ರಬಕವಿ/ಬನಹಟ್ಟಿ ತಾಲೂಕಿನ ಮಹಿಷವಾಡಗಿ ಸೇತುವೆಯ 7 ಮತ್ತು 8 ನಂಬರ್ ಪಿಲ್ಲರ್‌ಗಳ ಕಾರ್ಯ ಪೂರ್ಣಗೊಳಿಸಿರುವುದು. 
ಬಾಗಲಕೋಟೆ

ಮಹಿಷವಾಡಗಿ ಸೇತುವೆ ಪಿಲ್ಲರ್ ಕಾಮಗಾರಿ ಕಾರ್ಯಪೂರ್ಣ

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ಶಾಸಕರ ಅಸಹಕಾರಕ್ಕೆ ಬೇಸರ
  • ನೀರೊಳಗಿನ ಕಾರ್ಯ ಯಶಸ್ವಿಗೆ ಅಭಿನಂದನೆ
ರಬಕವಿ/ಬನಹಟ್ಟಿ : ತಾಲೂಕಿನ ಮಹಿಷವಾಡಗಿ ಸೇತುವೆಯ 55 ಕೋಟಿ ರೂ. ಗಳ ಮಹತ್ತರ ಯೋಜನೆಯಾಗಿರುವ ನದಿ ನೀರೊಳಗಿನ ಪಿಲ್ಲರ್ ನಂ. 7 ಮತ್ತು 8ರ ಕಾಮಗಾರಿ ಕಾರ್ಯ ಪೂರ್ಣಗೊಂಡ ನಿಮಿತ್ತ ರಬಕವಿ/ಬನಹಟ್ಟಿ, ಹೊಸೂರ, ರಾಮಪೂರ ಪಟ್ಟಣದ ಹಿರಿಯರು ಸಭೆ ಸೇರಿ ಗುತ್ತಿಗೆದಾರ ಹಾಗೂ ಶ್ರಮಿಸಿದ ಎಲ್ಲರನ್ನು ಅಭಿನಂದಿಸಿದರು.
ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ರಾಮಣ್ಣ ಹುಲಕುಂದ ಮಾತನಾಡಿ, 10 ವರ್ಷಗಳಿಂದ ಮಂದಗತಿಯಲ್ಲಿದ್ದ ಸೇತುವೆ ಕಾಮಗಾರಿ ಈಗಷ್ಟೇ ಸಾರ್ವಜನಿಕರ ಒತ್ತಡದಿಂದ ಚುರುಕುಗೊಂಡಿದೆ. ಸೇತುವೆ ಕಾರ್ಯ ವೇಗಕ್ಕೆ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಸರ್ಕಾರ ಮಟ್ಟದಲ್ಲಿ ಒತ್ತಡ ಹೇರಿದ್ದರ ಕಾರಣ ನಮಗೆ ಸಹಕಾರಿಯಾಗಿದ್ದು ಸತ್ಯ. ಅದರಂತೆ ಸ್ಥಳೀಯ ಶಾಸಕರು ನಮ್ಮೊಂದಿಗೆ ಸಹಕಾರ ನೀಡುವಲ್ಲಿ ವಿಫಲಗೊಂಡಿದ್ದಾರೆಂದು ಬೇಸರ ಹೊರಹಾಕಿದರು.
ಈಗ ನಡೆಯುತ್ತಿರುವ ಕೆಲಸ ಮುನ್ನಡೆಯದಿದ್ದಲ್ಲಿ ಮತ್ತೆ ಹೋರಾಟ ಅನಿವಾರ್ಯವಾಗಿದೆ. ಸರ್ಕಾರ ಹಾಗೂ ಗುತ್ತಿಗೆದಾರರು ಎಚ್ಚೆತ್ತುಕೊಂಡು ಶೀಘ್ರ ಕಾರ್ಯ ಮುಕ್ತಾಯಗೊಳಿಸಬೇಕೆಂದು ತಿಳಿಸಿದರು.
ಉದ್ಯಮಿ ಸಂಜಯ ಜೋತಾವರ ಮಾತನಾಡಿ, ಜನಪ್ರತಿನಿಧಿಯಾದವರು ಅವಳಿ ನಗರದ ಬೇಡಿಕೆಗೆ ಸ್ಪಂದಿಸಬೇಕು. ಕೊಣ್ಣೂರ ಅವರು ಬೆಂಗಳೂರಿನ ಕಾರ್ಯಾಲಯದವರೆಗೂ ಒತ್ತಡ ಹೇರುವಲ್ಲಿ ಪ್ರಮುಖ ಕಾರಣರಾಗಿದ್ದಾರೆ. ಸ್ಥಳೀಯ ಶಾಸಕರು ಇದರ ಬಗ್ಗೆ ಪೂರ್ಣ ಪ್ರಮಾಣದ ಇಚ್ಛಾಶಕ್ತಿ ವಹಿಸದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಅಭಿವೃದ್ಧಿಗೆ ಒತ್ತು ನೀಡುವ ಸಂದರ್ಭ ರಾಜಕೀಯ ಪ್ರೇರಿತ ಸಲ್ಲದು. ನಾವೆಲ್ಲ ಒಗ್ಗಟ್ಟಾಗಿ ಕಾರ್ಯನಿರ್ವಹಣೆಯಿಂದ ನಗರ ಅಭಿವೃದ್ಧಿ ಸಾಧ್ಯ. ಇದರಲ್ಲಿ ಕಾಂಗ್ರೆಸ್-ಬಿಜೆಪಿಯೆಂಬ ಭಿನ್ನತೆಯಿಂದ ದೂರ ಉಳಿದು, ಸರ್ವ ಮುಖಂಡರು ಭಾಗವಹಿಸಿ ಕಾಮಗಾರಿಗಳಿಗೆ ಸಹಕರಿಸಬೇಕಾದ ಅನಿವಾರ್ಯತೆಯಿದೆ ಎಂದು ಬಸವರಾಜ ತೆಗ್ಗಿ ತಿಳಿಸಿದರು.
ಬ್ರಿಜ್‌ಮೋಹನ ಡಾಗಾ, ಗಣಪತರಾವ್ ಹಜಾರೆ, ಡಾ. ರವಿ ಜಮಖಂಡಿ, ಪರಪ್ಪ ಬಿಳ್ಳೂರ, ಕೃಷ್ಣಾ ಲೆಂಡಿ, ಸಂಗಮೇಶ ಮಡಿವಾಳ, ಶಿವಾನಂದ ಕಾಗಿ, ಅಶೋಕ ರಾವಳ, ಬುದ್ದಪ್ಪ ಕುಂದಗೋಳ, ಬಸವರಾಜ ಮನ್ಮಿ, ಈಶ್ವರ ಕಾಡದೇವರ, ಅಶೋಕ ಶಿರಹಟ್ಟಿ, ಪಾರಿಸ ಅಜ್ಜವ್ವಗೋಳ, ಮಲ್ಲಪ್ಪ ಹಿಪ್ಪರಗಿ, ಬಸಯ್ಯ ಉಳವಿಮಠ ಇತರರಿದ್ದರು.