ಮಹಾಲಿಂಗಪುರದಲ್ಲಿ ತಾಲೂಕು ಹೋರಾಟಗಾರರೊಂದಿಗೆ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿದರು. ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಯಲ್ಲನಗೌಡ ಪಾಟೀಲ, ರಂಗನಗೌಡ ಪಾಟೀಲ ಇದ್ದರು.
- ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಭರವಸೆ
- ಕಾಲಾವಕಾಶ ಅಗತ್ಯ
- ಮಹಾಲಿಂಗಪುರ ತಾಲೂಕು ರಚನೆಯಾದರೆ ನನಗೆ ತುಂಬಾ ಖುಷಿ.
ಮಹಾಲಿಂಗಪುರ: ಮಹಾಲಿಂಗಪುರ ತಾಲೂಕು ರಚನೆಯಾದರೆ ನನಗೆ ತುಂಬಾ ಖುಷಿ. ಆದರೆ ಅರ್ಜಿ ಸಲ್ಲಿಸಿದ ತಕ್ಷಣ ಆಗುವುದಿಲ್ಲ. ರಾಜ್ಯದಲ್ಲಿ ನೂತನ ಜಿಲ್ಲೆ, ತಾಲೂಕು ರಚನೆ ವೇಳೆ ತಾಲೂಕು ಘೋಷಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ಪಟ್ಟಣದ ಜಿ.ಎಲ್.ಬಿ.ಸಿ. ಅತಿಥಿ ಗಹದಲ್ಲಿ ಶನಿವಾರ ಸಂಜೆ ತಾಲೂಕು ಹೋರಾಟಗಾರರೊಂದಿಗೆ ಅವರು ಮಾತನಾಡಿ, ರಾಜ್ಯದಲ್ಲಿ ಇದೊಂದೇ ತಾಲೂಕು ಘೋಷಣೆ ಮಾಡಬೇಕೆಂದರೆ ಆಗುವುದಿಲ್ಲ. ಜನಸಂಖ್ಯೆ ಬದಲಾವಣೆ ಅನುಗುಣವಾಗಿ ಲೋಕಸಭೆ, ರಾಜ್ಯ ವಿಧಾನಸಭೆ, ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಗಡಿ ಮರು ನಿಗದಿಪಡಿಸುವ ಅಥವಾ ವಿಂಗಡಿಸುವ ಪ್ರಕ್ರಿಯೆ ನಡೆಯುತ್ತದೆ. ಅದರ ಪ್ರಕಾರ ಮತಕ್ಷೇತ್ರಗಳು ಕೂಡ ಬದಲಾಗುತ್ತವೆ. ಆಗ ತಾಲೂಕು ರಚನೆ ಪ್ರಸಂಗ ಬರುತ್ತದೆ, ತಾಲೂಕು ಆಗುತ್ತದೆ. ತಾಲೂಕು ರಚನೆ ಸಮಿತಿ ಅಸ್ತಿತ್ವಕ್ಕೆ ಬರುತ್ತದೆ. ಇದು ಇರುವ ವ್ಯವಸ್ಥೆ. ನಾನು ಮಹಾಲಿಂಗಪುರ ಋಣ ತೀರಿಸಬೇಕಾಗಿದೆ. ಆದರೆ ಸುಳ್ಳು ಭರವಸೆ ನೀಡುವುದಿಲ್ಲ. ಎಲ್ಲರೂ ಸೇರಿ ಪ್ರಯತ್ನ ಮಾಡೋಣ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ಹೋರಾಟಗಾರರು, ನಮ್ಮ ಮನವಿ ವಿಲೇವಾರಿ ಮಾಡಲಾಗಿದೆ ಎಂದು ಕಂದಾಯ ಸಚಿವರು ಹೇಳಿದ್ದಾರೆ ಎಂದರು. ಅದಕ್ಕೆ ಉತ್ತರಿಸಿದ ಸಚಿವರು, ತಾಲೂಕು ರಚನೆಗೆ ನೂತನ ಪ್ರಕ್ರಿಯೆ ಪ್ರಾರಂಭವಾದಾಗ ಈ ಹಿಂದೆ ವಿಲೇಗೊಳಿಸಲಾಗಿದೆ ಎಂಬ ವರದಿ ಲೆಕ್ಕಕ್ಕೆ ಬರುವುದಿಲ್ಲ. ಮಹಾಲಿಂಗಪುರ ತಾಲೂಕು ಆಗುವುದು ಶತಸಿದ್ಧ ಎಂದು ತಿಳಿಸಿದರು.
ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಯಲ್ಲನಗೌಡ ಪಾಟೀಲ, ಗಂಗಾಧರ ಮೇಟಿ, ರಂಗನಗೌಡ ಪಾಟೀಲ, ನಿಂಗಪ್ಪ ಬಾಳಿಕಾಯಿ, ಪರಪ್ಪ ಬ್ಯಾಕೋಡ, ವಿರೇಶ ಆಸಂಗಿ, ಸಿದ್ದುಗೌಡ ಪಾಟೀಲ, ಶಿವನಗೌಡ ಪಾಟೀಲ, ಎಸ್.ಎಂ. ಪಾಟೀಲ, ರವಿ ಜವಳಗಿ, ಚನ್ನು ದೇಸಾಯಿ, ಸಿದ್ದು ಶಿರೋಳ, ಹಣಮಂತ ಜಮಾದಾರ, ದುಂಡಪ್ಪ ಜಾಧವ, ಶ್ರೀಶೈಲ ಸತ್ತಿಗೇರಿ, ಈಶ್ವರ ಮುರಗೋಡ, ರಾಜೇಂದ್ರ ಮಿರ್ಜಿ, ಜ್ಯೋತೆಪ್ಪ ಕಪರಟ್ಟಿ ಇತರರಿದ್ದರು.