ಮಹಾಲಿಂಗಪುರದ ಕೆಎಲ್‌ಇ ಎಸ್‌ಸಿಪಿ ಮಹಾವಿದ್ಯಾಲಯದಲ್ಲಿ ನಡೆದ ’ಸಂಕಲ್ಪ’ ಇಂಡಕ್ಷನ್ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಶಂಕರ ಅರಬಳ್ಳಿ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಎನ್.ಬಿ. ಪಾಟೀಲ, ಸುನಂದಾ ಸೊರಗಾಂವಿ, ಸಿ.ಎಂ. ಐಗಳಿ, ಎಂ. ಉಗಾರೆ, ಡಾ. ಎಸ್.ಸಿ. ಬಿಜ್ಜರಗಿ ಇತರರಿದ್ದರು. 
ಬಾಗಲಕೋಟೆ

ಜ್ಞಾನ, ಕೌಶಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಸಹಾಯಕ ಪ್ರಾಧ್ಯಾಪಕ ಶಂಕರ ಅರಬಳ್ಳಿ ಹೇಳಿಕೆ
  • ಐದು ದಿನಗಳ ಸಂಕಲ್ಪ ಇಂಡಕ್ಷನ್ ಕಾರ್ಯಕ್ರಮ
  • ಶಿಸ್ತು, ಆತ್ಮವಿಶ್ವಾಸ, ಸಮಯಪಾಲನೆ ಹಾಗೂ ನಿರಂತರ ಕಲಿಕೆಯ ಮನೋಭಾವ ಬೆಳೆಸಿಕೊಂಡರೆ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಬಹುದು.
ಮಹಾಲಿಂಗಪುರ: ಶಿಸ್ತು, ಆತ್ಮವಿಶ್ವಾಸ, ಸಮಯಪಾಲನೆ ಹಾಗೂ ನಿರಂತರ ಕಲಿಕೆಯ ಮನೋಭಾವ ಬೆಳೆಸಿಕೊಂಡರೆ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಹುನ್ನೂರಿನ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಂಕರ ಅರಬಳ್ಳಿ ಹೇಳಿದರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಚನ್ನಗಿರೀಶ್ವರ ಪ್ರಸಾದಿಕ ಕಲಾ, ವಿಜ್ಞಾನ ಹಾಗೂ ಡಿ.ಡಿ. ಶಿರೋಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನೂತನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಐದು ದಿನಗಳ ’ಸಂಕಲ್ಪ’ ಇಂಡಕ್ಷನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಂದೆ-ತಾಯಿಯ ಕನಸುಗಳನ್ನು ನನಸು ಮಾಡುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿಯಾಗಿದೆ. ಉನ್ನತ ಶಿಕ್ಷಣದ ಅವಧಿಯನ್ನು ಜ್ಞಾನ, ಕೌಶಲ ಹಾಗೂ ವ್ಯಕ್ತಿತ್ವ ವಿಕಾಸಕ್ಕೆ ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಎನ್.ಬಿ. ಪಾಟೀಲ ಮಾತನಾಡಿ, ಇಂಡಕ್ಷನ್ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಕಾಲೇಜಿನ ಶೈಕ್ಷಣಿಕ ವ್ಯವಸ್ಥೆ, ಲಭ್ಯವಿರುವ ಸೌಲಭ್ಯಗಳು, ಶಿಸ್ತು, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಕುರಿತು ಸಮಗ್ರ ಪರಿಚಯ ನೀಡಲಾಗುತ್ತಿದೆ. ಕಾಲೇಜಿನ ಎಲ್ಲ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ವಿದ್ಯಾಭ್ಯಾಸದೊಂದಿಗೆ ಆದರ್ಶ ವ್ಯಕ್ತಿತ್ವ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಐಕ್ಯೂಎಸಿ ಸಂಯೋಜಕಿ ಸುನಂದಾ ಸೊರಗಾಂವಿ, ಸಿ.ಎಂ. ಐಗಳಿ, ಎಂ. ಉಗಾರೆ, ಡಾ. ಎಸ್.ಸಿ. ಬಿಜ್ಜರಗಿ, ಎಂ.ಬಿ. ಧರಿಗೌಡರ ಸೇರಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.