ಬನಹಟ್ಟಿ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ಸರಕಾರಿ ಪಡಿತರ ವಿತರಕರ ಸಂಘ, ಹಾಗೂ ತಾಲೂಕು ಪಡಿತರ ವಿತರಕರ ಸಂಘ ಹಮ್ಮಿಕೊಂಡಿದ್ದ ಪಡಿತರ ವಿತರಕರ ಸಂಘದ ಸಮಾವೇಶವನ್ನು ಅಧ್ಯಕ್ಷ ಟಿ. ಕೃಷ್ಣಪ್ಪ ಉದ್ಘಾಟಿಸಿದರು. ಶೇಖರ ಅಂಗಡಿ, ಭಾಮ ರಮೇಶ, ಸರ್ದಾರ ಲಮಾಣಿ, ಆರಿಫ್ ಕೊಣ್ಣೂರ ಇತರರಿದ್ದರು.
- ಅಧ್ಯಕ್ಷ ಗಜಾನನ ನಾಗರಾಳ ಹೇಳಿಕೆ
- ಪಡಿತರ ವಿತರಕರ ಸಂಘದ ಸಮಾವೇಶ
- ನ್ಯಾಯಬೆಲೆ ಅಂಗಡಿಕಾರರ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ಸಿಗಬೇಕು.
ರಬಕವಿ/ಬನಹಟ್ಟಿ : ನ್ಯಾಯಬೆಲೆ ಅಂಗಡಿಕಾರರ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ಸಿಗಬೇಕು ಎಂದು ತಾಲೂಕು ಪಡಿತರ ವಿತರಕರ ಸಂಘದ ಅಧ್ಯಕ್ಷ ಗಜಾನನ ನಾಗರಾಳ ಹೇಳಿದರು.
ಬನಹಟ್ಟಿ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ಸರಕಾರಿ ಪಡಿತರ ವಿತರಕರ ಸಂಘ ಹಾಗೂ ತಾಲೂಕು ಪಡಿತರ ವಿತರಕರ ಸಂಘ ಬುಧವಾರ ಹಮ್ಮಿಕೊಂಡಿದ್ದ ಪಡಿತರ ವಿತರಕರ ಸಂಘದ ಸಮಾವೇಶದಲ್ಲಿ ಮಾತನಾಡಿದ ಅವರು, 2024ರ ಫೆಬ್ರವರಿ ಹಾಗೂ ಮಾರ್ಚ್ ಎರಡು ತಿಂಗಳ ಎನ್‌ಎಫ್ಎಸ್ಎ ಕಮೀಷನ್ (ಲಾಭಾಂಶ) ಈವರೆಗೆ ಜಮಾ ಆಗಿರುವುದಿಲ್ಲ. ಈ ವಿಷಯದ ಕುರಿತು ಹಲವು ಬಾರಿ ಆಯುಕ್ತರು ಹಾಗೂ ಜಂಟಿ ನಿರ್ದೇಶಕರ ಕಚೇರಿಗೆ ಮನವಿ ಪತ್ರ ನೀಡಲಾಗಿದೆ. ಆದರೂ ಇದುವರೆಗೆ ಹಣ ಜಮಾ ಆಗಿಲ್ಲ. 2019ರಿಂದ ನಾವು ಇಲಾಖೆ ಹೇಳಿದಂತೆ ಪಡಿತರ ಚೀಟಿಗೆ ಇ-ಕೆವೈಸಿ ಮಾಡಿರುತ್ತೇವೆ. ಹಲವು ಬಾರಿ ಮನವಿ ಮಾಡಿದರೂ ಇಲ್ಲಿಯವರೆಗೆ ಇ-ಕೆವೈಸಿ ಹಣ ನಮಗೆ ಸಂದಾಯವಾಗಿರುವುದಿಲ್ಲ ಎಂದರು.
ನ್ಯಾಯಬೆಲೆ ಅಂಗಡಿಕಾರರಿಗೆ ಜಮಾ ಆಗುವ ಲಾಭಾಂಶವನ್ನು ಡಿಬಿಟಿ ಮುಖಾಂತರ ಆಯಾ ತಿಂಗಳ ಕಮೀಷನ್ ಅದೇ ತಿಂಗಳಲ್ಲಿ ಜಮಾ ಆಗುವಂತೆ ಮಾಡಿಸಬೇಕು. ಪಡಿತರ ಚೀಟಿಗಳ ತಿದ್ದುಪಡಿ ಹಾಗೂ ಹೊಸ ಅರ್ಜಿ ಹಾಕಲು ನಮ್ಮ ಲಾಗಿನ್‌ನಲ್ಲಿ ಅವಕಾಶ ಮಾಡಿಸಿಕೊಡಬೇಕು ಎಂದು ಅಧ್ಯಕ್ಷರಲ್ಲಿ ಮನವಿ ಕೂಡ ಸಲ್ಲಿಸಿದ್ದೇವೆ ಎಂದು ಹೇಳಿದರು.
ಅಧ್ಯಕ್ಷ ಟಿ. ಕೃಷ್ಣಪ್ಪ ಮಾತನಾಡಿ, ತಮ್ಮ ಬೇಡಿಕೆಯಂತೆ ಹಳೆಯ ಲಾಭಾಂಶ ಜಮೆ, ಡಿಬಿಟಿ ಮುಖಾಂತರ ಕಮೀಷನ್ ಜಮೆ ಸೇರಿ ಬೇಡಿಕೆಗಳನ್ನು ಪರಿಹರಿಸಲು ಆದಷ್ಟು ಬೇಗನೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಪಡಿತರ ವಿತರಕರ ಸಂಘದ ಅಧ್ಯಕ್ಷ ಶೇಖರ ಅಂಗಡಿ, ಚಿತ್ರ ನಿರ್ಮಾಪಕ ಭಾಮ ರಮೇಶ, ಆಹಾರ ನಿರೀಕ್ಷಕ ಸರ್ದಾರ ಲಮಾಣಿ, ಆರ್ಿ ಕೊಣ್ಣೂರ, ಹಣಮಂತ ಕುಂದಗೊಳ, ಚಂದ್ರು ಅಂಬಲಿ, ನಾಗಪ್ಪಾ ಲೆಂಡಿ ಸೇರಿ ಅನೇಕರಿದ್ದರು.