ತೇರದಾಳ ಪಟ್ಟಣದ ತಮದಡ್ಡಿ ನಾಕಾ ಬಳಿಯ ಪುರಸಭೆ ನಿರ್ಮಿಸಿದ್ದ ಮಳಿಗೆಗಳ ಮೇಲಿನ ಪತ್ರಾಸ್‌ಗಳನ್ನು ಹಾಗೂ ಗೋಡೆಗಳನ್ನು ಕಿಡಗೇಡಿಗಳು ಹಾನಿಗೊಳಿಸಿರುವುದು. 
ಬಾಗಲಕೋಟೆ

ಕಿಡಿಗೇಡಿಗಳಿಂದ ಪುರಸಭೆ ಕಟ್ಟಡ ನೆಲಸಮ

ಪ್ರಮುಖ ಮುಖ್ಯಾಂಶಗಳು

  • ಸ್ಥಳಕ್ಕೆ ಮುಖ್ಯಾಧಿಕಾರಿ ಇರ್ಫಾನ್ ಝಾರೆ ಭೇಟಿ
  • ಸಾರ್ವಜನಿಕರ ಆಕ್ರೋಶ
ತೇರದಾಳ: ಪಟ್ಟಣದ ತಮದಡ್ಡಿ ನಾಕಾ ಬಳಿ ಪುರಸಭೆ ನಿರ್ಮಿಸಿದ್ದ ಮಳಿಗೆಗಳ ಮೇಲಿನ ಪತ್ರಾಸ್‌ಗಳನ್ನು ಹಾಗೂ ಗೋಡೆಗಳನ್ನು ಕಿಡಿಗೇಡಿಗಳು ಜೆಸಿಬಿ ಮುಖಾಂತರ ಒಡೆದಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಗುರುವಾರ ಬೆಳಗ್ಗೆ ಅಲ್ಲಿನ ಸಾರ್ವಜನಿಕರು ಹಾಗೂ ಕೆಲ ವ್ಯಾಪಾರಸ್ಥರು ಪುರಸಭೆಗೆ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಬಳಿಕ ಮುಖ್ಯಾಧಿಕಾರಿ ಇರ್ಫಾನ್ ಝಾರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳಿಗೆಗಳನ್ನು ಯಾವ ಕಾರಣಕ್ಕೆ ಒಡೆದಿದ್ದಾರೆ ಎಂಬುವುದು ತಿಳಿದಿಲ್ಲ. ಘಟನೆ ಕುರಿತು ಪೊಲೀಸ್ ಠಾಣೆಗೆ ವರದಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮಾಜಿ ಸದಸ್ಯನ ಕೈವಾಡ

ಮಳಿಗೆಗಳನ್ನು ನಿರ್ಮಿಸಿ ಹಲವು ವರ್ಷಗಳಾಗಿತ್ತು. ಆದರೆ ಕೆಲವೊಂದು ಸಮಸ್ಯೆಗಳ ಕಾರಣ ಅವುಗಳನ್ನು ಬಾಡಿಗೆ ಹಿಡಿಯಲು ವ್ಯಾಪಾರಸ್ಥರು ಹಿಂದೇಟು ಹಾಕಿದ್ದರು. ಇದರಿಂದ ಮಳಿಗೆಗಳು ಖಾಲಿ ಬಿದ್ದಿದ್ದವು. ಮಳಿಗೆಗಳನ್ನು ಒಡೆಯಲು ಪುರಸಭೆ ಮಾಜಿ ಸದಸ್ಯನೊಬ್ಬನ ಕೈವಾಡ ಇದೆ ಅಂತ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಜಾಗ ಅತಿಕ್ರಮಣ ಮಾಡುವ ಉದ್ದೇಶದಿಂದ ಮಳಿಗೆಗಳನ್ನು ಒಡೆಯುವ ಕೆಲಸ ಮಾಡಿರಬಹುದು ಎಂದು ಶಂಕಿಸಲಾಗಿದ್ದು, ಘಟನೆ ಕುರಿತು ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುವುದು ಕಾದು ನೋಡಬೇಕಿದೆ.
"

ಪುರಸಭೆ ಆಸ್ತಿಯನ್ನು ಒಡೆದು ಹಾಕುವಷ್ಟು ಕಿಡಗೇಡಿಗಳು ಮುಂದುವರಿದಿದ್ದಾರೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ÷್ಯವೇ ಕಾರಣ. ಮಳಿಗೆಗಳನ್ನು ಒಡೆದವರು ಯಾರೇ ಆಗಿರಲಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಈ ಕುರಿತು ಪೊಲೀಸರು ಕೂಡ ತಪ್ಪಿತಸ್ಥರನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಪುರಸಭೆ ಮುಂದೆ ಧರಣಿ ನಡೆಸಲಾಗುವುದು.

— | ಹನಮಂತ ರೋಡನ್ನವರ, ಪುರಸಭೆ ಮಾಜಿ ಅಧ್ಯಕ್ಷ