ಲೆಡೆ ಆಚರಿಸುವಂತಾಗಬೇಕು. ಮನುಪಂಥ ಸಂವಿಧಾನ ಆಶಯದ ಬಗ್ಗೆ ನಿಷ್ಕಾಳಜಿ ವಹಿಸುತ್ತಿದೆ ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಸದಾಶಿವ ಗುಡಗುಂಟಿ, ಬಿಸಿಎಂ ಅಧಿಕಾರಿ ಉಮೇಶ ಮಂಟೂರ, ಸಿಡಿಪಿಒ ಮುತ್ತಣ್ಣ ಗಂಜಿಹಾಳ, ಅರಣ್ಯ ಇಲಾಖೆ ಬಬಲಾದಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಸುಭಾಸ ಸುಲಿಂ, ತಾ.ಪಂ. ಸಹಾಯಕ ನಿರ್ದೇಶಕ ಮಹಾಂತೇಶ ಚಲವಾದಿ, ನಿವೃತ್ತ ಉಪನ್ಯಾಸಕ ಸಿದ್ದಲಿಂಗಪ್ಪ ಬೀಳಗಿ, ಬಸವರಾಜ ಮಸ್ಕಿ, ಬಸವರಾಜ ಪಾಚಾಪುರ ಇದ್ದರು. ಜಾಸ್ಮಿನ್ ಕಿಲ್ಲೇದಾರ ಸ್ವಾಗತಿಸಿದರು. ಬಿ.ಡಿ. ಚಿತ್ತರಗಿ ನಿರೂಪಿಸಿದರು. ಬಸವರಾಜ ಮಸ್ಕಿ ವಂದಿಸಿದರು.