ಬಾಗಲಕೋಟೆಯಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಕರೆ ನೀಡಿರುವ ಬೃಹತ್ ಪ್ರತಿಭಟನೆ ಬಗ್ಗೆ ಸಮಿತಿ ಅಧ್ಯಕ್ಷ ಎಂ.ಆರ್. ಶಿಂಧೆ ಹಾಗೂ ಇತರೆ ಮುಖಂಡರು ಮಾಹಿತಿ ನೀಡಿದರು. ಕಿರಣ ಪವಾಡ ಶೆಟ್ಟರ, ಅಶೋಕ ಲಿಂಬಾವಳಿ, ಕುಮಾರಸ್ವಾಮಿ ಹಿರೇಮಠ ಮತ್ತಿತರರಿದ್ದರು.
- ಹಿಂದೂ ಹಿತರಕ್ಷಣಾ ಸಮಿತಿಯಿಂದ ಆಯೋಜನೆ
- ನವನಗರದಲ್ಲಿ ಅನಧಿಕೃತ ಮಸೀದಿ ನಿರ್ಮಾಣ ತಡೆಗಟ್ಟಿ
ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣವನ್ನು ಖಂಡಿಸಿ ಹಾಗೂ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಪಂಕಾ ಮಸೀದಿ ಸಮಿತಿಯವರ ಮೇಲೂ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಫೆ. 26ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಹಿಂದೂ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಆರ್. ಶಿಂಧೆ ಹೇಳಿದರು.
ನಗರದಲ್ಲಿ ಬುಧವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಹೇಳಿವೆ. ಬಾಗಲಕೋಟೆಯಲ್ಲಿ ನಿಷೇಧಾಜ್ಞೆ ಮುಂದುವರಿಸಿರುವುದರಿಂದ ಹಳೇ ನಗರದ ಬದಲಿಗೆ ನವನಗರದಲ್ಲಿ ಪ್ರತಿಭಟಿಸಲು ನಿರ್ಣಯಿಸಲಾಗಿದೆ ಎಂದು ತಿಳಿಸಿದರು.
ಮುಖಂಡ ಕಿರಣ ಪವಾಡ ಶೆಟ್ಟರ್ ಮಾತನಾಡಿ, ನವನಗರದಲ್ಲಿ 10 ರಿಂದ 15 ಅನಧಿಕೃತವಾಗಿ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ. ಅವುಗಳ ನಿರ್ಮಾಣವನ್ನು ಕೂಡಲೇ ತಡೆಗಟ್ಟಬೇಕು. ಬಾಗಲಕೋಟೆ ನಗರದಲ್ಲಿ ಬ್ಯಾರಿಕೇಡ್ ಹಾಕಿ ಜನರಿಗೆ ತೊಂದರೆ ನೀಡಲಾಗುತ್ತಿದ್ದು, ಅವುಗಳನ್ನು ತೆಗೆದು ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಹೋಳಿ, ಯುಗಾದಿ ಸೇರಿ ಹಲವು ಹಬ್ಬಗಳಿವೆ. ಈ ಸಂದರ್ಭದಲ್ಲಿ ಕಾನೂನು ಕೈಗೆತ್ತಿಕೊಳ್ಳಬಾರದು. ಹಾಗೆಯೇ ಮಕ್ಕಳ ಪರೀಕ್ಷೆ, ವಹಿವಾಟಿಗೆ ತೊಂದರೆಯಾಗಬಾರದು ಎಂದು ಜಾಗ ಬದಲಾವಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಹಬ್ಬಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಜಿಲ್ಲಾಡಳಿತ ಭರವಸೆ ನೀಡಿದೆ ಎಂದರು.
ಪ್ರತಿಭಟನೆಗೆ ಜಿಲ್ಲೆಯ ವಿವಿಧೆಡೆಯಿಂದ ಬರುವವರನ್ನು ತಡೆಯುವ ಪ್ರಯತ್ನವನ್ನು ಪೊಲೀಸ್ ಇಲಾಖೆ ಮಾಡಬಾರದು. ಮಾಡಿದರೆ, ಮುಂದಿನ ಆಗು ಹೋಗುಗಳಿಗೆ ಜಿಲ್ಲಾಡಳಿತವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.
ಮುಖಂಡ ಅಶೋಕ ಲಿಂಬಾವಳಿ ಮಾತನಾಡಿ, ಜಮಖಂಡಿಯಿಂದ ಹುನಗುಂದವರೆಗೆ ಹಿಂದೂ ಮುಖಂಡರಿಗೆ ನೋಟಿಸ್ ನೀಡಲಾಗಿದೆ. ಕೂಡಲೇ ಅವರಿಗೆ ನೀಡಿರುವ ನೋಟಿಸ್ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸಮಸ್ಯೆ ಎಲ್ಲಿ ಹುಟ್ಟಿತು? ಎಂದು ಯೋಚಿಸದೇ ಪೊಲೀಸರು ಬ್ರಿಟಿಷರ ಕಾಲದ ಹೆದರಿಸುವ ತಂತ್ರವನ್ನು ಮುಂದುವರಿಸಿದ್ದಾರೆ. ಕೂಡಲೇ ಪೊಲೀಸರು ತಮ್ಮ ನಡವಳಿಕೆ ಬದಲಾಯಿಸಿಕೊಳ್ಳಬೇಕು. ಹಾಗೆಯೇ ನೋಟಿಸ್ ಪಡೆದಿರುವವರಿಗೆ ತಹಸೀಲ್ದಾರ್ ಮುಂದೆ ಬಾಂಡ್ ಸಮೇತ ಹಾಜರಾಲು ತಿಳಿಸಿದ್ದು, ಯಾರೂ ಸಹ ಹಾಜರಾಗಬಾರದು. ಹಲವಾರು ವರ್ಷಗಳಿಂದ ಪಂಕಾ ಮಸೀದಿಯಿಂದಲೇ ವಿವಿಧ ಆಚರಣೆಗಳಿಗೆ ಅಡ್ಡಿಯುಂಟಾಗುತ್ತಿದೆ. ಮಸೀದಿ ಮೇಲೆ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಕುಮಾರಸ್ವಾಮಿ ಹಿರೇಮಠ, ರವಿ ಪಟ್ಟಣದ, ಬಸವರಾಜ ಯಂಕಂಚಿ ಇದ್ದರು.