ಹುನಗುಂದದಲ್ಲಿ ನಡೆದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ನೂತನ ದೇವಸ್ಥಾನದ ಅಡಿಗಲ್ಲು ಸಮಾರಂಭವನ್ನು ಗುರುಮಹಾಂತ ಸ್ವಾಮಿಗಳು, ವೇಮನಾನಂದ ಮಹಾಸ್ವಾಮಿ ಹಾಗೂ ದೊಡ್ಡನಗೌಡ ಪಾಟೀಲ ನೆರವೇರಿಸಿದರು. ಬಸವಾನಂದ ಸ್ವಾಮಿಗಳು, ಪಿ.ಎಚ್.ಪೂಜಾರ, ಅಜೇಯಕುಮಾರ ಸರನಾಯಕ, ಸಂಸದ ಪಿ.ಸಿ.ಗದ್ದಿಗೌಡರ ಮತ್ತಿತರರಿದ್ದರು. 
ಬಾಗಲಕೋಟೆ

ಮಲ್ಲಮ್ಮನವರ ಆದರ್ಶ ಸಮಾಜಕ್ಕೆ ಮಾರ್ಗದರ್ಶಿ

ಶಿವಶರಣೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಅವರ ಜೀವನ ಚರಿತ್ರೆಯನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಬೇಕೆಂದು ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮಿಗಳು ಆಗ್ರಹಿಸಿದರು.
ನಗರದ ದಾದ್ಮಿ ಎಚ್.ಪಿ. ಪೆಟ್ರೋಲ್‌ ಪಂಪ್ ಹತ್ತಿರ ಭಾನುವಾರ ಹಮ್ಮಿಕೊಂಡಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ನೂತನ ದೇವಸ್ಥಾನ ಕಟ್ಟಡದ ಅಡಿಗಲ್ಲು ಸಮಾರಂಭದದಲ್ಲಿ ಅವರು ಮಾತನಾಡಿದರು.
ಮಲ್ಲಮ್ಮನವರ ಆದರ್ಶ ಜೀವನ ಮೌಲ್ಯಗಳು ಇಂದಿನ ಸಮಾಜಕ್ಕೆ ಮಾರ್ಗದರ್ಶಕವಾಗಿದ್ದು, ಮಹಿಳೆಯರು ಅವರ ಚರಿತ್ರೆಯನ್ನು ಅಭ್ಯಾಸ ಮಾಡಬೇಕು. ಮಲ್ಲಮ್ಮನಂತೆ ಲಿಂಗಧಾರಣೆ ಹಾಗೂ ವಿಭೂತಿ ಧಾರಣೆ ಮೂಲಕ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳಬೇಕೆಂದರು.
ಮಹಾಯೋಗಿ ವೇಮನ ಸಂಸ್ಥಾನಮಠದ ವೇಮನಾನಂದ ಮಹಾಸ್ವಾಮಿ ಮಾತನಾಡಿ, ಹುಟ್ಟು ಮತ್ತು ಸಾವಿನ ನಡುವಿನ ಜೀವನವನ್ನು ಸಾರ್ಥಕಗೊಳಿಸುವುದೇ ಮನುಷ್ಯನ ಧ್ಯೇಯವಾಗಬೇಕು. ಕಾಯಕದಲ್ಲಿ ಸಂಸಾರ ಸಾಗಿಸಿಕೊಂಡು ಆದರ್ಶ ಬದುಕು ನಡೆಸಿದ ಅಪರೂಪದ ಸಾಧ್ವಿ ಮಲ್ಲಮ್ಮ ಎಂದು ಶ್ಲಾಘಿಸಿದರು. ಅವರ ಚರಿತ್ರೆ ಆಧ್ಯಾತ್ಮಿಕ ಸಾಹಿತ್ಯಕ್ಕಿಂತಲೂ ಜನಜೀವನಕ್ಕೆ ಹತ್ತಿರವಾಗಿದೆ ಎಂದರು.
ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿ, ದೇವಸ್ಥಾನ ನಿರ್ಮಾಣ ಮಾತ್ರ ಸಾಕಾಗುವುದಿಲ್ಲ, ಮಲ್ಲಮ್ಮನವರ ಆದರ್ಶ, ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾರ್ಥಕತೆ ದೊರೆಯುತ್ತದೆ. ಮಲ್ಲಮ್ಮ ರೆಡ್ಡಿ ಸಮಾಜಕ್ಕೆ ಮಾತ್ರ ಸೀಮಿತಳಲ್ಲ, ಇಡೀ ‌ಸ್ತ್ರೀ
ಕುಲದ ಅನರ್ಘ ರತ್ನಳಾಗಿದ್ದಾಳೆ. ಸಮಾಜದಲ್ಲಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರನ್ನು ಮೇಲಕ್ಕೆತ್ತುವ ಕಾರ್ಯ ನಡೆಯಬೇಕು ಎಂದು ಕರೆ ನೀಡಿದರು.
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ರೆಡ್ಡಿ ಸಮಾಜ ಒಗ್ಗಟ್ಟಿನಿಂದ ದೇವಸ್ಥಾನ, ಮಂಗಳಭವನ ಹಾಗೂ ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ ಮುಂದಾಗಬೇಕು. ಸಮಾಜದ ಜಾಗಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಅಭಿನಂದಿಸಿದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿದರು. ಲೋಕಾಪೂರದ ಬಸವಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ನಾರಾಯಣ ಬಾಂಡಗೆ, ಅಜೇಯಕುಮಾರ ಸರನಾಯಕ, ಸಂಸದ ಪಿ.ಸಿ.ಗದ್ದಿಗೌಡರ, ದೇವಸ್ಥಾನ ಕಟ್ಟಡದ ಮಹಾದಾನಿ ಶಂಕರಪ್ಪ ಸಂಗಪ್ಪ ಬೆಳ್ಳಿಹಾಳ, ಗಿರಿಜಾ ಶಂಕರಪ್ಪ ಬೆಳ್ಳಿಹಾಳ, ನಾಗಪ್ಪ ಹದ್ಲಿ, ರೆಡ್ಡಿ ಸಮಗ್ರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಕಾಮಾ, ಬದಾಮಿ ತಾಲೂಕಿನ ರೆಡ್ಡಿಸಮಾಜದ ಅಧ್ಯಕ್ಷ ಡಿ.ಎಂ.ಪೈಲ, ಉಪಾಧ್ಯಕ್ಷ ಮರಿಯಪ್ಪ ದೇವರಡ್ಡಿ, ಪರಶುರಾಮನಗೌಡ ಹನಮಗೌಡರ, ಪ್ರಸನ್ನ ನಾಗರಾಳ, ದ್ಯಾವಪ್ಪ ಪೈಲ, ತಿಮ್ಮಣ್ಣ ಭಾವಿಕಟ್ಟಿ ಮತ್ತಿತರರಿದ್ದರು.