ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ಭಾರಿ ಮಳೆಯಿಂದ ಪಿಕೆಪಿಎಸ್ ಗೆ ಸೇರಿದ ಮಳಿಗೆಯಲ್ಲಿ ನೀರು ನುಗ್ಗಿರುವುದು. 
ಬಾಗಲಕೋಟೆ

ಕೋಟೆನಾಡಿನಲ್ಲಿ ರೋಹಿಣಿಗೆ ಸಾಥ್ ನೀಡಿದ ಮೃಗಶಿರ

ಬಾಗಲಕೋಟೆ : ರಾಜ್ಯದಲ್ಲಿ ಮುಂಗಾರು ಪ್ರವೇಶಿಸುತ್ತಿದ್ದಂತೆ ರೋಹಿಣಿ ಮಳೆ ಕೊನೆಪಾದದಲ್ಲಿ ಎರಡ್ಮೂರು ದಿನ ಅಬ್ಬರಿಸಿದ ಬೆನ್ನಲೆ ಮೃಗಶಿರ ಮಳೆಯೂ ಸಹ ಮೊದಲ ದಿನವೇ ಉತ್ತಮ ಆರಂಭ ನೀಡಿದೆ.
ರೋಹಿಣಿ ಮಳೆಯು ಜಿಲ್ಲೆಯ ಬಹುತೇಕ ಕಡೆಗೆ ಶನಿವಾರ ಮತ್ತು ಭಾನುವಾರ ಸಂಜೆ ಮತ್ತು ರಾತ್ರಿ ಅಬ್ಬರಿಸಿತ್ತು. ಸೋಮವಾರ ಮೃಗಶಿರ ಮಳೆಯೂ ಸಹ ಸಂಜೆ ಹೊತ್ತಿಗೆ ಆಗಮಿಸಿದ್ದು, ಉತ್ತಮವಾಗಿ ಸುರಿಯಲು ಆರಂಭಿಸಿದೆ.
ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಸುರಿದ ರೋಹಿಣಿ ಮಳೆ ಅಬ್ಬರಕ್ಕೆ ಜಿಲ್ಲೆಯ ವಿವಿಧೆಡೆ ಒಟ್ಟು ೩೧ ಮನೆಗಳಿಗೆ ಹಾನಿಯಾಗಿರುವ ಬಗ್ಗೆ ಪ್ರಾಥಮಿಕ ವರದಿಯಾಗಿದೆ. ಇದೀಗ ಮಳೆ ಮತ್ತೆ ಮುಂದುವರೆದಿರುವುದು ಮನೆಗಳ ಹಾನಿಯ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಇನ್ನು ಭಾರಿ ಮಳೆಯಿಂದಾಗಿ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ಪಿಕೆಪಿಎಸ್‌ನ ಮೂರು ಮಳಿಗೆಗಳಲ್ಲಿ ನೀರು ನುಗ್ಗಿದ್ದು, ನೀರು ಹೊರಹಾಕಲು ಹರಸಾಹಸ ಪಡುವಂತಾಯಿತು. ಜಿಲ್ಲಾದ್ಯಂತ ಮೂರು ದಿನಗಳಿಂದ ಮಳೆ ಸುರಿಯುತ್ತಿರುವ ಪರಿಣಾಮ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ರಸ್ತೆ, ಚರಂಡಿಗಳು ತುಂಬಿ ಹರಿದಿವೆ. ಅಲ್ಲಲ್ಲಿ ಚರಂಡಿಗಳು ಸ್ವಚ್ಛ ಇಲ್ಲದ್ದರಿಂದ ಚರಂಡಿ ನೀರು ರಸ್ತೆಗೆ ನುಗ್ಗಿದೆ. ಸಂಜೆ ಶಾಲೆಯಿಂದ ಮನೆಗೆ ತೆರಳಲು ವಿದ್ಯಾರ್ಥಿಗಳು ಪರದಾಡುವಂತಾಯಿತು.
ಜಿಲ್ಲೆಯು ಬನಹಟ್ಟಿಯಲ್ಲಿ ಸಂಜೆ ೨ ಗಂಟೆಗಳ ಕಾಲ ಜೋರಾಗಿ ಸುರಿದಿದ್ದು, ತೇರದಾಳ, ಜಮಖಂಡಿ, ಮುಧೋಳ ತಾಲೂಕಿನ ವಿವಿಧಡೆ ಹಾಗೂ ಬಾದಾಮಿ ತಾಲೂಕಿನಲ್ಲಿ ಜಿಟಿಜಿಟಿ ಮಳೆ ಆಗಿದೆ.
ಭಾನುವಾರ ಬೆಳಗ್ಗೆ ೮.೩೦ ರಿಂದ ಸೋಮವಾರ ಬೆಳಗ್ಗೆ ೮.೩೦ ವರೆಗಿನ ೨೪ ಗಂಟೆಗಳಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮಳೆ ಆಗಿರುವ ವರದಿಯಾಗಿದೆ. ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಗರಿಷ್ಠ ೪೩.೭ ಎಂಎA ಮಳೆ ಸುರಿದಿದ್ದರೆ ಇಳಕಲ್ಲ ತಾಲೂಕಿನಲ್ಲಿ ಕನಿಷ್ಠ ೧.೩ ಎಂಎA ಮಳೆ ದಾಖಲಾಗಿದೆ. ಉಳಿದಂತೆ ಮುಧೋಳ ತಾಲೂಕಿನಲ್ಲಿ ೨೩.೨ಎಂಎA, ಜಮಖಂಡಿ ತಾಲೂಕಿನಲ್ಲಿ ೧೮.೭ಎಂಎA, ಬಾದಾಮಿಯಲ್ಲಿ ೧೫.೨ ಎಂಎA, ಬೀಳಗಿಯಲ್ಲಿ ೬.೩ ಎಂಎA, ಹುನಗುಂದ ೫.೯ ಎಂಎA, ಬಾಗಲಕೋಟೆ ೪ ಎಂಎA ಹಾಗೂ ಗುಳೇದಗುಡ್ಡ ತಾಲೂಕಿನಲ್ಲಿ ೧.೫ ಎಂಎA ಮಳೆ ದಾಖಲಾಗಿದೆ.