ಬಾಗಲಕೋಟೆ ನಗರದಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಉಮೇಶ ಮೇಟಿ ಪರ ಫೋಟೋ ಪ್ರದರ್ಶಿಸಿದ ಕಾರ್ಯಕರ್ತರು. 
ಬಾಗಲಕೋಟೆ

ಉಪ ಸಮರಕ್ಕೆ ಮುಹೂರ್ತ ಫಿಕ್ಸ್...!

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಎಚ್.ವೈ. ಮೇಟಿ ನಿಧನ ಬಳಿಕ ತೆರವಾಗಿದ್ದ ಕ್ಷೇತ್ರ
  • ಬಿಜೆಪಿ-ಕಾಂಗ್ರೆಸ್ ನಲ್ಲಿ ಹೆಚ್ಚಿದ ಕಾವು
  • ಬಿತ್ತಿಪತ್ರಗಳನ್ನು ತೆರವುಗೊಳಿಸುವ ಕಾರ್ಯ ಭಾನುವಾರ ಸಂಜೆಯಿಂದ ಆರಂಭಗೊಂಡಿತ್ತು
ಬಾಗಲಕೋಟೆ: ಬಹು ದಿನಗಳಿಂದ ಕಾಯುತ್ತಿದ್ದ ಬಾಗಲಕೋಟೆ ಉಪ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದ್ದು, ಕಾಂಗ್ರೆಸ್-ಬಿಜೆಪಿಯಲ್ಲಿ ಚುನಾವಣೆ ಚಟುವಟಿಕೆಗಳು ಗರಿಗೆದರಿವೆ. ಚುನಾವಣೆ ಆಯೋಗ ದಿನಾಂಕ ೋಷಣೆ ಮಾಡುತ್ತಿದ್ದಂತೆ ಕ್ಷೇತ್ರದಲ್ಲಿ ಹಲ್‌ಚಲ್ ಸೃಷ್ಟಿಯಾಗಿದೆ.
ಬಾಗಲಕೋಟೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅಳವಡಿಸಲಾಗಿದ್ದ ರಾಜಕೀಯ ನಾಯಕರ ಕಟೌಟ್ ಬ್ಯಾನರ್, ಸರ್ಕಾರಿ ಕಾರ್ಯಕ್ರಮದ ಬಿತ್ತಿಪತ್ರಗಳನ್ನು ತೆರವುಗೊಳಿಸುವ ಕಾರ್ಯ ಭಾನುವಾರ ಸಂಜೆಯಿಂದ ಆರಂಭಗೊಂಡಿತ್ತು. ಮಾ. 16 ರಂದು ಅಧಿಸೂಚನೆ ಪ್ರಕಟಗೊಳ್ಳಲಿದ್ದು, ಚುನಾವಣೆ ಆಯೋಗವು ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
ಬಾಗಲಕೋಟೆ ನಗರದ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರಸಭೆ ಎದುರು ಸೇರಿ ವಿವಿಧೆಡೆ ಅಳವಡಿಸಲಾಗಿದ್ದ ಬ್ಯಾನರ್, ಕಟೌಟ್‌ಗಳನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿದರು. ಈಗಾಗಲೇ ಜಿಲ್ಲಾ ಚುನಾವಣಾ ಅಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಸಂಗಪ್ಪ ಅವರು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿ ಕರಡು ಮತದಾರರ ಪಟ್ಟಿ ಪ್ರಕಟಿಸಿದ್ದು, ಆಕ್ಷೇಪಣೆ ಸಲ್ಲಿಕೆಗೂ ಅವಕಾಶ ನೀಡಿದ್ದರು. ಇದಲ್ಲದೇ ಬಿಎಲ್‌ಒಗಳು, ಸೆಕ್ಟರ್ ಅಧಿಕಾರಿಗಳ ಸಭೆ ನಿರಂತರ ನಡೆಸಿದ್ದು, ಚುನಾವಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಇನ್ನೂ 25 ದಿನಗಳ ಕಾಲ ಮಾತ್ರ ಸಮಯವಿದ್ದು, ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಚುನಾವಣೆ ಒತ್ತಡಕ್ಕೆ ಸಿಲುಕಿವೆ. ಅಬ್ಬರದ ಪ್ರಚಾರ, ಭಾಷಣದ ಮೂಲಕ ಚುನಾವಣೆಯ ಗುಂಗು ರಂಗು ಪಡೆಯಲಿದೆ. ಅಭ್ಯರ್ಥಿ ಆಯ್ಕೆ, ನಾಮಪತ್ರ ಸಲ್ಲಿಕೆ, ಹಿಂಪಡೆಯುವುದು, ಪ್ರಚಾರ, ಮತಯಾಚನೆ ಮತ್ತಷ್ಟು ಹುರುಪು ತುಂಬಲಿದೆ.

2.59 ಲಕ್ಷ ಮತದಾರರು

ಬಾಗಲಕೋಟೆ ವಿಧಾನಸಭಾ ಚುನಾವಣೆಗೆ 1.26 ಲಕ್ಷ ಪುರುಷ ಮತದಾರರು, 1.32 ಲಕ್ಷ ಮಹಿಳಾ ಮತದಾರರು, 23 ತೃತೀಯ ಲಿಂಗಿ ಮತದಾರರು ಸೇರಿ ಒಟ್ಟು 2.59 ಲಕ್ಷ ಮತದಾರರು ಇದ್ದಾರೆ. ಈ ಬಾರಿ 4188 ಯುವ ಮತದಾರರು ಸೇರ್ಪಡೆಗೊಂಡಿದ್ದು, ಈ ಪೈಕಿ 2002 ಪುರುಷ, 2186 ಮಹಿಳಾ ಮತದಾರರು ಇದ್ದಾರೆ. 1532 ಪುರುಷ, 1101 ಸೇರಿ 2633 ಅಂಗವಿಕಲ ಮತದಾರರು, 1264 ಪುರುಷ, 1753 ಮಹಿಳೆಯರು ಸೇರಿ 3017 85 ವರ್ಷ ದಾಟಿದ ಮತದಾರರು ಇದ್ದಾರೆ. ಇನ್ನೂ 100 ವರ್ಷ ದಾಟಿ 12 ಪುರುಷ, 26 ಮಹಿಳಾ ಮತದಾರರು ಸೇರಿ ಒಟ್ಟು 38 ಮತದಾರರು ಇದ್ದಾರೆ.

319 ಮತಗಟ್ಟೆ

ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ನಗರ ಪ್ರದೇಶದಲ್ಲಿ 143, ಗ್ರಾಮೀಣ ಪ್ರದೇಶದಲ್ಲಿ 176 ಸೇರಿ 187 ಸ್ಥಳಗಳಲ್ಲಿ ಒಟ್ಟು 319 ಮತಗಟ್ಟೆಗಳು ಇರಲಿವೆ.

ಯಾವ ದಿನಾಂಕ ಏನೇನು..?

ಮಾ.16ರಂದು ಚುನಾವಣೆಗೆ ಅಧಿಸೂಚನೆ ಹೊರಡಲಿದೆ. ನಾಮಪತ್ರ ಸಲ್ಲಿಕೆಗೆ ಮಾ. 23 ಕೊನೆ ದಿನವಾಗಿದೆ. ಮಾ. 24 ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಮಾ. 26 ಕೊನೆ ದಿನವಾಗಿದೆ. ಏ. 9ರಂದು ಮತದಾನ ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ. ಮೇ 6 ರಂದು ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ.
ಉಪ ಚುನಾವಣೆಗೆ ಬಿಜೆಪಿ ಪಕ್ಷದಲ್ಲಿ ಯಾವುದೇ ರೀತಿ ಟಿಕೆಟ್ ೈಟ್ ಕಂಡು ಬಂದಿಲ್ಲ. ಮಾಜಿ ಶಾಸಕ ವೀರಣ್ಣ ಚರಂತಿಮಠ ಬಿಜೆಪಿ ಹುರಿಯಾಳು ಆಗುವುದು ಬಹುತೇಕ ಖಚಿತವಾಗಿದೆ. ಬಿಜೆಪಿ ಪಕ್ಷವು ಈಗಾಗಲೇ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಬಿ. ಶ್ರೀರಾಮಲು, ಮುರುಗೇಶ ನಿರಾಣಿ, ಹಿರಿಯ ನಾಯಕರಾದ ಎನ್. ಮಹೇಶ, ರಾಜೀವ ಕುಡಚಿ, ಶಶಿಕಲಾ ಜೊಲ್ಲೆ, ಮಾನಪ್ಪ ವಜ್ಜಲ, ಹರೀಶ ಪೂಂಜಾ, ಪ್ರತಾಪ ಸಿಂಹ, ಎ.ಎಸ್. ಪಾಟೀಲ ನಡಹಳ್ಳಿ, ಅರುಣ ಶಹಾಪುರ ಸೇರಿದಂತೆ 15 ಜನರ ತಂಡವನ್ನು ನೇಮಕ ಮಾಡಿದೆ.

ಅಂತಿಮವಾಗದ ಕಾಂಗ್ರೆಸ್‌ನಲ್ಲಿ ಟಿಕೆಟ್

ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಇನ್ನು ಅಂತಿಮವಾಗಿಲ್ಲ. ಶನಿವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಕ್ಷೇತ್ರ ಆಗಮಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು ಕೈ ಟಿಕೆಟ್ ೋಷಣೆ ಮಾಡಲಿಲ್ಲ. ಪಕ್ಷದ ಅಭ್ಯರ್ಥಿ ಹೈಕಮಾಂಡ್ ನಿರ್ಧಾರ ಮಾಡಲಿದೆ ಅಂತ ತೆರೆ ಎಳೆದು ಹೋದರು. ಆದರೆ ಮೇಟಿ ಕುಟುಂಬದಲ್ಲಿನ ಇಬ್ಬರು ಪುತ್ರರಾದ ಮಲ್ಲಿಕಾರ್ಜುನ ಮೇಟಿ, ಉಮೇಶ ಮೇಟಿ ಅವರಿಗೆ ಯಾರಿಗೆ ಟಿಕೆಟ್ ಸಿಗಲಿದೆ ಎನ್ನುವುದು ಖಚಿತವಾಗಿಲ್ಲ.
ಈ ನಡುವೆ ಕೆಪಿಸಿಸಿ ಉಪ ಚುನಾವಣೆಗೆ ಉಸ್ತುವಾರಿ ಸಮಿತಿ ನೇಮಕಗೊಳಿಸಿದೆ. ವಿ.ಪ. ಸದಸ್ಯ ವಸಂತಕುಮಾರ, ಸಚಿವರಾದ ಆರ್.ಬಿ. ತಿಮ್ಮಾಪೂರ, ಸತೀಶ ಜಾರಕಿಹೊಳಿ, ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಶಿವರಾಜ ತಂಗಡಗಿ, ಶರಣಬಸಪ್ಪ ದರ್ಶನಾಪುರ, ಭೈರತಿ ಸುರೇಶ, ರಹಿಂಖಾನ್, ಶಾಸ ಸಿ.ಎಸ್. ನಾಡಗೌಡ, ಮಾಜಿ ಸಚಿವ ರಾಜಶೇಖರ ಪಾಟೀಲ, ಶಾಸಕ ವಿಜಯಾನಂದ ಕಾಶಪ್ಪನವರ, ವಿ.ಪ. ಸದಸ್ಯರಾದ ಎ್.ಎಚ್. ಜಕಪ್ಪನವರ, ಬಸನಗೌಡ ಬಾದರ್ಲಿ, ವಿ.ಪ. ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಅವರನ್ನು ನೇಮಕ ಮಾಡಿ ತಂಡ ರಚಿಸಿದೆ.