ಬಾಗಲಕೋಟೆಯಲ್ಲಿ ಅಖಿಲ ಕರ್ನಾಟಕ ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘದ ಕ್ಯಾಲೇಂಡರ್‌ನ್ನು ಸಂಘದ ಅಧ್ಯಕ್ಷೆ ರೋಶಿನಿ ಗೌಡ ಬಿಡುಗಡೆ ಮಾಡಿದರು. ರಾಜ್ಯ ಖಜಾಂಚಿ ಡಾ. ವೀಣಾ ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷೆ ಗಿರಿಜಾ ವಾಬನ್ನವರ ಮತ್ತಿತರರು ಇದ್ದರು.
- ಸಂಘದ ಅಧ್ಯಕ್ಷೆ ರೋಶಿನಿ ಗೌಡ ಹೇಳಿಕೆ
- ಸದಸ್ಯರ ಶ್ರೇಯೋಭಿವೃದ್ಧಿಗೆ ಆದ್ಯತೆ
- ಮಹಿಳೆಯರ ಹಕ್ಕು ಹಾಗೂ ರಕ್ಷಣೆಗಾಗಿ ನಮ್ಮ ಸಂಘಟನೆಯು ಶ್ರಮಿಸುತ್ತದೆ
ಬಾಗಲಕೋಟೆ: ರಾಜ್ಯದಲ್ಲಿ 2.50 ಲಕ್ಷ ಮಹಿಳಾ ಸರ್ಕಾರಿ ನೌಕರರು ಇದ್ದು, ಎಲ್ಲ ಜಿಲ್ಲೆಗಳಲ್ಲೂ ಸಂಘಟನೆ ಮಾಡಲು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವುದಾಗಿ ಅಖಿಲ ಕರ್ನಾಟಕ ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ರೋಶಿನಿ ಗೌಡ ಹೇಳಿದರು.
ನವನಗರದಲ್ಲಿ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಘವು ಮಹಿಳಾ ನೌಕರರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಮಹಿಳಾ ನೌಕರರ ಸಂಘವು ಈಗಾಗಲೇ ರಾಜ್ಯದ 18 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಜಿಲ್ಲೆಗಳಲ್ಲಿ ಸಂಘಟನೆ ಮಾಡಲಾಗುವುದು. ಮಹಿಳೆಯರ ಹಕ್ಕು ಹಾಗೂ ರಕ್ಷಣೆಗಾಗಿ ನಮ್ಮ ಸಂಘಟನೆಯು ಶ್ರಮಿಸುತ್ತದೆ ಎಂದು ತಿಳಿಸಿದರು.
ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಈಗಾಗಲೇ ಸಂಘದ ಸದಸ್ಯತ್ವ ಅಭಿಯಾನ ಆರಂಭಿಸಿದ್ದು, ಸದ್ಯ ರಾಜ್ಯದಲ್ಲಿ 50 ಸಾವಿರಕ್ಕೂ ಅಧಿಕ ಮಹಿಳಾ ನೌಕರರು ಸಂಘದ ಸದಸ್ಯತ್ವ ಪಡೆದುಕೊಂಡಿದ್ದಾರೆ. ಒಟ್ಟು 2.50 ಲಕ್ಷ ಮಹಿಳಾ ಸರ್ಕಾರಿ ನೌಕರರು ಇದ್ದು, ಅವರೆಲ್ಲರನ್ನು ಸಂಘಟನೆ ಅಡಿಯಲ್ಲಿ ತರುವ ಕೆಲಸವನ್ನು ಮಾಡಲಾಗುವುದು. 8ನೇ ವೇತನ ಆಯೋಗದ ರಚನೆ, ಒಪಿಎಸ್ ಜಾರಿ, ಮಾತೃತ್ವ ರಜೆ ವಿಸ್ತರಣೆ, ಗರ್ಭೀಣಿಯರಿಗೆ ವೈದ್ಯಕೀಯ ತಪಸಾಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದೇವೆ ಎಂದರು.
ಅಖಿಲ ಕರ್ನಾಟಕ ರಾಜ್ಯ ಮಹಿಳಾ ನೌಕರರ ಸಂಘ ಸ್ಥಾಪನೆಯಾಗಿ ಎರಡು ವರ್ಷಗಳಾಗಿವೆ. ಈಗಾಗಲೇ ನಮ್ಮ ಸಂಘದಿಂದ ಹಲವು ಚಟುವಟಿಕೆಗಳನ್ನು ಮಾಡುತ್ತ ಬಂದಿದ್ದು, ಮಹಿಳಾ ನೌಕರರ ಸಮಸ್ಯೆಗಳಿಗೆ ನಮ್ಮ ಸಂಘವು ಸ್ಪಂದಿಸುತ್ತದೆ. ಮಹಿಳಾ ನೌಕರರಿಗೆ ಕಿರುಕುಳ, ಲೈಂಗಿಕ ದೌರ್ಜನ್ಯ ನಡೆದಲ್ಲಿ ಸಂಘವು ಪ್ರತಿಭಟನೆ ಮಾಡಿ ಸಂತ್ರಸ್ತ ಸದಸ್ಯರಿಗೆ ಕಾನೂನು ನೆರವು ನೀಡಲಾಗುವುದು ಎಂದ ಅವರು, ನಮ್ಮ ಸಂಘದಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿನ ಎಲ್ಲ ಮಹಿಳಾ ಸರ್ಕಾರಿ ನೌಕರರು ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ 2026ರ ಸಂಘದ ನೂತನ ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಯಿತು. ಸುದ್ದಿಗ್ಠೋಯಲ್ಲಿ ರಾಜ್ಯ ಖಜಾಂಚಿ ಡಾ. ವೀಣಾ ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷೆ ಗಿರಿಜಾ ವಾಬನ್ನವರ, ಪದಾಧಿಕಾರಿಗಳಾದ ನಿರ್ಮಲಾ ಪತ್ತಾರ, ರೇಣುಕಾ ಡಿಗ್ಗಿ, ಎಸ್.ಎಚ್. ಕಂದಗಲ್ ಮತ್ತಿತರರು ಇದ್ದರು.