ಜಮಖಂಡಿ ನಗರದ ಸಮೀಪದ ಕಡಪಟ್ಟಿ ಬಸವಣ್ಣ ದೇವಸ್ಥಾನದ ಆವರಣದಲ್ಲಿರುವ ಮಾನವ ಧರ್ಮ ಮಂಟಪದಲ್ಲಿ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಬಾಳ ಬೆಳಕು ಕೃತಿಯನ್ನು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಬಿಡುಗಡೆಗೊಳಿಸಿದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು, ಮುತ್ತಣ್ಣ ಹಿಪ್ಪರಗಿ ಇತರರಿದ್ದರು. 
ಬಾಗಲಕೋಟೆ

ಮನು ಕುಲದ ಏಳಿಗೆಗೆ ಒಗ್ಗಟ್ಟಿನಿಂದ ಶ್ರಮಿಸಲಿ

ಜಮಖಂಡಿ: ಸಮಾಜದ ಅಭಿವೃದ್ಧಿ ಹಾಗೂ ಮಾನವ ಕುಲದ ಏಳಿಗೆಗಾಗಿ ಎಲ್ಲರೂ ಜಾತಿ, ಧರ್ಮದ ಭೇದ ಮರೆತು ಒಗ್ಗಟ್ಟಿನಿಂದ ಶ್ರಮಿಸಬೇಕು. ವೀರಶೈವ-ಲಿಂಗಾಯತ ಧರ್ಮದ ಕಾಯಕ ಮತ್ತು ದಾಸೋಹದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸಾಮರಸ್ಯ ಬೆಳೆಸಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ನಗರದ ಸಮೀಪದ ಕಡಪಟ್ಟಿ ಬಸವಣ್ಣ ದೇವಸ್ಥಾನದ ಆವರಣದಲ್ಲಿರುವ ಮಾನವ ಧರ್ಮ ಮಂಟಪದಲ್ಲಿ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ, ಪರಸ್ಪರ ಗೌರವದಿಂದ ನಡೆದುಕೊಂಡು ಒಗ್ಗಟ್ಟಿನಿಂದ ಮುನ್ನಡೆಯಬೇಕು. ಮಾನವ ಧರ್ಮಕ್ಕೆ ಜಯವಾಗಲಿ, ಮಾನವ ಕುಲಕ್ಕೆ ಜಯವಾಗಲಿ ಎಂಬ ಆಶಯವನ್ನು ಸಾಕಾರಗೊಳಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

ಮೈಸೂರು ದಸರಾ ಸೇರಿ ನಾಡಿನ ವಿವಿಧ ಭಾಗಗಳಲ್ಲಿ ನಡೆಯುವ ಸಾಂಪ್ರದಾಯಿಕ ಉತ್ಸವಗಳಂತೆ ರಂಭಾಪುರಿ ಪೀಠದ ದಸರಾ ಧರ್ಮ ಸಮ್ಮೇಳನವೂ ವಿಶೇಷ ಮಹತ್ವ ಹೊಂದಿದೆ. ನಾಡಿನ ವಿವಿಧ ಭಾಗಗಳಿಂದ ಶಿವಾಚಾರ್ಯರು, ಸಾಹಿತಿಗಳು, ವಿದ್ವಾಂಸರು, ಸಮಾಜ ಚಿಂತಕರು, ಕವಿಗಳು, ಕಲಾವಿದರು ಹಾಗೂ ರಾಜಕೀಯ ಮುಖಂಡರು ಪಾಲ್ಗೊಂಡಿರುವುದು ಸಂತಸದ ಸಂಗತಿ. ಇಂತಹ ಧಾರ್ಮಿಕ ಸಮಾರಂಭಗಳು ಸಮಾಜದಲ್ಲಿ ಏಕತೆ ಮತ್ತು ಸದ್ಭಾವನೆ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ `ಬಾಳಿಗೆ ಬೆಳಕು' ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಯಾವ ದೇವರನ್ನು ಪೂಜಿಸಿದರೂ ಭಕ್ತಿಯ ಮೂಲಕ ತಲುಪುವುದು ಪರಮಾತ್ಮನನ್ನೇ ಎಂಬುದು ಹಿಂದೂ ಧರ್ಮದ ವಿಶೇಷತೆಯಾಗಿದೆ. ಸರ್ವೇ ಜನಾಃ ಸುಖಿನೋ ಭವಂತು ಎಂಬುದು ನಮ್ಮ ಧರ್ಮದ ಆಶಯ. ಎಲ್ಲರೂ ಸುಖವಾಗಿ, ಸಂತೋಷದಿಂದ ಬದುಕಬೇಕು ಎಂಬ ಉದಾತ್ತ ಸಂದೇಶವನ್ನು ಭಾರತೀಯ ಸಂಸ್ಕೃತಿ ಸಾರುತ್ತದೆ. ಇಂತಹ ಮೌಲ್ಯಗಳನ್ನು ಸಮಾಜದಲ್ಲಿ ಬೆಳೆಸಲು ರಂಭಾಪುರಿ ಜಗದ್ಗುರುಗಳು ಮಾಡುತ್ತಿರುವ ಕಾರ್ಯಕ್ಕೆ ಎಲ್ಲರೂ ಗೌರವ ಸಲ್ಲಿಸಬೇಕು ಎಂದರು.

ಸಾವಿರಾರು ವರ್ಷಗಳಿಂದ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಸಾಧು-ಸಂತರು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಒಬ್ಬ ವ್ಯಕ್ತಿಯಿಂದ ತಪ್ಪಾದರೆ ಇಡೀ ಸಂತ ಸಮುದಾಯವನ್ನೇ ತಪ್ಪಿತಸ್ಥರೆಂದು ಪರಿಗಣಿಸುವುದು ಸರಿಯಲ್ಲ. ತಮ್ಮ ಜೀವನವನ್ನೇ ತಪಸ್ಸು ಮತ್ತು ಲೋಕ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟಿರುವ ಸಂತರ ಬಗ್ಗೆ ಮಾತನಾಡುವಾಗ ಗೌರವ ಮತ್ತು ಸಂಯಮ ಇರಬೇಕು ಎಂದರು.

ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಮಾತನಾಡಿ, ಸಂಸ್ಕಾರವAತ ವ್ಯಕ್ತಿಗಳೇ ಸುಸಂಸ್ಕೃತ ಸಮಾಜದ ಅಡಿಪಾಯ. ಸಂಸ್ಕಾರವAತ ವ್ಯಕ್ತಿ ಸಮಾಜದ ಶಕ್ತಿ. ಸಂಸ್ಕಾರವAತ ಸಮಾಜ ರಾಷ್ಟçದ ಶಕ್ತಿ. ಉತ್ತಮ ನಡತೆ ಶಿಸ್ತು ಪ್ರಾಮಾಣಿಕತೆ ಹಿರಿಯರ ಮೇಲಿನ ಗೌರವ ದೇಶಪ್ರೇಮ ಮತ್ತು ಸಮಾಜ ಸೇವೆಯ ಮನೋಭಾವನೆಯನ್ನು ರೂಪಿಸುವಲ್ಲಿ ಸಂಸ್ಕಾರಗಳು ಮಹತ್ವ ಪಾತ್ರ ವಹಿಸುತ್ತವೆ. ಸಂಸ್ಕಾರವAತ ನಾಗರಿಕರೇ ರಾಷ್ಟçದ ನಿಜವಾದ ಸಂಪತ್ತು ಎಂದು ಅಭಿಪ್ರಾಯಪಟ್ಟರು.

ಬೆಳಗಾವಿಯ ಆದರ್ಶ ಶಿಕ್ಷಕಿ ಡಾ. ಅನ್ನಪೂರ್ಣ ಹಿರೇಮಠ ಅವರಿಗೆ `ಸಾಹಿತ್ಯ ಸಿರಿ' ಪ್ರಶಸ್ತಿ ಪ್ರದಾನ ಮಾಡಿ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.

ಕೆರೂರ ಚರಂತಿಮಠದ ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಕಮತಗಿ ಹೊಳೆಹುಚ್ಚೇಶ್ವರ ಮಠದ ಹೊಳೆಹುಚ್ಚೇಶ್ವರ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಬೀರೂರು ಬಾಳೆಹೊನ್ನೂರು ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಿರಿಯ ಪತ್ರಕರ್ತ ಪ್ರಶಾಂತ ರಿಪ್ಪನಪೇಟೆ ಉಪನ್ಯಾಸ ನೀಡಿ, ಸಂಸ್ಕಾರವಂತ ಯುವ ಶಕ್ತಿಯಿಂದ ಸಮರ್ಥ ರಾಷ್ಟç ನಿರ್ಮಾಣಗೊಳ್ಳಲು ಸಾಧ್ಯವಾಗುತ್ತದೆ. ಈ ದಿಶೆಯಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದರು.

ಗುಳೇದಗುಡ್ಡದ ಅಭಿನವ ಕಾಡಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಹುಲ್ಯಾಳದ ಜಯಶ್ರೀ ಅಮ್ಮನವರು, ವಿಶ್ವನಾಥ ಶಾಸ್ತ್ರೀಗಳು ಕೊಣ್ಣೂರಮಠ ಹುನ್ನೂರು, ಜಮಖಂಡಿಯ ಏಗಪ್ಪ ಸವದಿ, ರಾಹೂಲ ಕಲೂತಿ, ಗುರು ಶಿವಯ್ಯ ಮಠಪತಿ, ಪ್ರಚಾರ ಸಮಿತಿ ಅಧ್ಯಕ್ಷ ಶ್ರೀಧರ ಶಿ. ಕಂಬಿ, ಬಸವಂತಪ್ಪ ಹನಗಂಡಿ ಹುನ್ನೂರ ಇವರಿಗೆ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಮುತ್ತಣ್ಣ ಹಿಪ್ಪರಗಿ, ಸಿ.ಎಸ್. ಬಾಂಗಿ, ರಾಮಣ್ಣ ಕಾಖಂಡಕಿ, ಮಲ್ಲಪ್ಪ ಮೇಳಿ, ಬಿ.ಎಸ್. ಗುರವ, ರಾಮಣ್ಣ ತಳವಾರ, ಅಶೋಕ ಬಡಿಗೇರ ಇತರರಿದ್ದರು.

ಲಿಂಗಾನಂದ ಗವಿಮಠ ಸ್ವಾಗತಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗಾನಭೂಷಣ ಶ್ರೀ ವೀರೇಶ ಕಿತ್ತೂರ ಗದಗ ಅವರಿಂದ ಸಂಗೀತ ಸೇವೆ ಸಲ್ಲಿಸಿದರು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.