ಮುಧೋಳ ನಗರದ ಸಾಯಿನಿಕೇತನ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದ್ದ ಉತ್ತುಂಗ 4.0 ಶೈಕ್ಷಣಿಕ ಪ್ರೇರಣಾ ಕಾರ್ಯಕ್ರಮ ಬಿಇಒ ಸಮೀರ ಮುಲ್ಲಾ ಉದ್ಘಾಟಿಸಿದರು. ರಾಜೇಶ ವಾಲಿ, ಸಂಗಮೇಶ ನೀಲಗುಂದ, ಅಡಿವೆಪ್ಪ ಛಬ್ಬಿ, ವೆಂಕಟೇಶ ಪಾಟೀಲ ಇತರರಿದ್ದರು.
- ಸಂಸ್ಥಾಪಕ ಅಧ್ಯಕ್ಷ ಹಾಗೂ ಶಿಕ್ಷಣ ತಜ್ಞ ರಾಜೇಶ ವಾಲಿ ಹೇಳಿಕೆ
- ಸಾಯಿನಿಕೇತನದಲ್ಲಿ ಉತ್ತುಂಗ 4.0 ಸಂಭ್ರಮ
- ಜೀವನದಲ್ಲಿ ಸಾಧನೆ ಮಾಡಲು ಅಸಾಧ್ಯವಾದುದು ಯಾವುದೂ ಇಲ್ಲ
ಮುಧೋಳ: ಜೀವನದಲ್ಲಿ ಸಾಧನೆ ಮಾಡಲು ಅಸಾಧ್ಯವಾದುದು ಯಾವುದೂ ಇಲ್ಲ. ನಿಯಮಿತ ಅಭ್ಯಾಸ, ಶಿಸ್ತು ಮತ್ತು ಛಲವಿದ್ದರೆ ವಿದ್ಯಾರ್ಥಿಗಳು ಅಂದುಕೊಂಡ ಗುರಿ ತಲುಪಲು ಸಾಧ್ಯ ಎಂದು ಸಾಯಿ ನಿಕೇತನ ಶೈಕ್ಷಣಿಕ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಶಿಕ್ಷಣ ತಜ್ಞ ರಾಜೇಶ ವಾಲಿ ಹೇಳಿದರು.
ನಗರದ ಸಾಯಿನಿಕೇತನ ಅಡಿಟೋರಿಯಂನಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಸಾಯಿನಿಕೇತನ ಶೈಕ್ಷಣಿಕ ಸಮೂಹ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉತ್ತುಂಗ 4.0 ಶೈಕ್ಷಣಿಕ ಪ್ರೇರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎಂದರೆ ಭಯ ಬೇಡ. ಉಳಿದಿರುವ ಸಮಯ ಸರಿಯಾಗಿ ಹಂಚಿಕೆ ಮಾಡಿಕೊಂಡು ದಿನಕ್ಕೆ ಕನಿಷ್ಠ 10 ರಿಂದ 12 ಗಂಟೆಗಳ ಕಾಲ ಓದಿದರೆ ಶೇ. 95ಕ್ಕೂ ಹೆಚ್ಚು ಅಂಕ ಪಡೆಯುವುದು ಕಷ್ಟವಲ್ಲ. ನಿಮ್ಮ ಜೀವನದ ಶಿಲ್ಪಿಗಳು ನೀವೇ ಎಂದು ಕಿವಿಮಾತು ಹೇಳಿದ ಅವರು, ಗಣಿತ ಮತ್ತು ವಿಜ್ಞಾನ ವಿಷಯಗಳ ಸೂತ್ರಗಳನ್ನು ಸರಳವಾಗಿ ನೆನಪಿಟ್ಟುಕೊಳ್ಳುವ ತಂತ್ರ ಪ್ರಾತ್ಯಕ್ಷತೆೆಯ ಮೂಲಕ ವಿವರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ಮುಲ್ಲಾ ಮಾತನಾಡಿ, ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡದಿಂದ ಮುಕ್ತರಾಗಿ ಗುರಿಯತ್ತ ಗಮನಹರಿಸಬೇಕು. ಪರೀಕ್ಷೆಗೆ ಬಾಕಿಯಿರುವ 25 ದಿನ ಜಾಗೃತೆಯಿಂದ ಬಳಸಿ, ಮೊಬೈಲ್ ಹಾಗೂ ಟಿವಿಗಳಿಂದ ದೂರವಿದ್ದು ಕಠಿಣ ಪರಿಶ್ರಮ ಪಡಲು ಸೂಚಿಸಿದರು. ಯಾವ ಮಗುವೂ ಹಿಂದೆ ಉಳಿಯಬಾರದು ಎಂಬ ಆಶಯದೊಂದಿಗೆ ಇಲಾಖೆಯು ಎಲ್ಲರಿಗೂ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದು, ನೂರಕ್ಕೆ ನೂರು ಲಿತಾಂಶ ದಾಖಲಿಸಬೇಕು ಎಂದು ತಿಳಿಸಿದರು.
ಬಿಇಒ ಎಸ್.ಎಂ. ಮುಲ್ಲಾ, ಸಂಪನ್ಮೂಲ ವ್ಯಕ್ತಿಗಳಾದ ಲಕ್ಷ್ಮೀಕಾಂತ ಮಮದಾಪೂರ, ಪಿ.ಎಲ್. ಬಗಲಿ, ಎಂ.ಎಚ್. ಶಿಂಧೆ, ನೋಡಲ್ ಅಧಿಕಾರಿ ಸಂಗಮೇಶ ನೀಲಗುಂದ, ಬಿಆರ್‌ಸಿ ಅಡಿವೆಪ್ಪ ಛಬ್ಬಿ, ಮುಖ್ಯೋಪಾಧ್ಯಾಯ ವೆಂಕಟೇಶ ಪಾಟೀಲ, ದಿನೇಶ ಮೂಲ್ಯ ಇತರರು ಇದ್ದರು.