ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಪತ್ನಿ ಚಿಕಿತ್ಸೆ ನೀಡುತ್ತಿರುವುದು. 
ಬಾಗಲಕೋಟೆ

ವೈದ್ಯಾಧಿಕಾರಿ ಪತ್ನಿಯಿಂದ ರೋಗಿಗಳಿಗೆ ಚಿಕಿತ್ಸೆ..!

ಪ್ರಮುಖ ಮುಖ್ಯಾಂಶಗಳು

  • ಕಲಾದಗಿ ಆರೋಗ್ಯ ಕೇಂದ್ರದಲ್ಲಿ ಘಟನೆ
  • ಗ್ರಾಮಸ್ಥರಿಂದ ಗಂಭೀರ ಆರೋಪ
  • ತಪ್ಪಿತಸ್ಥರ ವಿರುದ್ಧ ಸೂಕ್ತಕ್ರಮಕ್ಕೆ ಆಗ್ರಹ
ಕಲಾದಗಿ: ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಎಚ್.ವಿ. ಲೇಬಗೇರಿ ಬದಲು ವೈದ್ಯಕೀಯ ಅರ್ಹತೆ ಇಲ್ಲದ ಅವರ ಪತ್ನಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದ್ದು, ಈ ವಿಚಾರವಾಗಿ ವೈದ್ಯಾಧಿಕಾರಿಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಗ್ರಾಮ ಹಾಗೂ ಸುತ್ತಮುತ್ತಲಿನ 18ಕ್ಕೂ ಹೆಚ್ಚು ಹಳ್ಳಿಗಳ ವ್ಯಾಪ್ತಿಗೆ ಒಳ ಪಡುವ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದೊಂದು ವಾರದಿಂದ ಯಾವುದೇ ರೀತಿಯ ಮೇಲಧಿಕಾರಿಗಳ ಗಮನಕ್ಕೂ ಬಾರದಂತೆ ರೋಗಿಗಳಿಗೆ ಹಾಗೂ ಗರ್ಭಿಣಿಯರಿಗೆ ವೈದ್ಯಾಧಿಕಾರಿ ಪತ್ನಿಯೇ ಚಿಕಿತ್ಸೆ ಹಾಗೂ ಔಷಧಿ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.
ವೈದ್ಯಾಧಿಕಾರಿಯ ತಪಾಸಣಾ ಕೋಣೆಯಲ್ಲಿ ವೈದ್ಯರ ರೀತಿ ಕುಳಿತು ತಪಾಸಣೆ ನಡೆಸುವುದಲ್ಲದೇ 6 ವರ್ಷಕ್ಕಿಂತ ಒಳಗಿನ ಮಕ್ಕಳಿಗೆ ಡೋಲೊ 650 ಮಾತ್ರೆ ಹಾಗೂ ಪೇನ್ ಕಿಲ್ಲರ್ ಇಂಜೆಕ್ಷನ್ ಕೂಡಾ ನೀಡುತ್ತಿರುವ ಬಗ್ಗೆ ಸ್ಥಳೀಯರು ದೂರಿದರು.

ಜೀವಕ್ಕೆ ಹಾನಿಯಾದರೆ ಯಾರು ಹೊಣೆ?

ಈ ಬಗ್ಗೆ ವೈದ್ಯಾಧಿಕಾರಿ ಎಚ್.ವಿ. ಲೇಬಗೇರಿಯವರಿಗೆ ಪತ್ನಿ ತಪಾಸಣೆ ನಡೆಸುತ್ತಿರುವ ಬಗ್ಗೆ ಹಾಗೂ ತಪ್ಪುತಪ್ಪಾದ ಔಷಧಿ ನೀಡುತ್ತಿರುವ ಬಗ್ಗೆ ಪ್ರಶ್ನಿಸಿದರೆ ಪತ್ನಿ ಇಂಜಿನಿಯರಿಂಗ್ ಮುಗಿಸಿದ್ದಾಳೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಅವರು ಕೊಡುವ ಔಷಧದಿಂದ ಏನಾದರೂ ಹೆಚ್ಚುಕಡಿಮೆಯಾದರೆ ಅದಕ್ಕೆ ಯಾರು ಹೊಣೆ? ಅಲ್ಲದೇ ಬಂದ ರೋಗಿಗಳೊಂದಿಗೂ ಉತ್ತಮವಾಗಿ ವರ್ತಿಸುವುದಿಲ್ಲ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಡಿಎಚ್‌ಒ ಡಾ. ಮಂಜುನಾಥ ಹಾಗೂ ಟಿ.ಎಚ್.ಒ. ಮಾಗಿ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
"

ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಪತ್ನಿ ರೋಗಿಗಳ ತಪಾಸಣೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಅವರಿಗೆ ನೋಟಿಸ್ ನೀಡಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು.
-ಡಾ. ಸರಸ್ವತಿ ಮಾಗಿ, ಬಾಗಲಕೋಟೆ ಟಿಎಚ್‌ಒ