ಅಥಣಿ ಹಾಗೂ ರಬಕವಿ-ಬನಹಟ್ಟಿ ತಾಲೂಕಿಗೆ ಮಹತ್ತರ ಸಂಪರ್ಕ ಹೊಂದುವ ಮಹಿಷವಾಡಗಿ ಸೇತುವೆ ಕಾಮಗಾರಿ ಚುರುಕಿನಿಂದ ನಡೆಯುತ್ತಿರುವುದು.
- ಒಟ್ಟು 55 ಕೋಟಿ ರೂ.ಗಳ ಕಾಮಗಾರಿ
- ಬೇಸಿಗೆಯೊಳಗೆ ಪಿಲ್ಲರ್ ಪೂರ್ಣಗೊಳಿಸಲು ಒತ್ತಾಯ
ರಬಕವಿ/ಬನಹಟ್ಟಿ: ಅಥಣಿ ಹಾಗೂ ರಬಕವಿ-ಬನಹಟ್ಟಿ ತಾಲೂಕುಗಳ ನಡುವಿನ ಸಂಪರ್ಕವನ್ನು ಸುಗಮಗೊಳಿಸಲಿರುವ ಮಹಿಷವಾಡಗಿ ಸೇತುವೆ ನಿರ್ಮಾಣ ಕಾಮಗಾರಿಗೆ ಇದೀಗ ವೇಗ ಸಿಕ್ಕಿದ್ದು, ಸ್ಥಳೀಯ ರೈತರು ಹಾಗೂ ನಾಗರಿಕರಲ್ಲಿ ನಿರೀಕ್ಷೆ ಮೂಡಿಸಿದೆ.
ಕಳೆದ ಏಳೆಂಟು ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಕುರಿತು `ವಿಜಯವಾಣಿ' ಆಗಾಗ ವರದಿಮಾಡುತ್ತಾ ಬಂದಿದ್ದರಿಂದ ಮತ್ತು ಡಾ. ರವಿ ಜಮಖಂಡಿಯವರ ಉಪವಾಸ ಸತ್ಯಾಗ್ರಹಕ್ಕೆ ಮಣಿದ ಸರ್ಕಾರ ಚುರುಕುಗೊಂಡಿದೆ. ಕಳೆದ ಮೂರು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ 10 ಕೋಟಿ ರೂ. ಗಳ ಹೆಚ್ಚುವರಿ ಕಾಮಗಾರಿಯಿಂದ ಒಟ್ಟು 55 ಕೋಟಿ ರೂ.ಗಳ ಕಾರ್ಯ ನಿರ್ಮಾಣವಾಗುತ್ತಿದೆ.
ಬೇಸಿಗೆಯೊಳಗಾಗಿ ನದಿಯೊಳಗಿನ ಎಲ್ಲ ಪಿಲ್ಲರ್‌ಗಳ ಕಾರ್ಯ ಸಂಪೂರ್ಣಗೊಳ್ಳಬೇಕಿದೆ. ಈಗಾಗಲೇ ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದತ್ತ ಸೇತುವೆಗೆ ಸಂಬಂಧಿಸಿದ ಕಾರ್ಯಕ್ಕೆ ವೇಗ ಪಡೆದಿದೆ.. ಮುಂದಿನ ದಿನಗಳಲ್ಲಿ ರಬಕವಿ-ಬನಹಟ್ಟಿ ಕಡೆ ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣಗೊಳ್ಳಲಿದ್ದು, ಶೀಘ್ರವೇ ಕಾಮಗಾರಿ ನಡೆಯಲಿದೆ.
ಸದ್ಯ ನದಿಯೊಳಗೆ ಎರಡು ಪಿಲ್ಲರ್ ಅಳವಡಿಕೆ ಕಾರ್ಯ ನಡೆಯಬೇಕಿದೆ. ನದಿಯೊಳಗೆ ನೀರಿನ ಪ್ರಮಾಣ ಕಡಿಮೆಯಿದ್ದು, ಈಗಲೇ ಕಾರ್ಯ ಚುರುಕುಗೊಳಿಸಬೇಕಿದೆ. ಇನ್ನೆರಡು ತಿಂಗಳ ನಂತರ ಮಳೆಗಾಲ ಕಾರಣ ಮತ್ತೇ ಮಹಾರಾಷ್ಟ್ರದಿಂದ ನೀರು ಕೃಷ್ಣೆಗೆ ಹರಿದು ಬರುವುದರಿಂದ ನದಿಯೊಳಗಿನ ಕಾಮಗಾರಿಗೆ ಸಮಸ್ಯೆ ಎದುರಾಗಲಿದ್ದು, ತಕ್ಷಣವೇ ಪಿಲ್ಲರ್ ಅಳವಡಿಕೆ ಕಾರ್ಯ ನಡೆಯಬೇಕೆಂಬುವುದು ಅವಳಿ ನಗರದ ಜನರ ಒತ್ತಾಯವಾಗಿದೆ.