ತೇರದಾಳ ಪಟ್ಟಣದ ಪುರಸಭೆಗೆ ಶಾಸಕ ಸಿದ್ದು ಸವದಿ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತೇರದಾಳ: ಆಸ್ತಿ ತೆರಿಗೆ ನೀರಿನ ಕರ ಪಾವತಿಸಲು ಪುರಸಭೆ ಹೋದರು ಸಿಬ್ಬಂದಿ ಯಾರು ಸ್ಪಂದಿಸುತ್ತಿಲ್ಲ ಅಂತ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕ ಸಿದ್ದು ಸವದಿ ಮಂಗಳವಾರ ಪುರಸಭೆಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳು, ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ತೆರಿಗೆ ಹಣ ಪಾವತಿಸಿ ಎಂದು ನೀವೆ ಹೇಳುತ್ತೀರಿ. ಸಾರ್ವಜನಿಕರು ತೆರಿಗೆ ಪಾವತಿಸಲು ಪುರಸಭೆಗೆ ಬಂದರೆ ಯಾರು ಇರುವುದಿಲ್ಲ. ಇದೆಂಥ ವ್ಯವಸ್ಥೆ ಅಂತ ಶಾಸಕ ಸವದಿ ಕಿಡಿಕಾರಿದರು. ತೆರಿಗೆ ಸಿಬ್ಬಂದಿ ಒಬ್ಬನೆ ಇದ್ದಿದ್ದರಿಂದ ತೊಂದರೆ ಆಗುತ್ತಿರುವ ಬಗ್ಗೆ ಮುಖ್ಯಾಧಿಕಾರಿ ಹೇಳುತ್ತಿದ್ದಂತೆ ಸ್ಥಳದಲ್ಲಿದ್ದ ಸಾರ್ವಜನಿಕರು 8-10 ದಿನಗಳಿಂದ ಬರುತ್ತಿದ್ದೇವೆ ಸುಳ್ಳು ಹೇಳುತ್ತಿದ್ದಾರೆ. ಕೆಲಸ ಬಿಟ್ಟು ಬಿಸಿಲಿನಲ್ಲಿ ಬಂದು ನಿಂತಿದ್ದೇವೆ. ಯಾರು ಏಕೆ ಬಂದಿದ್ದೀರಿ ಎಂದು ಕೇಳುವವರು ದಿಕ್ಕು ಕೂಡ ಇಲ್ಲ ಎಂದು ಸಿಬ್ಬಂದಿ ವಿರುದ್ಧ ಆರೋಪಿಸಿದರು.
ಈಗ ಕಚೇರಿ ಸಮಯ ಬೆಳಗ್ಗೆ 8 ಗಂಟೆಗೆ. ಆದರೆ 11 ಗಂಟೆಗೆ ಬಂದು 1ಗಂಟೆಗೆ ಹೋಗುತ್ತಾರೆ. ಏಪ್ರಿಲ್-ಮೇ ತಿಂಗಳಲ್ಲಿ ತೆರಿಗೆ ರಿಯಾಯಿತಿ ಹೇಳುತ್ತಾರೆ. ಆದರೆ ತೆರಿಗೆ ಹಣ ಪಾವತಿಸಲು ಬಂದರೆ ತುಂಬಿಸಿಕೊಳ್ಳುಲು ಸಿಬ್ಬಂದಿಗಳೆ ಇಲ್ಲ ಎಂದು ಸಾರ್ವಜನಿಕರು ತಮ್ಮ ಆಕ್ರೋಶ ಹೊರ ಹಾಕಿದರು.
ಪುರಸಭೆ ಆಡಳಿತಾಧಿಕಾರಿ, ಜಮಖಂಡಿ ಉಪವಿಭಾಗಾಧೀಕಾರಿ ಶ್ವೇತಾ ಬೀಡಿಕರ ಅವರಿಗೆ ಶಾಸಕ ಸಿದ್ದು ಸವದಿ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿ, ಸಾರ್ವಜನಿಕರು ತೆರಿಗೆ ಹಣ ಪಾವತಿಸಲು ಬಂದರೆ ತುಂಬಿಸಿಕೊಳ್ಳಲು ಯಾರು ಇಲ್ಲದಷ್ಟು ಹದೆಗೆಟ್ಟು ಹೋಗಿದೆ ತೇರದಾಳ ಪುರಸಭೆ ಪರಸ್ಥಿತಿ. ಮೊದಲು ತಾವು ಭೇಟಿ ನೀಡಿ ಸಿಬ್ಬಂದಿ ಸಭೆ ನಡೆಸಿ. ನಾನು ಬರುತ್ತೇನೆ ಎಂದು ತಿಳಿಸಿದರು.