ಬಾಗಲಕೋಟೆ ನಗರದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಕಚೇರಿಗೆ ಚಾಲನೆ ನೀಡಲಾಯಿತು. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ, ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ ಇತರರಿದ್ದರು.
- ಬಿಜೆಪಿ ಅಭ್ಯರ್ಥಿ ಡಾ. ವೀರಣ್ಣ ಚರಂತಿಮಠ ಹೇಳಿಕೆ
- ಪ್ರಚಾರ ಕಾರ್ಯಾಲಯ ಉದ್ಘಾಟನೆ
- 2023 ಪಕ್ಷದಲ್ಲಿನ ಗೊಂದಲ ಹಾಗೂ ಕಾಂಗ್ರೆಸ್ಸಿನ ಗ್ಯಾರಂಟಿಗಳಿಂದ ಸೋಲಾಯಿತು
ಬಾಗಲಕೋಟೆ: ಬಾಗಲಕೋಟೆಯಲ್ಲಿ ನನ್ನ ಗೆಲುವಲ್ಲ, ಬಿಜೆಪಿ, ಹಿಂದುತ್ವದ ಗೆಲುವಾಗಲಿ ಎಂದು ಮಾಜಿ ಶಾಸಕ ಬಿಜೆಪಿ ಅಭ್ಯರ್ಥಿ ಡಾ. ವೀರಣ್ಣ ಚರಂತಿಮಠ ಹೇಳಿದರು.
ನಗರದ ಶಿವಾನಂದ ಜಿನ್‌ನಲ್ಲಿರುವ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ಗುರುವಾರ ಚುನಾವಣಾ ಪ್ರಚಾರ ಕಾರ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷದ ಭದ್ರ ಕೋಟೆ, 2023 ಪಕ್ಷದಲ್ಲಿನ ಗೊಂದಲ ಹಾಗೂ ಕಾಂಗ್ರೆಸ್ಸಿನ ಗ್ಯಾರಂಟಿಗಳಿಂದ ಸೋಲಾಯಿತು. ಆದರೆ ಮತ್ತೆ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿದೆವು. ಈ ಚುನಾವಣೆ ಯಾರಿಗೂ ಬೇಕಾಗಿರಲಿಲ್ಲ. ಅನಿವಾರ್ಯವಾಗಿ ಚುನಾವಣೆ ಬಂದಿದೆ. ಸರ್ಕಾರವೇ ಬಂದು ನಿಂತರೂ ನಿರ್ಭೀಡೆಯಿಂದ ಕಾರ್ಯಕರ್ತರು ಕೆಲಸ ಮಾಡಬೇಕು ಎಂದರು.
ಚುನಾವಣೆಯನ್ನು ಹಬ್ಬದಂತೆ ಆಚರಣೆ ಮಾಡೋಣ, ಇಲ್ಲಿ ಧರ್ಮ ಹಾಗೂ ಹಿಂದೂತ್ವ ಗೆಲ್ಲಬೇಕು. ಬಾಗಲಕೋಟೆ ಹಿಂದೂತ್ವದ ಭದ್ರಕೋಟೆ ಇಲ್ಲಿ ಕಮಲ ಅರಳಿ ಕಾರ್ಯಕರ್ತರ ಪಕ್ಷದ ಗೆಲುವಾಗಲಿ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣು ತಳ್ಳಿಕೇರಿ ಮಾತನಾಡಿ, ಭಾರತೀಯ ಜನತಾ ಪಾರ್ಟಿ ಅಧಿಕಾರ ಅವಧಿಯಲ್ಲಿನ ಅಭಿವೃದ್ಧಿ ಕೆಲಸಗಳೇ ನಮಗೆ ಮಾನದಂಡವಾಗಿದ್ದು, ಈ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಬಿಜೆಪಿ ಅಭ್ಯರ್ಥಿ ಡಾ. ವೀರಣ್ಣ ಚರಂತಿಮಠರ ಗೆಲುವು ನಿಶ್ಚಿತ ಎಂದರು.
ಚುನಾವಣಾ ಉಸ್ತುವಾರಿ ಅರುಣ ಶಹಾಪುರ, ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ ಮಾತನಾಡಿದರು. ಸಂಸದ ಪಿ.ಸಿ. ಗದ್ದಿಗೌಡರ, ಡಾ. ಎಂ.ಎಸ್. ದಡ್ಡೆನ್ನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣೂರ ಉಪಸ್ಥಿತರಿದ್ದರು.