ವಿಜಯವಾಣಿ ಸುದ್ದಿಜಾಲ ಬಾಗಲಕೋಟೆ
ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ, ಮಿಷನ್ ಇಂದ್ರಧನುಷ್ ಹಾಗೂ `ಪೋಷಣ್ ಭೀ, ಪಡಾಯಿ ಭೀ' ಸೇರಿ ವಿವಿಧ ಯೋಜನೆಗಳ ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ಕೇಂದ್ರ ಸರ್ಕಾರ ನೆರವು ನೀಡುತ್ತಿದ್ದು, ಭವ್ಯ ಭಾರತದ ಭಾವಿ ಪ್ರಜೆಗಳ ನಿರ್ಮಾಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒತ್ತು ನೀಡುತ್ತಿದ್ದಾರೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ನಗರದ ಹಮಾಲರ ಕಾಲನಿ, ನಂದೀಶ ನಗರ ಹಾಗೂ ಜ್ಯೋತಿ ಕಾಲನಿಯ ಅಂಗನವಾಡಿ ಕೇಂದ್ರಗಳಲ್ಲಿ ಬಿಜೆಪಿ ಬಾಗಲಕೋಟೆ ಮತಕ್ಷೇತ್ರದ ಮಹಿಳಾ ಮೋರ್ಚಾ ವತಿಯಿಂದ `ಸೇವಾ ಸಂಕಲ್ಪ ಅಭಿಯಾನ'ದ ಅಂಗವಾಗಿ ಸೋಮವಾರ ಆಯೋಜಿಸಿದ್ದ `ಅಂಗಳದ ಉತ್ಸವ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರಿಗೆ ಆರೋಗ್ಯ, ಪೌಷ್ಟಿಕಾಂಶ ಹಾಗೂ ಆರ್ಥಿಕ ನೆರವು ಒದಗಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಜಾರಿಯಲ್ಲಿದೆ. ಮೊದಲ ಜೀವಂತ ಮಗುವಿಗೆ 5,000 ರೂ. ಹಾಗೂ ಮಾರ್ಗಸೂಚಿಯಂತೆ ಎರಡನೇ ಮಗು ಹೆಣ್ಣುಮಗುವಾಗಿದ್ದರೆ 6,000 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಮಕ್ಕಳ ಆರೋಗ್ಯ, ಪೌಷ್ಟಿಕತೆ ಹಾಗೂ ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಅಂಗನವಾಡಿಗಳ ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸಿ ಅನುಷ್ಠಾನಗೊಳಿಸಿದೆ. ಅರ್ಹ ಫಲಾನುಭವಿಗಳು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಅಂಗನವಾಡಿಗಳಲ್ಲಿ ಮಕ್ಕಳ ಹಾಗೂ ತಾಯಂದಿರಿಗೆ ದೊರೆಯುತ್ತಿರುವ ಹಲವು ಸೌಲಭ್ಯಗಳು ಕೇಂದ್ರ ಸರ್ಕಾರದ ಯೋಜನೆಗಳಾಗಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯೊಂದಿಗೆ ಸದೃಢ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಬೆಳಗಾವಿ ಪ್ರಭಾರಿ ಬಸವರಾಜ ಯಂಕಂಚಿ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಈರಪ್ಪ ಸಿರಗನ್ನವರ, ಉಮೇಶ ಹಂಚಿನಾಳ, ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಶಶಿಕಲಾ ಮಜ್ಜಗಿ, ಭಾಗ್ಯಶ್ರೀ ಹಂಡಿ, ಅನಿತಾ ಸರೋದೆ, ಶಿವಲೀಲಾ ಸಂಬಣ್ಣವರ, ಲಕ್ಷ್ಮೀ ಮಡಿವಾಳರ, ಶಿವಲೀಲಾ ಹಿರೇಮಠ ಇತರರಿದ್ದರು.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಸನ್ಮಾನಿಸಲಾಯಿತು. ಮಕ್ಕಳಿಗೆ ಹಣ್ಣುಗಳನ್ನು ವಿತರಿಸಲಾಯಿತು.