ಸಚಿವ ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಬಿಜೆಪಿ ಕಾರ್ಯಕರ್ತರು ಧರಣಿ ಮುಂದುವರಿಸಿದರು. ಅಶೋಕ ಲಿಂಬಾವಳಿ, ಸುರೇಶ ಕೊಣ್ಣೂರ, ಬಸವರಾಜ ಹುನಗುಂದ, ನವೀನ ಚರಂತಿಮಠ, ನಬಿಸಾಬ ಅನಗವಾಡಿ ಇತರರಿದ್ದರು. 
ಬಾಗಲಕೋಟೆ

ಸಚಿವ ನಾಗೇಂದ್ರರನ್ನು ಸಂಪುಟದಿಂದ ವಜಾಗೊಳಿಸಿ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಕಾರ್ಯಕರ್ತರ ಆಗ್ರಹ
  • ಏಳನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ

ಬಾಗಲಕೋಟೆ:

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಆರೋಪಿ ಸ್ಥಾನದಲ್ಲಿ ಇರುವ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಭಾನುವಾರ 6ನೇ ದಿನವೂ ಮುಂದುವರಿಯಿತು.

ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಸಚಿವ ನಾಗೇಂದ್ರ ಕೂಡಲೇ ರಾಜೀನಾಮೆ ಕೊಡಬೇಕು, ಇಲ್ಲವೇ ಸಂಪುಟದಿಂದ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಣ ಲೂಟಿ ಹೊಡೆದು ಚುನಾವಣೆಗೆ ಬಳಕೆ ಮಾಡಿದೆ. ಹಗರಣದಲ್ಲಿ ಪ್ರಮುಖವಾಗಿ ಕೇಳಿ ಬಂದಿದ್ದ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆದು, ಇದೀಗ ಇನ್ನೂ ದೋಷಮುಕ್ತ ಆಗುವ ಮುನ್ನವೇ ಅವರನ್ನು ಮತ್ತೆ ಡಿ.ಕೆ. ಶಿವಕುಮಾರ ಅವರು ಸಂಪುಟದಲ್ಲಿ ಸೇರಿಸಿಕೊಂಡಿದ್ದೇಕೆ? ಹಗರಣದ ಹಣ ಹೈಕಮಾಂಡ್‌ಗೆ ಮುಟ್ಟಿದೆಯಾ? ಹೀಗಾಗಿಯೇ ಅವರಿಗೆ ಕ್ಲೀನ್ ಚೀಟ್ ಸಿಗುವ ಮುನ್ನವೇ ಸಂಪುಟಕ್ಕೆ ಸೇರ್ಪಡೆ ಮಾಡಿಸಿಕೊಂಡಿರುವ ಮರ್ಮವೇನು? ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಮುತ್ತಣ್ಣ ಬೆಣ್ಣೂರ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ಯಾರನ್ನೆಲ್ಲ ಸಚಿವರನ್ನಾಗಿ ಮಾಡಲಾಗಿದೆ ಎಂದು ಅವರದ್ದೇ ಪಕ್ಷದ ಮುಖಂಡರು ಮಾತನಾಡಿರುವ ಆಡಿಯೋವನ್ನು ಇಡೀ ರಾಜ್ಯದ ಜನರು ಆಲಿಸಿದ್ದಾರೆ. ಸಚಿವ ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸುವವರೆಗೂ ಬಿಜೆಪಿ ತನ್ನ ಹೋರಾಟವನ್ನು ಕೈಬಿಡಲ್ಲ. ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನೈತಿಕ ರಾಜಕಾರಣದ ಮೇಲೆ ನಂಬಿಕೆ ಹೊಂದಿದ್ದರೆ ಕೂಡಲೇ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಆರೋಪಿ ಸ್ಥಾನದ ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
6ನೇ ದಿನದ ಹೋರಾಟದಲ್ಲಿ ಎಸ್ಸಿ ಮೋರ್ಚಾ, ಒಬಿಸಿ ಮೋರ್ಚಾ, ರೈತ ಮೋರ್ಚಾದ ಪದಾಧಿಕಾರಿಗಳು ಮತ್ತು ಮುಖಂಡರು ಭಾಗವಹಿಸಿದ್ದರು. ಪಕ್ಷದ ಮುಖಂಡರಾದ ಅಶೋಕ ಲಿಂಬಾವಳಿ, ಸುರೇಶ ಕೊಣ್ಣೂರ, ಬಸವರಾಜ ಹುನಗುಂದ, ನವೀನ ಚರಂತಿಮಠ, ನಬಿಸಾಬ ಅನಗವಾಡಿ, ಕೃಷ್ಣಾ ಸನ್ನಪ್ಪಗೋಳ, ಶಿವಾನಂದ ಟವಳಿ, ಯಲ್ಲಪ್ಪ ನಾರಾಯಣಿ, ಧೂಳಪ್ಪ ಕೊಪ್ಪದ, ಅಶೋಕ ಪವಾರ್, ಶಿವಕುಮಾರ ಶಿಂಘೆ, ಮಹಾದೇವ ಮಡ್ಡಿ ಇತರರಿದ್ದರು.