ಬಾಗಲಕೋಟೆ ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ಕುರಿತು ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾಹಿತಿ ನೀಡಿದರು. ಸಮಿತಿ ಉಪ ಕಾರ್ಯಾಧ್ಯಕ್ಷ ಮಹೇಶ ಅಥಣಿ, ಪ್ರಧಾನ ಕಾರ್ಯದರ್ಶಿ ಜಿ.ಎನ್. ಪಾಟೀಲ ಇದ್ದರು. 
ಬಾಗಲಕೋಟೆ

ನಿರಂಜನ ಚರಪಟ್ಟಾಧಿಕಾರ ಮಹೋತ್ಸವ

ಪ್ರಮುಖ ಮುಖ್ಯಾಂಶಗಳು

  • ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾಹಿತಿ
  • 8ರಂದು ಶ್ರೀಗಳ ಶೂನ್ಯಪೀಠಾರೋಹಣ
  • ನಿರಂಜನ ಚರಪಟ್ಟಾಧಿಕಾರ ಮಹೋತ್ಸವ
ಬಾಗಲಕೋಟೆ: ಹಾನಗಲ್ ಕುಮಾರ ಮಹಾಸ್ವಾಮಿಗಳವರ 159ನೇ ಜಯಂತಿ, ಬಾಗಲಕೋಟೆಯ ಟೀಕಿನಮಠದ ಲಿಂ. ಮಲ್ಲಿಕಾರ್ಜುನ ಸ್ವಾಮಿಗಳ ರಜತ ಪುಣ್ಯಸ್ಮರಣೆ, ಲಿಂ. ರೇವಣಸಿದ್ಧ ಸ್ವಾಮಿಗಳ ದಶಮ ಪುಣ್ಯಸ್ಮರಣೆ ಹಾಗೂ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ಫೆ. 5 ರಿಂದ 8ರವರೆಗೆ ಚರಂತಿಮಠದ ಶಿವಾನುಭ ಮಂಟಪದಲ್ಲಿ ನಾಡಿನ ವಿವಿಧ ಮಠಾಧಿಪತಿಗಳ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 5ರಂದು ಬೆಳಗ್ಗೆ 8ಕ್ಕೆ ಬೆಳಗಾವಿ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಂಜೆ 5.30ಕ್ಕೆ ಹಾನಗಲ್ ಕುಮಾರ ಸ್ವಾಮಿಗಳ ಜಯಂತಿ ಹಾಗೂ ಪುರಾಣ ಮಂಗಲ ಕಾರ್ಯಕ್ರಮ ನಡೆಯಲಿದೆ. ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಮುಂಡರಗಿ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವಿವಿಧ ಮಠಾಧೀಶರು ಹಾಗೂ ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಸಮಾಜ ಪ್ರೇಮಿ ಲಿಂ. ಹಾನಗಲ್ಲ ಕುಮಾರ ಸ್ವಾಮೀಜಿ ಹಚ್ಚಿದ ಎರಡು ನಂದಾದೀಪಗಳು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಮತ್ತು ಶ್ರೀ ಶಿವಯೋಗ ಮಂದಿರ ಸಂಸ್ಥೆ ಕುರಿತು ಪ್ರೊ. ಜಿ.ಜಿ. ಶೀಲವಂತ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಫೆ. 6ರಂದು ಬೆಳಗ್ಗೆ 10.30ಕ್ಕೆ ‘ಧರ್ಮ ತತ್ವ ಚಿಂತನ’ ಗೋಷ್ಠಿ ನಡೆಯಲಿದ್ದು, ಚರಂತಿಮಠದ ಪ್ರಭು ಸ್ವಾಮೀಜಿ, ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಲ್ಲಿಕಾರ್ಜುನ ಶಿವಾಚಾರ್ಯರು, ಶಿವಯೋಗಿ ದೇವರು, ಜಿ.ಕೆ. ಹಿರೇಮಠ ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.
ಫೆ. 6ರಂದು ಸಂಜೆ 5.30ಕ್ಕೆ ಟೀಕಿನಮಠದ ಮಲ್ಲಿಕಾರ್ಜುನ ಸ್ವಾಮಿಗಳ ರಜತ ಪುಣ್ಯಸ್ಮರಣೆ, ರೇವಣಸಿದ್ಧ ಸ್ವಾಮಿಗಳ ದಶಮ ಪುಣ್ಯಸ್ಮರಣೆಯ ಗುರುಸ್ಮರಣೆ ನಡೆಯಲಿದೆ. ಶಿವಮೊಗ್ಗ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಕನ್ನಡ ಪ್ರಾಧ್ಯಾಪಕ ಎಸ್.ಡಿ. ಕೆಂಗಲಗುತ್ತಿ ಉಪನ್ಯಾಸ ನೀಡಲಿದ್ದಾರೆ ಎಂದರು.
ಫೆ. 7ರಂದು ಬೆಳಗ್ಗೆ 8ಕ್ಕೆ ಕೆರೂರ ಚರಂತಿಮಠದ ಶಿವಕುಮಾರ ಶಿವಾಚಾರ್ಯರು ಅಯ್ಯಚಾರ, ಲಿಂಗದೀಕ್ಷೆ ನಡೆಸಿಕೊಡಲಿದ್ದಾರೆ. ಬೆಳಗ್ಗೆ 10.30ಕ್ಕೆ ‘ಸಮಾಜ ಚಿಂತನ’ ಗೋಷ್ಠಿ ನಡೆಯಲಿದ್ದು, ಕೊಪ್ಪಳ ಗವಿಮಠದ ಜಗದ್ಗುರು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕೊಟ್ಟೂರೇಶ್ವರ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ನಂದೀಶ ಹಂಜೆ, ನಿವೃತ್ತ ಪ್ರಾಧ್ಯಾಪಕ ಮೃತ್ಯುಂಜಯ ರುಮಾಲೆ, ಸಾಹಿತಿ ವಿಜಯಕುಮಾರ ಕಟಗಿಹಳ್ಳಿ ಮಠ ಉಪನ್ಯಾಸ ನೀಡಲಿದ್ದಾರೆ.
ಫೆ. 7ರಂದು ಸಂಜೆ 5.30ಕ್ಕೆ ‘ಸಂಸ್ಕೃತಿ ಚಿಂತನ’ ಗೋಷ್ಠಿ ನಡೆಯಲಿದ್ದು, ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ, ಹುಬ್ಬಳ್ಳಿ ಶಾಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಉಪ್ಪಿನ ಬೆಟಗೇರಿಯ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಗುರುದೇವಿ ಹುಲೆಪ್ಪನವರಮಠ, ಸುನಂದಾ ಎಮ್ಮಿ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಫೆ. 8ರಂದು ಬೆಳಗ್ಗೆ ಕಲಬುರಗಿಯ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ ಅವರಿಂದ ಮಲ್ಲಿಕಾರ್ಜುನ ದೇಶಿಕರ ಅವರಿಗೆ ಷಟ್‌ಸ್ಥಳ ಬ್ರಹ್ಮೋಪದೇಶ ನಡೆಯಲಿದೆ. ಬೆಳಗ್ಗೆ 9ಕ್ಕೆ ಶೂನ್ಯಪೀಠಾರೋಹಣ ನಡೆಯಲಿದ್ದು, ವಿವಿಧ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ಬೆಳಗ್ಗೆ 11ಕ್ಕೆ ಬೀಳೂರು ಅಜ್ಜನವರ ದೇವಸ್ಥಾನದಿಂದ ಶಿವಾನುಭವ ಮಂಟಪದವರೆಗೆ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಜಿ.ಎನ್. ಪಾಟೀಲ, ಮಹೋತ್ಸವ ಸಮಿತಿ ಉಪ ಕಾರ್ಯಾಧ್ಯಕ್ಷ ಮಹೇಶ ಅಥಣಿ, ಅಶೋಕ ಸಜ್ಜನ, ಮಹಾಂತೇಶ ಶೆಟ್ಟರ, ಗುರುಬಸವ ಸೂಳಿಭಾವಿ, ಎ.ಎಸ್. ಪಾವಟೆ ಮತ್ತಿತರರು ಇದ್ದರು.

ವಿರಾಟಪುರದ ವಿರಾಗಿ ಚಿತ್ರ ಪ್ರದರ್ಶನ

ಫೆ. 4ರಂದು ಸಂಜೆ 4 ಕ್ಕೆ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಹಾನಗಲ್ ಕುಮಾರ ಸ್ವಾಮೀಜಿ ಅವರ ಕುರಿತ ‘ವಿರಾಟಪುರದ ವಿರಾಗಿ’ ಚಲನಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ಪಟ್ಟಾಧಿಕಾರಿ ಮಹೋತ್ಸವದ ಸಿದ್ಧತೆಗಳು ಭರದಿಂದ ಸಾಗಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸದ್ಯ ನಡೆದಿರುವ ಪುರಾಣಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಳ್ಳುತ್ತಿದ್ದು, ಪ್ರತಿ ದಿನ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಚರಂತಿಮಠ ತಿಳಿಸಿದರು.