ಕಲಾದಗಿ ಸಮೀಪದ ಹೆರಕಲ್ ಏತನೀರಾವರಿ (ದಕ್ಷಿಣ) ಜಾಕ್‌ವೆಲ್‌ನಲ್ಲಿ ಪರಿಣಿತರ ತಂಡ ಹೊಸ ಟಿಸಿ ಅಳವಡಿಕೆ ಕಾರ್ಯದಲ್ಲಿ ತೊಡಗಿರುವುದು.
- ಮುಂದಿನ ವಾರ ಕೆರೆಗಳಿಗೆ ನೀರು ಹರಿಸುವ ನಿರೀಕ್ಷೆ
- ಪರಿಣಿತರ ತಂಡದಿಂದ ಜೋಡಣೆ
- ಪೂರ್ಣರೈತರಲ್ಲಿ ಹೊಸ ಆಶಾಭಾವ
ಈ ಭಾಗದ ರೈತರ ಜೀವನಾಡಿಯಾಗಿರುವ ಕಳಸಕೊಪ್ಪ ಕೆರೆಯನ್ನು ತುಂಬಿಸುವ ಉದ್ದೇಶದಿಂದ ಹೆರಕಲ್ ಏತನೀರಾವರಿ (ದಕ್ಷಿಣ) ಜಾಕ್‌ವೆಲ್‌ಗೆ ಪರ್ಯಾಯ ಟ್ರಾನ್‌ಸ್ಾರ್ಮರ್ (ಟಿಸಿ) ಯಶಸ್ವಿಯಾಗಿ ತರಲಾಗಿದ್ದು, ಅಳವಡಿಕೆ ಕಾರ್ಯವೂ ಪೂರ್ಣಗೊಂಡಿದೆ. ಇದರಿಂದ ನೀರಿನ ನಿರೀಕ್ಷೆಯಲ್ಲಿದ್ದ ರೈತರ ಮುಖದಲ್ಲಿ ಸಂತಸ ಮೂಡಿದೆ.
ಜಾಕ್‌ವೆಲ್‌ನಲ್ಲಿದ್ದ ಹಳೆಯ ಟಿಸಿ ಸುಟ್ಟ ಹಿನ್ನೆಲೆ ನೀರು ಹರಿಸುವ ಕಾರ್ಯ ಸ್ಥಗಿತಗೊಂಡಿತ್ತು. ಬಳಿಕ ಕೆಬಿಜೆಎನ್‌ಎಲ್ ಅಧಿಕಾರಿಗಳು ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಏತನೀರಾವರಿ ಯೋಜನೆಯಿಂದ ಪರ್ಯಾಯ ಟಿಸಿಯನ್ನು ತರಲು ಕ್ರಮ ಕೈಗೊಂಡರು. ಬುಧವಾರವೇ ಲಾರಿಯಲ್ಲಿ ಸಾಗಿಸಲಾಗಿದ್ದ ಟಿಸಿ ಮಳೆಯಿಂದಾಗಿ ಮಧ್ಯದಲ್ಲೇ ಸಿಲುಕಿದರೂ, ಅಡೆತಡೆಗಳನ್ನು ನಿವಾರಿಸಿ ಶುಕ್ರವಾರ ಮುಂಜಾನೆ ಹೆರಕಲ್ ಜಾಕ್‌ವೆಲ್‌ಗೆ ತಲುಪಿಸಲಾಯಿತು.
ಬೆಳಗಾವಿಯಿಂದ ಆಗಮಿಸಿದ ಪರಿಣಿತರ ತಂಡ ಯಾವುದೇ ಭಾರೀ ಯಂತ್ರೋಪಕರಣ ಬಳಸದೆ, ತಾಂತ್ರಿಕ ಪರಿಣತಿಯಿಂದ ಹಳೆಯ ಟಿಸಿಯನ್ನು ತೆರವುಗೊಳಿಸಿ ಹೊಸ ಟಿಸಿಯನ್ನು ಯಶಸ್ವಿಯಾಗಿ ಅಳವಡಿಸಿತು. ಈ ಕಾರ್ಯ ಶುಕ್ರವಾರ ಸಂಜೆ ವೇಳೆಗೆ ಪೂರ್ಣಗೊಂಡಿದೆ.
ಈಗ ಟಿಸಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಚಾಲನೆ ನೀಡುವ ಅಂತಿಮ ಹಂತದ ಕೆಲಸ ಮಾತ್ರ ಬಾಕಿಯಿದೆ. ಹುಬ್ಬಳ್ಳಿಯಿಂದ ಆಗಮಿಸುವ ತಜ್ಞರ ತಂಡ ಶನಿವಾರದಿಂದ ಈ ಕಾರ್ಯ ಆರಂಭಿಸಲಿದ್ದು, ಎರಡು ದಿನಗಳಲ್ಲಿ ಪರೀಕ್ಷೆ ಹಾಗೂ ಚಾಲನಾ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಟಿಸಿ ಕಾರ್ಯಾರಂಭವಾದ ತಕ್ಷಣ ಕಳಸಕೊಪ್ಪ ಕೆರೆ ಸೇರಿ ಸುತ್ತಮುತ್ತಲಿನ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭಿಸಲಾಗುವುದು. ಮುಂದಿನ ವಾರವೇ ಯೋಜನೆ ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಇದ್ದು, ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ಇದು ಆಶಾಕಿರಣವಾಗಿದೆ.
-ಜೆ.ಟಿ. ಪಾಟೀಲ, ಶಾಸಕ