ಮಹಿಷವಾಡಗಿ ಸೇತುವೆ ಕಾಮಗಾರಿಯನ್ನು ಆರಂಭಿಸುವಂತೆ ರಬಕವಿ ಶಂಕರಲಿಂಗ ದೇವಸ್ಥಾನದ ಎದುರಿನ ಆವರಣದಲ್ಲಿ ಡಾ. ರವಿ ಜಮಖಂಡಿ ನೇತೃತ್ವದಲ್ಲಿ ಮಂಗಳವಾರದಿಂದ ಹೋರಾಟ ಆರಂಭಗೊಂಡಿತು. ಮಹಾದೇವ ಧೂಪದಾಳ, ಸತೀಶ ಹಜಾರೆ, ಬ್ರಿಜ್‌ಮೋಹನ್ ಡಾಗಾ, ಪ್ರಭು ಪೂಜಾರಿ, ಧರೆಪ್ಪ ಉಳ್ಳಾಗಡ್ಡಿ ಇದ್ದರು.
- ಡಾ. ರವಿ ಜಮಖಂಡಿ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ
- ಅಥಣಿ-ರಬಕವಿ- ಬನಹಟ್ಟಿ ತಾಲೂಕುಗಳ ಸಂಪರ್ಕ ಕೊಂಡಿ
- ಸೇತುವೆ ಕಾಮಗಾರಿ ಪುನರಾರಂಭಕ್ಕೆ ಒತ್ತಾಯ
ರಬಕವಿ-ಬನಹಟ್ಟಿ : ಹತ್ತು ವರ್ಷಗಳ ಹಿಂದೆ ಪ್ರಾರಂಭವಾಗಿ ಇಂದಿಗೂ ಪೂರ್ಣಗೊಳ್ಳದ ಮಹಿಷವಾಡಗಿ ಸೇತುವೆ ಕಾಮಗಾರಿಯನ್ನು ಪುನರಾರಂಭಿಸಿ ಸಂಪೂರ್ಣಗೊಳಿಸುವಂತೆ ಆಗ್ರಹಿಸಿ ರಬಕವಿ ಶಂಕರಲಿಂಗ ದೇವಸ್ಥಾನದ ಎದುರಿನ ಆವರಣದಲ್ಲಿ ಡಾ. ರವಿ ಜಮಖಂಡಿ ನೇತೃತ್ವ ಹಾಗೂ ಅವಳಿ ನಗರದ ಸಮಸ್ತ ಜನರ ಸಮ್ಮುಖದಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಹೋರಾಟಗಾರ ಡಾ. ರವಿ ಜಮಖಂಡಿ, ಅವಳಿ ನಗರಗಳು ಆರ್ಥಿಕ ಸ್ಥಿತಿಯಿಂದ ಹಿಂದೆ ಉಳಿಯುತ್ತಿದೆ. ಜವಳಿ ವ್ಯಾಪಾರ ಸಂಪೂರ್ಣ ಕುಸಿಯುತ್ತಿದೆ. ಅಭಿವೃದ್ಧಿ ಸಂಪೂರ್ಣ ಶೂನ್ಯವಾಗಿದೆ. 30 ಕೋಟಿ ರೂ. ಮೊತ್ತದ ಗುತ್ತಿಗೆಯಾಗಿದ್ದರೂ ಸಹ ಮಹಿಷವಾಡಗಿ ಸೇತುವೆ ಇಂದಿಗೂ ಮುಗಿದಿಲ್ಲ. ಈ ಬಗ್ಗೆ ಅಧಿಕಾರಿಗಳು, ಜನ ಪ್ರತಿನಿಧಿಗಳು ನಿರ್ಲಕ್ಷೃ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಐದು ವರ್ಷಗಳಲ್ಲಿ ಕೇವಲ ಶೇ. 25ರಷ್ಟು ಮಾತ್ರ ಕಾಮಗಾರಿ ನಡೆದಿದೆ. ನೀರು ಖಾಲಿಯಾದಾಗ ಮಾತ್ರ ಕಾಮಗಾರಿ ಮಾಡುವ ಟೆಂಡರ್ ಇದಾಗಿದೆ. ಆದರೆ ನೀರು ಕಳೆದ ಐದು ವರ್ಷದಿಂದ ನದಿಯಲ್ಲಿ ಖಾಲಿಯಾಗಿಲ್ಲ. ಹಿಪ್ಪರಗಿ ಅಣೆಕಟ್ಟೆ ಹಿನ್ನೀರಿನಿಂದ ಅನೇಕ ನೀರಾವರಿ ಯೋಜನೆಗಳು ಇರುವುದರಿಂದ ನೀರಂತರ 6 ಟಿಎಂಸಿ ನೀರು ಸಂಗ್ರಹವಾಗಿರುತ್ತದೆ. ಹಣ ಸಾಲದು ಎಂಬ ಕಾರಣಕ್ಕೆ ಇದಕ್ಕೆ ಪೂರಕವಾಗಿ 2021ರಲ್ಲಿ ಕಾಮಗಾರಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಕಾಮಗಾರಿ ಮೊತ್ತ 50 ಕೋಟಿ ರೂ. ವರೆಗೆ ಹೆಚ್ಚಳಗೊಳಿಸಲಾಗಿದೆ. ಆದರೂ ಯಾರೊಬ್ಬರೂ ಆಸಕ್ತಿ ವಹಿಸಿಲ್ಲ ಎಂದು ಕಿಡಿಕಾರಿದರು.
ಹಿರಿಯರಾದ ಭೀಮಶಿ ಮಗದುಮ, ಪ್ರವೀಣ್ ಹಜಾರೆ, ಮಹಾದೇವ ಧೂಪದಾಳ, ಧರೆಪ್ಪ ಉಳ್ಳಾಗಡ್ಡಿ, ರಾಮಣ್ಣ ಹುಲಕುಂದ, ಸತೀಶ ಹಜಾರೆ, ಗಜಾನನ ವಜ್ರಮಟ್ಟಿ, ಸಂಜಯ ತೆಗ್ಗಿ, ರವಿ ಗಡಾದ, ನೀಲಕಂಠ ಮುತ್ತೂರ, ಚಿದಾನಂದ ಗಾಳಿ, ಬಸವರಾಜ ತೆಗ್ಗಿ, ಸುರೇಶ ಚಿಂಡಕ, ಬ್ರಿಜ್‌ಮೋಹನ ಡಾಗಾ. ಶ್ರೀಶೈಲ ದಲಾಲ, ಬಸವರಾಜ ದಲಾಲ, ಬಾಬು ಮಹಾಜನ್ ಇತರರಿದ್ದರು.