ಬಾಗಲಕೋಟೆ ನಗರದ ಗೋದಾಮು ಒಂದರಲ್ಲಿ ಸಂಗ್ರಹ ಇರುವ ಸಿಲಿಂಡರ್‌ಗಳು. 
ಬಾಗಲಕೋಟೆ

ಈ ವಾರಕ್ಕಿಲ್ಲ ಎಲ್‌ಪಿಜಿ ಸಿಲಿಂಡರ್ ಬರ..!

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ಪೂರೈಕೆಯಲ್ಲಿ ವ್ಯತ್ಯಯವಾದರೆ ಮುಂದಿನ ವಾರ ಸಮಸ್ಯೆ ಉಲ್ಬಣ
  • ಸಿಲಿಂಡರ್ ಪೂರೈಕೆ
ಅಶೋಕ ಶೆಟ್ಟರ, ಬಾಗಲಕೋಟೆ: ಕೊಲ್ಲಿ ಕದನದಿಂದ ರಾಜ್ಯದಲ್ಲೂ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಸಹ ಜನರಲ್ಲಿ ಸಿಲಿಂಡರ್ ಸಿಗುತ್ತದೆಯೋ ಇಲ್ಲವೋ ಎನ್ನುವ ಆತಂಕ ಮನೆ ಮಾಡಿದೆಯಾದರೂ ಸದ್ಯಕ್ಕೆ ಸಿಲಿಂಡರ್ ಪೂರೈಕೆಯಲ್ಲಿ ಅಂತ ಸಮಸ್ಯೆ ಕಾಣಿಸಿಲ್ಲ.
ಒಂದು ವಾರದ ಮಟ್ಟಿಗೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಅಂತ ಸಮಸ್ಯೆ ಆಗಲ್ಲ. ಅಗತ್ಯ ಸಿಲಿಂಡರ್‌ಗಳ ಸಂಗ್ರಹ ಇದೆ ಎಂದು ಗ್ಯಾಸ್ ಏಜೆನ್ಸಿಯವರು ಹೇಳುತ್ತಿದ್ದಾರೆ. ಆದರೆ, ಇದೇ ವಿಷಯವನ್ನು ವಾಣಿಜ್ಯ ಬಳಕೆ ಸಿಲಿಂಡರ್‌ನಲ್ಲಿ ಹೇಳುವಂತಿಲ್ಲ. ಈಗಾಗಲೇ ಒಂದು ದಿನ ಬಿಟ್ಟು ಮತ್ತೊಂದು ದಿನ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಹೋಟೆಲ್ ಉದ್ಯಮದ ಮೇಲೆ ಕರಿನೆರಳು ಆವರಿಸಲು ಆರಂಭಿಸಿದೆ ಎಂದು ಹೋಟೆಲ್ ಉದ್ಯಮಿಗಳು ಹೇಳುತ್ತಿದ್ದಾರೆ
.
ಬಾಗಲಕೋಟೆ ಜಿಲ್ಲೆಯಲ್ಲಿ ಎಚ್‌ಪಿ, ಐಒಸಿ, ಬಿಪಿಸಿ ಸೇರಿ ಒಟ್ಟು 30 ಏಜನ್ಸಿಗಳು ಇದ್ದು, ಗ್ರಾಮೀಣ, ನಗರ ಮತ್ತು ಶಾಲೆ, ಅಂಗನವಾಡಿ ಹಾಸ್ಟೆಲ್‌ಗಳಲ್ಲಿ ಬಳಕೆ ಮಾಡುವ ಗೃಹ ಉಪಯೋಗಿ ಸಿಲಿಂಡರ್ ಸಂಪರ್ಕಗಳು 5,52,413 ಇದ್ದು, ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಸಂಪರ್ಕ 17,462 ಇವೆ.
ಸದ್ಯ ಎಲ್ಲ ಏಜೆನ್ಸಿಯವರ ಬಳಿಯೂ ತಕ್ಕಮಟ್ಟಿಗೆ ಸ್ಟಾಕ್ ಇದ್ದು, ಒಂದು ವಾರದ ಮಟ್ಟಿಗೆ ಪೂರೈಕೆಯಲ್ಲಿ ಯಾವುದೇ ತೊಂದರೆ ಇಲ್ಲ. ಅಷ್ಟರಲ್ಲಿ ಲೋಡ್‌ಗಳು ಬಂದರೆ ಯಥಾ ಸ್ಥಿತಿ ಮುಂದುವರಿಯುತ್ತದೆ. ಪೂರೈಕೆಯಲ್ಲಿ ಏನಾದರೂ ವ್ಯತ್ಯಾಸವಾದರೆ ಮುಂದಿನ ವಾರದಲ್ಲಿ ಅಡುಗೆ ಅನಿಲದಲ್ಲೂ ತೊಂದರೆ ಕಾಣಿಸಿಕೊಳ್ಳಲಿದೆ. ಅದೇ ಪರಿಸ್ಥಿತಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಪೂರೈಸುವ ವಾಣಿಜ್ಯ ಬಳಕೆಯ ಸಿಲಿಂಡರ್ ಪರಿಸ್ಥಿತಿಯೂ ಇದೆ ಎಂದು ಏಜನ್ಸಿಯವರು ಹೇಳುತ್ತಾರೆ.

ಫುಟ್‌ಪಾತ್ ಹೋಟೆಲ್‌ಗಳಿಗೆ ಬರಸಿಡಿಲು

ಮುಖ್ಯವಾಗಿ ದಿನನಿತ್ಯದ ಹೊಟ್ಟೆ ಉಪಜೀವನಕ್ಕಾಗಿ ರಸ್ತೆ ಬದಿಯಲ್ಲಿ ಗೂಡಂಗಡಿ ಇಟ್ಟುಕೊಂಡು ಚಹಾದ ಅಂಗಡಿ ನಡೆಸುವ ಪ್ಯಾಪಾರಸ್ಥರಲ್ಲಿ ತೀವ್ರ ಆತಂಕ ಕಾಣಿಸಿಕೊಂಡಿದೆ. ಕಾರಣ ಒಂದು ಕಡೆಗೆ ಅವರಿಗೆ ಸಿಲಿಂಡರ್ ಬೆಲೆ ಹೆಚ್ಚಳ, ಮತ್ತೊಂದೆಡೆ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿರುವುದು. ಸ್ಟೋ ಹಚ್ಚಿಕೊಂಡು ಚಹಾ ಮತ್ತು ಉಪಹಾರ ತಯಾರಿಸಲು ಸೀಮೆಎಣ್ಣೆಯೂ ಇಲ್ಲ. ಕಟ್ಟಿಗೆ ಒಲೆ ಹಚ್ಚಲು ಜಾಗ ಇಲ್ಲ. ಇದರಿಂದ ಸಿಲಿಂಡರ್ ಪೂರೈಕೆ ಸಹಜ ಸ್ಥಿತಿಗೆ ಬರದಿದ್ದರೆ ತಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎನ್ನುವ ಆತಂಕದ ಮಾತುಗಳನ್ನು ಹೇಳುತ್ತಿದ್ದಾರೆ.

ನಾಲ್ಕೈದು ದಿನ ನೋಡಿಕೊಂಡು ಸಭೆ

ಇದೇ ವಿಚಾರವಾಗಿ ಬಾಗಲಕೋಟೆ ಹೋಟೆಲ್ ಮತ್ತು ಉಪಾಹಾರ ಸಂಘದವರು ಸಹ ಸಿಲಿಂಡರ್ ಸಮಸ್ಯೆಯಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಈ ಮೊದಲೆಲ್ಲ ಬುಕ್ಕಿಂಗ್ ಮಾಡಿದ ದಿನವೇ ಸಿಲಿಂಡರ್ ಸಿಗುತ್ತಿತ್ತು. ಈಗ ಒಂದು ಎರಡು ದಿನದ ಬಳಿಕ ಕೊಡುತ್ತಿದ್ದಾರೆ. ಇನ್ನೊಂದು ವಾರದಲ್ಲಿ ದಾಸ್ತಾನು ಬರಲಿದ್ದು, ಆಗ ಸಮಸ್ಯೆ ಆಗಲ್ಲ ಎಂದು ಏಜನ್ಸಿಯವರು ಹೇಳುತ್ತಿದ್ದಾರೆ. ಇದನ್ನು ನಂಬಿದ್ದೇವೆ. ಮರ‍್ನಾಲ್ಕು ದಿನ ನೋಡಿಕೊಂಡು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಂದರ್ಭ ಕಂಡು ಬಂದಲ್ಲಿ ಸಂಘದ ಸಭೆ ಕರೆದು ಎಲ್ಲರೂ ಈ ಬಗ್ಗೆ ಚರ್ಚಿಸಿ, ತಮಗೆ ಆಗುವ ಅನಾನುಕೂಲದ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ಮುಂದಾಗಲಿದ್ದೇವೆ ಎಂದು ಸಂಘದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಅವರು ಹೇಳುತ್ತಾರೆ.

ಪ್ಯಾನಿಕ್ ಆಗಬೇಡಿ

ಜಿಲ್ಲೆಯಲ್ಲಿ ಸದ್ಯಕ್ಕೆ ಅಡುಗೆ ಸಿಲಿಂಡರ್ ಸಮಸ್ಯೆ ಉಂಟಾಗಿಲ್ಲ. ಅಗತ್ಯ ದಾಸ್ತಾನು ಇದೆ. ಸಾರ್ವಜನಿಕರು ಎಲ್ಲೋ ಸಮಸ್ಯೆ ಆಗಿದೆ ಎಂದು ಇಲ್ಲಿಯೂ ಅದೇ ಪರಿಸ್ಥಿತಿ ಇದೆ ಎಂದು ಭಾವಿಸಿ ಪ್ಯಾನಿಕ್‌ಗೆ ಒಳಗಾಗಬಾರದು. ಆತಂಕಕ್ಕೆ ಒಳಗಾಗಿ ಅಗತ್ಯ ಇಲ್ಲವಾದರೂ ಸಿಲಿಂಡರ್ ಬುಕ್ಕಿಂಗ್ ಮಾಡುವುದು ಬೇಡ. ಒಂದು ವಾರಕ್ಕೆ ಆಗುವಷ್ಟು ಸಿಲಿಂಡರ್‌ಗಳು ಇವೆ. ಅಷ್ಟರಲ್ಲಿ ಸಿಲಿಂಡರ್ ಲೋಡ್ ಬರಲಿವೆ ಎಂದು ನಗರದ ವೀರಭದ್ರೇಶ್ವರ ಗ್ಯಾಸ್ ಏಜನ್ಸಿ ಮಾಲೀಕರಾದ ರಾಜು ಮಸಿ ತಿಳಿಸಿದರು.

ಸಿಂಗಲ್ ಸಿಲಿಂಡರ್‌ಗೆ 21 ದಿನಗಳ ಬಳಿಕ ಬುಕ್ಕಿಂಗ್

ಗೃಹ ಬಳಕೆಯ ಸಿಲಿಂಡರ್ ಉಪಯೋಗಿಸುವವರು ಸಿಂಗಲ್ ಸಿಲಿಂಡರ್ ಸಂಪರ್ಕ ಹೊಂದಿದ್ದರೆ ಅವರು ಒಂದು ಸಿಲಿಂಡರ್ ಪಡೆದ 21 ದಿನಗಳ ಬಳಿಕ ಬುಕ್ಕಿಂಗ್ ಮಾಡಲು ಅವಕಾಶ ಇದೆ. ಡಬಲ್ ಸಂಪರ್ಕ ಇದ್ದರೆ 30 ದಿನಗಳ ಬಳಿಕ ಮತ್ತೊಂದು ಸಿಲಿಂಡರ್‌ಗೆ ಬುಕ್ಕಿಂಗ್ ಮಾಡಬಹುದು. ಗ್ರಾಹಕರು ತಮ್ಮ ಮೊಬೈಲ್ ಮೂಲಕ ಬುಕ್ಕಿಂಗ್ ಮಾಡಬೇಕು. ಅದೇ ಮೊಬೈಲ್‌ಗೆ ಒಟಿಪಿ ಬರುತ್ತಿದೆ. ಇವತ್ತಿನ ಗೃಹ ಬಳಕೆಯ ಸಿಲಿಂಡರ್ ಬಲೆ 939 ರೂ. ಕಟ್ಟಬೇಕು. ವಾರ್ಷಿಕ 12 ಸಿಲಿಂಡರ್ ಇದ್ದು, ಇದರಲ್ಲಿ 7 ಸಿಲಿಂಡರ್‌ಗೆ ಸಬ್ಸಿಡಿ ಇರುತ್ತದೆ. 8ನೇ ಸಿಲಿಂಡರ್ ಪಡೆದಾಗ ಪೂರ್ಣ ಬೆಲೆ ಕಟ್ಟಬೇಕಾಗುತ್ತದೆ. ಸದ್ಯ ಜಿಲ್ಲೆಯಲ್ಲಿ ಸಿಲಿಂಡರ್ ಸಮಸ್ಯೆ ಇಲ್ಲ. ಯಾರೂ ಗ್ರಾಹಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಜನರಲ್ಲಿ ಮನವಿ ಮಾಡಿದ್ದಾರೆ.