ಬಾಗಲಕೋಟೆ ತಾಲೂಕಿನ ಮುರನಾಳ ಗ್ರಾಮದಲ್ಲಿ ಬುಧವಾರ ಸಂಜೆ ಸಾವಿರಾರು ಭಕ್ತರ ಜಯ ಘೋಷಗಳ ನಡುವೆ ಜಗದ್ಗುರು ಮಳೆರಾಜೇಂದ್ರಸ್ವಾಮಿ ಮಠದ ಮಹಾರಥೋತ್ಸವ ಜರುಗಿತು. 
ಬಾಗಲಕೋಟೆ

ಮಳೆ ರಾಜೇಂದ್ರಸ್ವಾಮಿ ಮಹಾ ರಥೋತ್ಸವ ಸಂಭ್ರಮ

ಪ್ರಮುಖ ಮುಖ್ಯಾಂಶಗಳು

  • ಮುರನಾಳ
  • ಮಳೆ ರಾಜೇಂದ್ರಸ್ವಾಮಿ
ಬಾಗಲಕೋಟೆ: ಜಲತತ್ವ ಸಿದ್ಧಾಂತದ, ಮಳೆ ಆರಾಧನೆಯ ಶ್ರೀ ಮಳೆ ರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಹೊಸ ಮುರನಾಳದಲ್ಲಿ ಸಹಸ್ರಾರು ಭಕ್ತರ ಮಧ್ಯೆ ಮಹಾ ರಥೋತ್ಸವ ಸಂಭ್ರಮ ಸಡಗರದಿಂದ ಜರುಗಿತು.
ಬೆಳಗ್ಗೆ ಮಳೆ ರಾಜೇಂದ್ರಸ್ವಾಮಿಯ ಮೂರ್ತಿಗೆ ಪಂಚಾಮೃತ ಅಭಿಷೇಕ, ಮಹಾ ಮಂಗಳಾರುತಿ, ಭಗವದ್ಗೀತಾ ಪಾರಾಯಣ ನಡೆಯಿತು. ಹರಕೆ ಹೊತ್ತ ಅನೇಕ ಭಕ್ತಾಧಿಗಳು ದೀರ್ಘದಂಡ ನಮಸ್ಕಾರಗಳನ್ನು ಹಾಕಿ ತಮ್ಮ ಹರಕೆ ತೀರಿಸಿಕೊಂಡರು. ಮಧ್ಯಾಹ್ನ ಮಹಿಳೆಯರ ಆರತಿ ಸೇವೆಯೋಂದಿಗೆ ಮಳೆ ರಾಜೇಂದ್ರ ಸ್ವಾಮಿಯ ಮೂರ್ತಿ ಹೊತ್ತ ಪಲ್ಲಕ್ಕಿ, ಕುದುರೆಯನ್ನೇರಿದ ಶ್ರೀ ಆದಿತ್ಯಾನಂದ ಸ್ವಾಮಿಗಳು, ಬಾಜಾ ಭಜಂತ್ರಿ ಕರಡಿಮಜಲು ಸೇರಿ ನಂದಿಕೋಲು, ಪುರವಂತರ ಸೇವೆಯೊಂದಿಗೆ ಉತ್ಸವ ಸಣ್ಣ ತೇರು ನಡೆಯಿತು. ಮುಸ್ಲಿಂ ಮಹಿಳೆಯರು ದೀಪದ ಆರತಿಗಳಿಗೆ ಎಣ್ಣೆ ನೀಡಿ ತಮ್ಮ ಸೇವೆ ಸಲ್ಲಿಸಿದರು. ಸಣ್ಣ ರಥೋತ್ಸವ ನಂತರ ಶ್ರೀ ಮಠದಲ್ಲಿ ಮಳೆ ರಾಜೇಂದ್ರಸ್ವಾಮಿ ಮೂರ್ತಿಗೆ ಮಠದ ಶ್ರೀಗಳಾದ ಗುರಲಿಂಗಸ್ವಾಮಿಗಳು ಹಾಗೂ ನವೀನಸ್ವಾಮಿಗಳು ಸಕಲ ಭಕ್ತಾದಿಗಳೊಡನೆ ವಿಶೇಷ ಮಂಗಳಾರತಿ ನೆರವೇರಿಸಿದರು. ಸಂಜೆ ಸಹಸ್ರಾರು ಜನರ ಮಧ್ಯ ಜಗದ್ಗುರು ಮಳೆ ರಾಜೇಂದ್ರಸ್ವಾಮಿಯ ಮಹಾರಥೋತ್ಸವ ಜರುಗಿತು.
ಜಾತ್ರೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು, ಚಿಕ್ಕ ಮಂಗಳೂರು, ಗೋವಾ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಿಂದಲೂ ಭಕ್ತಾಧಿಗಳು ಭಾಗವಹಿಸಿದ್ದರು.