ಬಾಗಲಕೋಟೆ ಬಿವಿವಿ ಸಂಘದ ಶಾರದಾಂಬೆ ನರ್ಸಿಂಗ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಥಲಸ್ಸೆಮಿಯಾ ದಿನಾಚರಣೆಯನ್ನು ಪ್ರಾಂಶುಪಾಲ ಡಾ.ಪ್ರವೀಣ ಪಾಟೀಲ ಚಾಲನೆ ನೀಡಿದರು. ಸವಿತಾ ಅಂಗಡಿ, ಸುಷ್ಮಾ ಗುಂಡನಪಳ್ಳೆ, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಇದ್ದರು.
- ಥಲಸ್ಸೆಮಿಯಾ ಒಂದು ಅನುವಂಶಿಕ ರಕ್ತ ರೋಗ
- ಶ್ವ ಥಲಸ್ಸೆಮಿಯಾ ದಿನಾಚರಣೆ
ಬಾಗಲಕೋಟೆ: ಥಲಸ್ಸೆಮಿಯಾ ಒಂದು ಅನುವಂಶಿಕ ರಕ್ತ ರೋಗವಾಗಿದೆ. ಇದರ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಪ್ರಾಂಶುಪಾಲ ಡಾ.ಪ್ರವೀಣ ಪಾಟೀಲ ಹೇಳಿದರು.
ನಗರದ ಬಿವಿವಿ ಸಂಘದ ಶಾರದಾಂಬೆ ನರ್ಸಿಂಗ್ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಥಲಸ್ಸೆಮಿಯಾ ದಿನಾಚರಣೆ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಥಲಸ್ಸೆಮಿಯಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಕ್ತದಾನ ಮತ್ತು ಸಮಯಕ್ಕೆ ಸರಿಯಾದ ಚಿಕಿತ್ಸೆ ಮೂಲಕ ರೋಗಿಗಳ ಜೀವನವನ್ನು ಉತ್ತಮಗೊಳಿಸಬಹುದು ಎಂದು ತಿಳಿಸಿದರು.
ಸಹ ಪ್ರಾಧ್ಯಾಪಕಿ ಸವಿತಾ ಅಂಗಡಿ ಮಾತನಾಡಿ, ಥಲಸ್ಸೆಮಿಯಾ ತಡೆಗಟ್ಟಲು ಮದುವೆಗೆ ಮುನ್ನ ರಕ್ತ ಪರೀಕ್ಷೆ ಹಾಗೂ ಜನರಲ್ಲಿ ಅರಿವು ಅಗತ್ಯವಾಗಿದೆ. ವಿದ್ಯಾರ್ಥಿಗಳು ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು.
ಉಪನ್ಯಾಸಕ ಗುರುಸಿದ್ದಯ್ಯ ಹಿರೇಮಠ ಮಾತನಾಡಿ, ಪ್ರತಿ ವರ್ಷ ಥಲಸ್ಸೆಮಿಯಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಯುವಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ಮುಖ್ಯ. ರಕ್ತದಾನವು ಜೀವ ಉಳಿಸುವ ಮಹತ್ವದ ಸೇವೆಯಾಗಿದೆ ಎಂದು ತಿಳಿಸಿದರು.
ಉಪನ್ಯಾಸಕಿ ಸುಷ್ಮಾ ಗುಂಡನಪಳ್ಳೆ ಮಾತನಾಡಿ, ಥಲಸ್ಸೆಮಿಯಾ ರೋಗಿಗಳಿಗೆ ನಿರಂತರ ಚಿಕಿತ್ಸೆ ಮತ್ತು ಮಾನಸಿಕ ಬೆಂಬಲ ಅಗತ್ಯ. ಸಮಾಜದ ಪ್ರತಿಯೊಬ್ಬರೂ ರೋಗಿಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.
ಉಪನ್ಯಾಸಕ ಈರಪ್ಪ ಮಗದುಮ್ ಮಾತನಾಡಿ, ಥಲಸ್ಸೆಮಿಯಾ ಬಗ್ಗೆ ಸರಿಯಾದ ಮಾಹಿತಿ ಜನರಿಗೆ ತಲುಪಿದರೆ ಈ ರೋಗದ ಪರಿಣಾಮವನ್ನು ಕಡಿಮೆ ಮಾಡಬಹುದು. ಯುವಕರು ರಕ್ತದಾನದ ಮೂಲಕ ಮಾನವೀಯತೆ ಮೆರೆಯಬೇಕು ಎಂದರು.
ಸ್ನೇಹಾ ಕುಂಬಾರ ನಿರೂಪಿಸಿದರು. ಪ್ರಿಯಾಂಕಾ ತಳವಾರ ಸ್ವಾಗತಿಸಿದರು. ಮಹಾಲಕ್ಷ್ಮಿ ವಂದಿಸಿದರು.