ರಕ್ಷಾ ಬಂಧನ ಹಿನ್ನಲೆಯಲ್ಲಿ ಬಾಗಲಕೋಟೆಯ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಸೇರಿದಂತೆ ಇತರೆ ಸ್ವಾಮೀಜಿಗಳಿಗೆ ಬ್ರಹ್ಮಕುಮಾರಿ ನಾಗರತ್ನಕ್ಕ ಹಾಗೂ ಇತರರು ರಾಖಿ ಕಟ್ಟಿದರು.
ನಮ್ಮ ಮಕ್ಕಳು ಆಧುನಿಕ ಶಿಕ್ಷಣ ಪಡೆಯುವುದರ ಜೊತೆಗೆ ತಮ್ಮ ನೆಲ, ಧರ್ಮ, ಸಂಸ್ಕೃತಿ, ಶರಣರ ತತ್ವ, ಬಸವಣ್ಣನವರ ಸಮಾನತೆಯ ಸಂದೇಶ ಹಾಗೂ ಹಿರಿಯರು ಕಟ್ಟಿಕೊಟ್ಟ ಮೌಲ್ಯಗಳನ್ನೂ ಅರಿಯಬೇಕು. ಅದಕ್ಕಾಗಿ ಅವರನ್ನು ಮಠ, ಆಶ್ರಮ ಮತ್ತು ಸತ್ಸಂಗಗಳ ಕಾರ್ಯಕ್ರಮಗಳಿಗೆ ಕರೆತರುವುದು ನಮ್ಮ ಜವಾಬ್ದಾರಿಯಾಗಬೇಕೆಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಸಲಹೆ ನೀಡಿದರು.
ನಗರದ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಮಠದಲ್ಲಿ ಶುಕ್ರವಾರ ಸಂಜೆ ರಕ್ಷಾ ಬಂಧನ, ಸಹೋದರ ಸಹೋದರಿಯರ ಸಂಭ್ರಮದ ಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಕಾಲ ಬದಲಾಗಿದೆ, ಸಮಾಜವೂ ಬದಲಾಗಿದೆ. ಆದರೆ ಮಠಗಳ ಜವಾಬ್ದಾರಿ ಕಡಿಮೆಯಾಗಿಲ್ಲ. ಬದಲಾಗಿ ಅದು ಮತ್ತಷ್ಟು ಹೆಚ್ಚಾಗಿದೆ. ಗುರುಗಳು ಧರ್ಮ ಮತ್ತು ಸಂಸ್ಕಾರದ ಜೊತೆಗೆ ಸಮಾಜದ ನೋವುಗಳಿಗೆ ಸ್ಪಂದಿಸುತ್ಕಿದ್ದಾರೆ. ಹಳ್ಳಿ ಹಳ್ಳಿಗಳಿಗೆ ತೆರಳಿ ಯುವಕರನ್ನು ದುಶ್ಚಟಗಳಿಂದ ದೂರವಿಡಲು ಜಾಗೃತಿ ಮೂಡಿಸುತ್ತಿರುವುದು ನಿಜವಾದ ಸಮಾಜಸೇವೆಯಾಗಿದೆ ಎಂದರು.
ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಹನ್ನೆರಡನೆಯ ಶತಮಾನದ ಶರಣ ಚಳವಳಿಯು ಸಮಾಜಕ್ಕೆ ಸಮಾನತೆ, ಕಾಯಕ, ದಾಸೋಹ ಮತ್ತು ಅನುಭಾವದ ಮಹತ್ವವನ್ನು ಸಾರಿದಂತೆಯೇ ಕುಟುಂಬ ಸಂಬAಧಗಳಿಗೂ ಹೊಸ ಅರ್ಥ ನೀಡಿತು. ಬಸವಣ್ಣ-ಅಕ್ಕನಾಗಮ್ಮರಲ್ಲಿ ತತ್ವನಿಷ್ಠೆಯ ಸಹೋದರತ್ವ ಕಾಣುತ್ತದೆ. ಅಜಗಣ್ಣ-ಮುಕ್ತಾಯಕ್ಕರಲ್ಲಿ ಅನುಭಾವದ ಆಳವಾದ ಸಂಬAಧ ಕಾಣುತ್ತದೆ. ಮೊಳಿಗೆ ಮಾರಯ್ಯ-ಬೊಂತಾದೇವಿಯAತಹ ಶರಣ ಸಂಕುಲದ ಬದುಕಿನಲ್ಲಿ ತ್ಯಾಗ, ಸರಳತೆ ಮತ್ತು ಆಧ್ಯಾತ್ಮಿಕ ಸಹಯಾನದ ಮೌಲ್ಯ ಗೋಚರಿಸುತ್ತದೆ ಎಂದು ತಿಳಿಸಿದರು.
ಶರಣರು ಸಂಬAಧಗಳನ್ನು ತೊರೆದವರಲ್ಲ; ಸಂಬAಧಗಳಲ್ಲಿದ್ದ ಸ್ವಾರ್ಥವನ್ನು ತೊರೆದವರು. ಕುಟುಂಬವನ್ನು ನಿರಾಕರಿಸಿದವರಲ್ಲ; ಕುಟುಂಬವನ್ನು ಸಾಧನೆಯ ಕ್ಷೇತ್ರವನ್ನಾಗಿಸಿದವರು. ಪ್ರೀತಿಯನ್ನು ಬಂಧನವಾಗಿಸಿದವರಲ್ಲ; ಮುಕ್ತಿಗೆ ಮಾರ್ಗವಾಗಿಸಿದವರು ಎಂದು ವಿವರಿಸಿದರು.
ಚರಂತಿಮಠದ ಪ್ರಭುಸ್ವಾಮೀಜಿ ಮಾತನಾಡಿ ಭಾರತೀಯ ಸಂಸ್ಕೃತಿಯ ಇತಿಹಾಸವನ್ನು ಅವಲೋಕಿಸಿದಾಗ ಮಹಿಳೆ ಕೇವಲ ಕುಟುಂಬದ ಒಂದು ಭಾಗವಾಗಿ ಉಳಿದಿಲ್ಲ. ಅವಳು ಜ್ಞಾನದ ಜ್ಯೋತಿ, ಸಂಸ್ಕಾರದ ತಾಯಿ, ತ್ಯಾಗದ ಪ್ರತೀಕ, ಸೇವೆಯ ಸಾಕಾರಮೂರ್ತಿ, ಧೈರ್ಯದ ಸಂಕೇತ ಹಾಗೂ ಸಂಸ್ಕೃತಿಯ ಸಂರಕ್ಷಕಿಯಾಗಿ ಕಾಣಿಸುತ್ತಾಳೆ ಎಂದರು.
ಬ್ರಹ್ಮಕುಮಾರಿ ನಾಗರತ್ನಕ್ಕ ಅವರು ಮಾತನಾಡಿ, ರಕ್ಷಾಬಂಧನವು ಕೇವಲ ಸಹೋದರಿಯು ಸಹೋದರನ ಕೈಗೆ ರಾಖಿ ಕಟ್ಟುವ ಸಂಪ್ರದಾಯವಲ್ಲ. ಅದು ಪ್ರೀತಿ, ವಿಶ್ವಾಸ, ಪವಿತ್ರತೆ, ರಕ್ಷಣೆ ಮತ್ತು ಜವಾಬ್ದಾರಿಯ ಸಂಕೇತವಾಗಿದೆ. ಹಣೆಗೆ ಹಚ್ಚುವ ತಿಲಕವು ನಾವೆಲ್ಲರೂ ಆತ್ಮಸ್ವರೂಪಿಗಳು, ಒಬ್ಬನೇ ಪರಮಾತ್ಮನ ಮಕ್ಕಳು ಎಂಬ ಸತ್ಯವನ್ನು ನೆನಪಿಸುತ್ತದೆ. ಕೈಗೆ ಕಟ್ಟುವ ರಾಖಿಯು ಪರಸ್ಪರ ಪ್ರೀತಿ, ಗೌರವ ಮತ್ತು ರಕ್ಷಣೆಯ ಪವಿತ್ರ ಪ್ರತಿಜ್ಞೆಯನ್ನು ಸಾರುತ್ತದೆ ಎಂದು ತಿಳಿಸಿದರು.
ಇಂದು ಆಸ್ತಿ, ಹಣ, ಅಕಾರ, ಪದವಿ ಮತ್ತು ವೈಯಕ್ತಿಕ ಸ್ವಾರ್ಥಕ್ಕಾಗಿ ಕುಟುಂಬ ಸಂಬAಧಗಳು ಮುರಿದು ಬೀಳುತ್ತಿರುವ ಸಂದರ್ಭದಲ್ಲಿ, ರಕ್ಷಾಬಂಧನದ ಸಂದೇಶ ಇನ್ನಷ್ಟು ಮಹತ್ವ ಪಡೆದುಕೊಳ್ಳುತ್ತದೆ. ಹಣ ಮತ್ತು ಆಸ್ತಿ ಶಾಶ್ವತವಲ್ಲ. ಆದರೆ, ನಿಸ್ವಾರ್ಥ ಪ್ರೀತಿ, ಪವಿತ್ರ ಸ್ನೇಹ, ವಿಶ್ವಾಸ ಮತ್ತು ಉತ್ತಮ ಸಂಬAಧಗಳೇ ಜೀವನದ ನಿಜವಾದ ಹಾಗೂ ಅವಿನಾಶಿಯಾದ ಆಸ್ತಿಗಳಾಗಿವೆ. ಅವುಗಳನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಅಮರೇಶ್ವರ ಶಾಸ್ತಿçಗಳು ಗುಡ್ಡಾಪುರದ ದಾನಮ್ಮ ಕುರಿತು ಪ್ರವಚನ ನೀಡಿದರು.