ಕಾರಿನಲ್ಲಿ ಸಿಕ್ಕ ಮಕ್ಕಳು ಆಟವಾಡಲು ಬಳಸುವ ಐದುನೂರು ಮುಖಬೆಲೆಯ ನೋಟುಗಳು. 
ಬಾಗಲಕೋಟೆ

ಡಬ್ಲಿಂಗ್ ವಂಚಕರ ಜಾಲ ಪತ್ತೆ

ಪ್ರಮುಖ ಮುಖ್ಯಾಂಶಗಳು

  • ಆರೋಪಿ, ಕಾರು ವಶಕ್ಕೆ
  • ಮೂವರು ಪರಾರಿ
  • ಮಕ್ಕಳ ಆಟದ 500 ಮುಖಬೆಲೆ ನೋಟುಗಳು ಪತ್ತೆ
ಮುಧೋಳ: ತಾಲೂಕಿನ ಮಂಟೂರ ಬೈಪಾಸ್ ಬಳಿ ನೂರು ರೂ. ಕೊಟ್ಟರೆ ಮುನ್ನೂರು ರೂ. ಕೊಡುತ್ತೇವೆ ಎಂದು ಹೇಳಿ ಜನತೆಯನ್ನು ವಂಚಿಸುತ್ತಿದ್ದ ಡಬ್ಲಿಂಗ್ ವಂಚಕರ ಜಾಲವೊಂದು ಜನತೆಯ ಸಹಕಾರದಿಂದ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಬೆಳಗಾವಿಯ ರಾಯಭಾಗ ಕಡೆಯಿಂದ ಬರುತ್ತಿದ್ದ ಮಹಾರಾಷ್ಟ್ರ ಪಾಸಿಂಗ್ ಹೊಂದಿದ್ದ ಕಾರನ್ನು ಸಂಶಯದಿಂದ ಸಾರ್ವಜನಿಕರು ತಡೆಯಲೆತ್ನಿಸಿದಾಗ ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಕಾರು ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಆಗ ಜನರು ಕಾರಿನ ಮೇಲೆ ಕಲ್ಲು ಎಸೆದಿದ್ದಾರೆ. ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ತಪ್ಪಿಸಿಕೊಂಡಿದ್ದು, ಒಬ್ಬನನ್ನು ಸಾರ್ವಜನಿಕರು ಹಿಡಿದುಕೊಂಡಿದ್ದಾರೆ.
ಮುಧೋಳ ಪೊಲೀಸರು ಸ್ಥಳಕ್ಕೆ ಬಂದು ಕಾರನ್ನು ತಪಾಸಣೆ ನಡೆಸಿದಾಗ ಕಾರಿನಲ್ಲಿ ಮಕ್ಕಳು ಆಟವಾಡುವ ಐದು ನೂರು ರೂ. ಮುಖಬೆಲೆಯ ನೋಟುಗಳು ಕಂಡುಬಂದಿದ್ದು, ಈ ತಂಡವು ಹಣವನ್ನು ಡಬ್ಲಿಂಗ್ ಮಾಡಿಕೊಡುವ ಆಮಿಷವೊಡ್ಡಿ ಜನತೆಯನ್ನು ಯಾಮಾರಿಸುತ್ತಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ. ಕಾರಿನಲ್ಲಿ ಕರ್ನಾಟಕದ ನಂಬರ್ ಪ್ಲೇಟ್ (ಕೆಎ-48-ಎನ್-4044) ದೊರೆತಿದೆ. ಸದ್ಯ ಪೊಲೀಸರು ಸಿಕ್ಕಿ ಬಿದ್ದಿರುವ ಆರೋಪಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.