ಮುಧೋಳ ಎಪಿಎಂಸಿ ಆವರಣದಲ್ಲಿ ಮಂಗಳವಾರ ಮೆಕ್ಕೆಜೋಳದ ಖರೀದಿಯ ನೋಂದಣಿಗೆ ಕಾರ್ಯಕ್ಕೆ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಚಾಲನೆ ನೀಡಿ, ನೋಂದಣಿ ಪ್ರಕ್ರಿಯೆ ಪರಿಶೀಲಿಸಿದರು.
- ಮುಧೋಳದಲ್ಲಿ ಉಸ್ತುವಾರಿ ಸಚಿವ ತಿಮ್ಮಾಪುರ ಚಾಲನೆ
- ಕ್ವಿಂಟಾಲ್‌ಗೆ 2150 ರೂ. ನಿಗದಿ
- ರೈತರು ಹೊಂದಿರುವ ಜಮೀನಿನ ವಿಸ್ತೀರ್ಣಕ್ಕನುಗುಣವಾಗಿ ಗರಿಷ್ಠ 50 ಕ್ವಿಂಟಾಲ್‌ಗೆ ಮಿತಿಗೊಳಿಸಲಾಗಿದೆ.
ಬಾಗಲಕೋಟೆ: ಪ್ರಸಕ್ತ ಸಾಲಿನ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಎ್ಎಕ್ಯೂ ಗುಣಮಟ್ಟದ ಮೆಕ್ಕೆಜೋಳ ಖರೀದಿಯ ನೋಂದಣಿ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಂಗಳವಾರ ಚಾಲನೆ ನೀಡಿದರು.
ಮುಧೋಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಆದೇಶದನ್ವಯ ಪ್ರಸಕ್ತ ಸಾಲಿಗೆ ಮುಂಗಾರು ಹಂಗಾಮಿಗೆ ಮೆಕ್ಕೆಜೋಳವನ್ನು ಎಪಿಎಂಸಿ ಮಾರುಕಟ್ಟೆಗಳಲ್ಲಿ ಆಗುವ ವಹಿವಾಟಿನ ಧಾರಣೆಯ ಆಧಾರದ ಮೇಲೆ ರೈತರಿಗೆ ಬೆಲೆ ವ್ಯತ್ಯಾಸದ ಮೊತ್ತವನ್ನು ಡಿಬಿಟಿ ಮುಖಾಂತರ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತದೆ ಎಂದು ತಿಳಿಸಿದರು.
ಮಾರುಕಟ್ಟೆ ಮಧ್ಯ ಪ್ರವೇಶದ ದರ ಪ್ರತಿ ಕ್ವಿಂಟಾಲ್ ಗೆ ಗರಿಷ್ಠ 2150 ರೂ. ಗಳನ್ನು ನಿಗದಿಪಡಿಸಿದೆ. ಪ್ರತಿ ಎಕರೆಗೆ 12 ಕ್ವಿಂಟಾಲ್ ನಂತೆ ಫ್ರೂಟ್ಸ್ ತಂತ್ರಾಂಶದಲ್ಲಿ ಲಭ್ಯವಾಗುವ ರೈತರು ಹೊಂದಿರುವ ಜಮೀನಿನ ವಿಸ್ತೀರ್ಣಕ್ಕನುಗುಣವಾಗಿ ಗರಿಷ್ಠ 50 ಕ್ವಿಂಟಾಲ್‌ಗೆ ಮಿತಿಗೊಳಿಸಲಾಗಿದೆ.
ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಾಲ್‌ಗೆ 1900 ರೂ. ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ಮಾರಾಟವಾದರೆ ಪ್ರತಿ ಕ್ವಿಂಟಾಲ್‌ಗೆ ಗರಿಷ್ಠ 250 ರೂ. ಗಳಂತೆ ಪಾವತಿಸಲಾಗುತ್ತದೆ. ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಾಲ್‌ಗೆ 1950 ರೂ. ಗಳಂತೆ ಮಾರಾಟವಾದಲ್ಲಿ ವ್ಯತ್ಯಾಸದ ಮೊತ್ತ 200 ರೂ. ಗಳಂತೆ ಪ್ರತಿ ಕ್ವಿಂಟಾಲ್‌ಗೆ ಪಾವತಿಸಲಾಗುತ್ತದೆ. ಪ್ರತಿ ಕ್ವಿಂಟಾಲ್‌ಗೆ 2000 ರೂ. ಗಳಂತೆ ಮಾರಾಟವಾದಲ್ಲಿ ವ್ಯತ್ಯಾಸದ ಮೊತ್ತ 150 ರೂ. ಗಳಂತೆ ಪ್ರತಿ ಕ್ವಿಂಟಾಲ್‌ಗೆ ಪಾವತಿಸಲಾಗುತ್ತದೆ. ಕ್ವಿಂಟಾಲ್‌ಗೆ 2100 ರೂ. ಗಳಂತೆ ಮಾರಾಟವಾದಲ್ಲಿ ವ್ಯತ್ಯಾಸದ ಮೊತ್ತ 50 ರೂ. ಗಳಂತೆ ಪಾವತಿಸಲಾಗುತ್ತದೆ. ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಾಲ್‌ಗೆ 2150 ರೂ. ಅಥವಾ ಅದಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟವಾದಲ್ಲಿ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲವೆಂದು ವಿವರಿಸಿದರು.
ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಈಗಾಗಲೇ ಎಥೆನಾಲ್ ಉತ್ಪಾದನೆಗಾಗಿ ಹಾಗೂ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಕ್ಕೆ ಅವಶ್ಯವಿರುವ ಮೆಕ್ಕೆಜೋಳ ಪೂರೈಕೆ ಮಾಡಿರುವ ರೈತರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಸದರಿ ಯೋಜನೆಯ ಅನುಷ್ಠಾನ ಅವಧಿಯು ಮೆಕ್ಕೆಜೋಳ ಉತ್ಪನ್ನದ ಮೊದಲ ವಹಿವಾಟು ಯುಎಂಪಿ ತಂತ್ರಾಂಶದಲ್ಲಿ ಆಗುವ ದಿನಾಂಕದಿಂದ ಒಂದು ತಿಂಗಳ ಅವಧಿಯವರೆಗೆ ಚಾಲ್ತಿಯಲ್ಲಿರುತ್ತದೆ ಎಂದರು.
ಈ ಯೋಜನೆಯ ಪ್ರಯೋಜನ ಪಡೆಯಲು ಬಾಗಲಕೋಟೆ ಜಿಲ್ಲೆಯ ಎಲ್ಲಾ ರೈತ ಬಾಂಧವರು ನೋಂದಣಿ ಸ್ಥಳಗಳಲ್ಲಿ ಆಧಾರ ಕಾರ್ಡ್, ಫ್ರೂಟ್ಸ್ ಗುರುತಿನ ಸಂಖ್ಯೆಯೊಂದಿಗೆ ಎನ್‌ಇಎಂಎಲ್ ತಂತ್ರಾಂಶದಲ್ಲಿ ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡಿಸಿಕೊಂಡು ಎಪಿಎಂಸಿ ಮಾರುಕಟ್ಟೆ ಪ್ರಾಂಗಣಗಳಲ್ಲಿ ಯುಎಂಪಿ ವೇದಿಕೆಯಲ್ಲಿ ಮೆಕ್ಕೆಜೋಳ ಮಾರಾಟ ಮಾಡಲು ರೈತರಲ್ಲಿ ಮನವಿ ಮಾಡಿಕೊಂಡರು.
ಜಂಟಿ ಕೃಷಿ ನಿರ್ದೇಶಕ ರುದ್ರೇಶ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಂಟಿ ತೋಟಗಾರಿಕೆ ನಿರ್ದೇಶಕ ರವೀಂದ್ರ ಹಕಾಟಿ, ಮುಧೋಳ ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸಂಗಪ್ಪ ಇಮ್ಮನ್ನವರ, ಉಪಾಧ್ಯಕ್ಷ ಭೀಮಪ್ಪ ಮೆಟಗುಡ್ಡ, ಸದಸ್ಯರಾದ ಮಲ್ಲಪ್ಪ ಮಂಟೂರ, ವೆಂಕಟೇಶ ಅಂಕಲಗಿ, ಲಕ್ಕಪ್ಪ ಹಂಚಿನಾಳ, ಸೋಮಪ್ಪ ಹೊಟ್ಟೆಪ್ಪನವರ, ಪಾಂಡುರಂಗ ಹೂವನ್ನವರ, ದಾನಪ್ಪ ಕವಳ್ಳಿ, ಪ್ರಕಾಶ ತಳಗೇರಿ, ಶಿವಾನಂದ ಉದುಪುಡಿ, ಸದುಗೌಡ ಪಾಟೀಲ, ದುಂಡಪ್ಪ ಭರಮನಿ, ಮುತ್ತಪ್ಪ ಚೌಧರಿ ಇತರರು ಉಪಸ್ಥಿತರಿದ್ದರು.