ಕಮತಗಿ ಶಹರ ಗಜಾನನ ವೇದಿಕೆ ಸಮೀಪ ವಿದ್ಯಾಪೀಠ ಶಿಕ್ಷಣ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ನಡೆಯುತ್ತಿರುವ ಪಂಡಿತ ಪುಟ್ಟರಾಜ ಗವಾಯಿ ಸಂಗೀತ ಪಾಠಶಾಲೆಯ 4ನೇ ವಾರ್ಷಿಕೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ಗಾನ ಗಾರುಡಿಗ ವೈಭವ ಕಾರ್ಯಕ್ರಮದಲ್ಲಿ ಗಣ್ಯರು ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
- ಕಮತಗಿಯಲ್ಲಿ ಪಂಡಿತ ಪುಟ್ಟರಾಜ ಗವಾಯಿ
- ಸಂಗೀತ ಪಾಠಶಾಲೆಯ 4ನೇ ವಾರ್ಷಿಕೋತ್ಸವ
ಕಮತಗಿ: ಮಕ್ಕಳಿಗೆ ಪಾಠ್ಯ ಶಿಕ್ಷಣದ ಜತೆಗೆ ಸಂಗೀತ ಮತ್ತು ಸಾಹಿತ್ಯದತ್ತವೂ ಆಸಕ್ತಿ ಬೆಳೆಸುವಂತೆ ಪಾಲಕರು ಪ್ರೋತ್ಸಾಹಿಸಬೇಕು ಎಂದು ಜಯಾ ಕ್ಲಿನಿಕ್ ವೈದ್ಯ ಡಾ. ಆರ್.ಟಿ. ದೇಶಪಾಂಡೆ ಸಲಹೆ ನೀಡಿದರು.
ಪಟ್ಟಣದ ಶಹರ ಗಜಾನನ ವೇದಿಕೆ ಸಮೀಪ ವಿದ್ಯಾಪೀಠ ಶಿಕ್ಷಣ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ನಡೆಯುತ್ತಿರುವ ಪಂಡಿತ ಪುಟ್ಟರಾಜ ಗವಾಯಿ ಸಂಗೀತ ಪಾಠಶಾಲೆಯ 4ನೇ ವಾರ್ಷಿಕೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ಗಾನ ಗಾರುಡಿಗ ವೈಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಗೀತವು ಮನಸ್ಸಿಗೆ ಆನಂದ ಮತ್ತು ಶಾಂತಿಯನ್ನು ನೀಡುವ ಶಕ್ತಿಯನ್ನು ಹೊಂದಿದ್ದು, ವಿಶೇಷವಾಗಿ ವಿಕಲಚೇತನರಿಗಾಗಿ ಆರಂಭಿಸಿರುವ ಈ ಸಂಗೀತ ಪಾಠಶಾಲೆ ಕಮತಗಿಯ ಹೆಮ್ಮೆ. ಸಂಸ್ಥೆಯ ಬೆಳವಣಿಗೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಸವರಾಜ ಕುಂಬಳಾವತಿ ಮಾತನಾಡಿ, ಸಂಗೀತವು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಭಾವನಾತ್ಮಕ ಸಮತೋಲನ ಕಾಪಾಡುವ ಮಹತ್ವದ ಮಾಧ್ಯಮವಾಗಿದೆ ಎಂದು ಹೇಳಿದರು.
ಕಮತಗಿ ಹಿರೇಮಠದ ಶಿವಕುಮಾರ ಮಹಾಸ್ವಾಮಿಜಿ, ಮಾತೋಶ್ರೀ ಬಸವಣೆಮ್ಮತಾಯಿ ಬಸರಕೋಡ ದಿವ್ಯ ಸಾನ್ನಿಧ್ಯ ವಹಿಸಿದ್ದರು. ವಿದ್ಯಾಪೀಠ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವಂತಪ್ಪ ಬಿಜಾಪೂರ ಅಧ್ಯಕ್ಷತೆ ವಹಿಸಿದ್ದರು. ಪಾರ್ವತಿ ಬ್ಯಾಂಕ ಅಧ್ಯಕ್ಷ ಎಸ್.ಎಸ್. ಮಂಕಣಿ, ಪಿಕೆಪಿಎಸ್ ಅಧ್ಯಕ್ಷ ಸಿದ್ದು ಹೊಸಮನಿ, ಸುರೇಶ ಹಳ್ಳದ, ನಾಗೇಶ ಹುಲ್ಲೂರ, ಅಶೋಕ ಚಿತ್ರಗಾರ, ಕಾಶಿಬಾಯಿ ರಾಜಾಪೂರ, ಪಿ.ಜಿ ಬಾಳಕ್ಕನವರ, ಪ್ರಲ್ಲಾದ ಮುನವಳ್ಳಿ, ಮೋತಿಲಾಲ ರಾಠೋಡ,ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಮನೋಜ್ಞ ಸಂಗೀತ ಕಾರ್ಯಕ್ರಮ ಪ್ರದರ್ಶಿಸಲಾಯಿತು.