ಜಮಖಂಡಿ ತಾಲೂಕಿನ ಸಿದ್ದಾಪೂರ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ಬೆಂಕಿಗಾಹುತಿಯಾಗಿ ಹೊತ್ತಿ ಉರಿಯುತ್ತಿರುವ ಕಾರು. 
ಬಾಗಲಕೋಟೆ

ಚಲಿಸುತ್ತಿದ್ದ ಕಾರು ಬೆಂಕಿಗಾಹುತಿ

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ತಾಂತ್ರಿಕ ದೋಷ
  • ಶಾರ್ಟ್ ಸರ್ಕ್ಯೂಟ್ ಅವಘಡಕ್ಕೆ ಕಾರಣವೆಂದು ಶಂಕೆ
ಜಮಖಂಡಿ: ತಾಲೂಕಿನ ಸಿದ್ದಾಪೂರ ಗ್ರಾಮದ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಸಮೀಪದ ವಿಜಯಪುರ- ಧಾರವಾಡ ರಾಜ್ಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರು ಬೆಂಕಿಗೆ ತುತ್ತಾಗಿ ಸಂಪೂರ್ಣ ಭಸ್ಮವಾಗಿರುವ ಘಟನೆ ನಡೆದಿದೆ.
ಮಂಗಳವಾರ ಮಧ್ಯರಾತ್ರಿ ಮುಧೋಳ ಕಡೆಯಿಂದ ಜಮಖಂಡಿಗೆ ಬರುತ್ತಿದ್ದ ರೆನಾಲ್ಟ್ ಕಾರಿನಲ್ಲಿ ಅವಘಡ ಸಂಭವಿಸಿದೆ. ಕಾರು ಸಿದ್ದಾಪೂರ ಗ್ರಾಮದ ಬಳಿ ಸಾಗುತ್ತಿದ್ದಾಗ ಹಠಾತ್ತನೆ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ತಕ್ಷಣವೇ ಗಮನಿಸಿದ ಚಾಲಕ, ಸಮಯಪ್ರಜ್ಞೆ ಮೆರೆದು ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿ ಕೆಳಗಿಳಿದಿದ್ದಾರೆ.
ಚಾಲಕ ಕೆಳಗಿಳಿಯುತ್ತಿದ್ದಂತೆಯೇ ಬೆಂಕಿಯ ಜ್ವಾಲೆ ಇಡೀ ಕಾರನ್ನು ಆವರಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆಯೇ ಕಾರು ಧಗಧಗನೆ ಸಂಪೂರ್ಣ ಹೊತ್ತಿ ಉರಿದಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಸಹಾಯಕ್ಕೆ ಸ್ಥಳಕ್ಕೆ ಧಾವಿಸಿದರು. ಇಂಜಿನ್‌ನಲ್ಲಿ ಉಂಟಾದ ತಾಂತ್ರಿಕ ದೋಷ ಅಥವಾ ಶಾರ್ಟ್ ಸರ್ಕ್ಯೂಟ್ ಬೆಂಕಿ ಅವಘಡಕ್ಕೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.