ಹುನಗುಂದ ತಾಲೂಕಿನ ಅಮರಾವತಿಯ ಬೈಲಬಸವೇಶ್ವರ ಜಾತ್ರಾಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಚಿವ ವಿಜಯಾನಂದ ಕಾಶಪ್ಪನವರ ಮಾತನಾಡಿದರು. ದೇವಾನಂದ ಕಾಶಪ್ಪನವರ, ಅಮೀನಪ್ಪ ಸಂದಿಗವಾಡ, ಅಂದಾನೆಪ್ಪ ಹವಾಲ್ದಾರ್, ಬಸವರಾಜ ಗೌಡರ ಇತರರಿದ್ದರು. 
ಬಾಗಲಕೋಟೆ

ಸಾಮೂಹಿಕ ವಿವಾಹ ಸಾಮಾಜಿಕ ಸಮಾನತೆ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಸಚಿವ ವಿಜಯಾನಂದ ಕಾಶಪ್ಪನವರ ಹೇಳಿಕೆ
  • ಅಮರಾವತಿಯ ಬೈಲ ಬಸವೇಶ್ವರ ಜಾತ್ರೋತ್ಸವ
  • ಮಧ್ಯಮ ವರ್ಗದ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಸಾಮೂಹಿಕ ಮದುವೆಗಳನ್ನು ಆಯೋಜಿಸಲಾಗುತ್ತಿದೆ.
ಹುನಗುಂದ: ಕಳೆದ ಎರಡು ದಶಕಗಳಿಂದ ಬಡವರ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಸಾಮೂಹಿಕ ಮದುವೆಗಳನ್ನು ಆಯೋಜಿಸಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಖರ್ಚಿನ ಹೊರೆ ಕಡಿಮೆ ಮಾಡುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು.
ತಾಲೂಕಿನ ಅಮರಾವತಿ ಗ್ರಾಮದ ಬೈಲ ಬಸವೇಶ್ವರ ಜಾತ್ರೋತ್ಸವ ಹಾಗೂ 20ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವದಂಪತಿಗೆ ಆಶೀರ್ವದಿಸಿ ಅವರು ಮಾತನಾಡಿದರು.
ಈ ಬಾರಿ ಬರ ಪರಿಸ್ಥಿತಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಅಗತ್ಯವಿರುವ ಹಣಕಾಸು, ಆಹಾರ, ಕುಡಿಯುವ ನೀರು ಹಾಗೂ ಇತರ ವ್ಯವಸ್ಥೆಗಳನ್ನು ಮಾಡುವುದು ಸವಾಲಾಗಿದೆ. ಆದರೂ ಬಡ ಕುಟುಂಬಗಳ ಹಿತದೃಷ್ಟಿಯಿಂದ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿರುವದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಬೈಲಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಟಿ.ಎಸ್. ರಡ್ಡೇರ ಮಾತನಾಡಿ, ಸಾಮೂಹಿಕ ಮದುವೆ ಕೇವಲ ಮದುವೆ ಕಾರ್ಯಕ್ರಮವಲ್ಲ, ಅದು ಸಾಮಾಜಿಕ ಸಮಾನತೆ, ಸಹಕಾರ ಮತ್ತು ಮಾನವೀಯ ಪ್ರತೀಕ. ಸಮಾಜದ ದಾನಿಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೈಜೋಡೊಸಿದಾಗ ಇಂತಹ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದರು.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 20 ಜೋಡಿಗಳು ನವಜೀವನಕ್ಕೆ ಕಾಲಿರಿಸಿದರು. ಚಳಗೇರಿ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಗುಳೇದಗುಡ್ಡದ ಡಾ. ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ತಾಪಂ ಮಾಜಿ ಅಧ್ಯಕ್ಷ ಅಮೀನಪ್ಪ ಸಂದಿಗವಾಡ, ಅಂದಾನೆಪ್ಪ ಹವಾಲ್ದಾರ್, ಬಸವರಾಜ ಗೌಡರ, ಮೃತ್ಯುಂಜಯ ಕಪ್ಪರದ , ಇಲಕಲ್ಲ ನಗರಸಭೆ ಮಾಜಿ ಅಧ್ಯಕ್ಷ ದೇವಾನಂದ ಕಾಶಪ್ಪನವರ, ಮುಖಂಡ ಈರಣ್ಣ ಬಂಡಿ, ವೈ.ಬಿ. ಪಾಟೀಲ, ಶರಣಪ್ಪ ಗೋಲಪ್ಪನವರ, ಮಹೇಶಪ್ಪ ಸಜ್ಜನ, ಗುರುಬಸಪ್ಪ ಕೋಟಿ, ಪ್ರಮೀಳಾ ಪಾಟೀಲ ಇತರರಿದ್ದರು. ಮಹಾಂತಯ್ಯ ಹಿರೇಮಠ ಸ್ವಾಗತಿಸಿದರು. ಜಗದೀಪ ಪತ್ತಾರ ನಿರೂಪಿಸಿ ವಂದಿಸಿದರು.