ಬಾಗಲಕೋಟೆ ಬಿವಿವಿ ಸಂಘದ ನೂತನ ಸಭಾ ಭವನದಲ್ಲಿ ಗುರುವಾರ ನಡೆದ ಮಧುರಚೆನ್ನ ಅನುಭಾವಿಯೊಂದಿಗೆ ಅನುಸಂಧಾನ ಏಕವ್ಯಕ್ತಿ ನಾಟಕ ಪ್ರದರ್ಶನ ಸಮಾರಂಭದಲ್ಲಿ ಏಕವ್ಯಕ್ತಿ ನಾಟಕ ಪ್ರದರ್ಶನ ನೀಡಿದ ಜಗದೇವ ಗಲಗಲಿ, ಬಿ.ಆರ್. ಬಸಸೋಡೆ, ಹಾಗೂ ಮಧುರ ಚೆನ್ನ ನಾಟಕ ರಚಸಿ ನಿರ್ದೇಶಿಸಿದ ರಂಗಕರ್ಮಿ ಗಣೇಶ ಅಮೀನಗಡ ಅವರನ್ನು ಸನ್ಮಾನಿಸಲಾಯಿತು.
- ರಂಗಕರ್ಮಿ ಗಣೇಶ ಅಮೀನಗಡ ಅಭಿಮತ
- ಏಕವ್ಯಕ್ತಿ ಕಿರು ನಾಟಕ ಪ್ರದರ್ಶನ
- ಆತ್ಮಕಥೆಗೆ ಕಾದಂಬರಿ ರೂಪ ನೀಡಿದವರು
ಬಾಗಲಕೋಟೆ: ಆಧುನಿಕ ಸಾಹಿತ್ಯದಲ್ಲಿ ಮಧುರ ಚೆನ್ನರಗಿಂತ ಶ್ರೇಷ್ಠ ಸಾಹಿತ್ಯ ಕೃಷಿ ಮಾಡಿದವರು ಬೇರೆ ಯಾರೂ ಇಲ್ಲ. ಕನ್ನಡ ಸಾಹಿತ್ಯದಲ್ಲಿ ಅನುಭಾವದ ಮಧುರತೆ ಕೇಳಿ ಬಂದಿದ್ದು ಮಧುರ ಚೆನ್ನರ ಕಾವ್ಯದಲ್ಲಿ ಎಂದು ರಂಗಕರ್ಮಿ ಗಣೇಶ ಅಮೀನಗಡ ಹೇಳಿದರು.
ಕವಿತಾ ಕಲಾ ತಂಡ ಮೈಸೂರು ಹಾಗೂ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಹಯೋಗದಲ್ಲಿ ಬಿವಿವಿ ಸಂಘದ ನೂತನ ಸಭಾ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಧುರಚೆನ್ನ ಅನುಭಾವಿಯೊಂದಿಗೆ ಅನುಸಂಧಾನ ಏಕವ್ಯಕ್ತಿ ನಾಟಕ ಪ್ರದರ್ಶನ ಸಮಾರಂಭದಲ್ಲಿ ಮಾತನಾಡಿದರು.
ಲಿಪಿಶಾಸ್ತ್ರ, ಶಾಸನ ಶಾಸ್ತ್ರ ,ಭಾಷಾ ಶಾಸ್ತ್ರ , ವ್ಯಾಕರಣ ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರವನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಅರ್ಥೈಸಿಕೊಂಡು ರಚಿಸಿದ ಕೀರ್ತಿ ಮಧುರ ಚೆನ್ನರಿಗೆ ಸಲ್ಲುತ್ತದೆ. 20ನೇ ಶತಮಾನದ ಸಾಹಿತ್ಯ ಲೋಕ ಕಂಡ ಮಹಾನ್ ಆಧ್ಯಾತ್ಮಿಕ ಕವಿ, ಮಧುರ ಚೆನ್ನರು ಕೇವಲ 50 ವರ್ಷ ಬದುಕಿದ್ದರೂ ವಿಶ್ವ ಶ್ರೇಷ್ಠ ಅನುಭಾವ ಸಾಹಿತಿಯಾಗಿ ಅಲೌಕಿಕ ವ್ಯಕ್ತಿಯಾಗಿದ್ದರು, ಆತ್ಮಕಥೆಗೆ ಕಾದಂಬರಿಯ ರೂಪ ಕೊಟ್ಟ ಶ್ರೇಯಸ್ಸು ಮಧುರ ಚೆನ್ನರಿಗೆ ಸಲ್ಲುತ್ತದೆ ಎಂದರು.
ಸಾರಸ್ವತ ಲೋಕಕ್ಕೆ ಮಧುರ ಚೆನ್ನರು ನೀಡಿದ ಕೊಡುಗೆ ಅನುಪಮ. ಅನೇಕ ಪ್ರಕಾರಗಳಲ್ಲಿ ಸಾಹಿತ್ಯ ಮಾಡಿದ ಮಧುರ ಚೆನ್ನರು ಒಬ್ಬ ಶ್ರೇಷ್ಠ ಅನುಭಾವಿ. ಕಾದಂಬರಿ ರೂಪದಲ್ಲಿ ಮೂಡಿ ಬಂದಿರುವ ಅವರ ಆತ್ಮಕಥೆ ಇದಕ್ಕೆ ಉತ್ತಮ ನಿದರ್ಶನವಾಗಿದೆ ಎಂದು ತಿಳಿಸಿದರು.
ಸಂಘದ ಆಡಳಿತಾಽಕಾರಿ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಮಾತನಾಡಿ, ಮಧುರ ಚೆನ್ನರ ಬದುಕಿನ ಇನ್ನೊಂದು ಆಯಾಮವೆಂದರೆ ಅವರ ಆಧ್ಯಾತ್ಮಿಕ ಸಾಧನೆ, ಹನ್ನೆರಡು ತುಂಬಿಲ್ಲ ಕನ್ನಕ್ಕಿ ನಾನಂದು. ನನ್ನ ನಲ್ಲನ ಕತೆಗೆ ಮರುಳುಗೊಂಡೆ. ಇನ್ನೇನು ಹೇಳುವೆನು ಇಂದಿಗಿಪ್ಪತ್ತಾರು. ಈಸೊಂದು ದಿನಕರಗಿ ಗೊತ್ತುಗೊಂಡೆ ಎಂದು `ನನ್ನನಲ್ಲ' ದಲ್ಲಿ ಮಧುರಚೆನ್ನರು ತಮ್ಮ ಆತ್ಮಕಥೆಯನ್ನು ಹೇಳಿಕೊಂಡಿದ್ದಾರೆ. ಅವರು ತಮ್ಮ ಹನ್ನೆರಡನೇ ವಯಸ್ಸಿನ ಸುಮಾರಿಗೆ ದೇವರನ್ನು ಕಾಣುವ ಹಂಬಲವುಳ್ಳವರಾದರು. ಸುಮಾರು ಹದಿನಾಲ್ಕು ವಷಗಳ ಸಾಧನೆಯಲ್ಲಿ ಹೋರಾಡಿ ಅವನನ್ನು ಅರಿತುಕೊಂಡರು ಎಂದು ವಿವರಿಸಿದರು.
ಅನಂತರದಲ್ಲಿಯೂ ತಮ್ಮ ಸಾಧನೆಯನ್ನು ಮುಂದುವರಿಸಿದ ಅವರು ತಮ್ಮ ಧ್ಯೇಯವನ್ನು ಈಡೇರಿಸಿಕೊಂಡರು. ಅವರ ಆಧ್ಯಾತ್ಮಿಕ ಸಾಧನೆಯ ಕಥನ ಅವರ ಗದ್ಯ ಕೃತಿಗಳಾದ `ಪೂರ್ವರಂಗ', `ಕಾಳರಾತ್ರಿ', `ಬೆಳಗು' ಮತ್ತು `ಆತ್ಮಸಂಶೋಧನೆ' ಇವುಗಳಲ್ಲಿ ಮನೋಜ್ಞವಾಗಿ ಪ್ರಕಟಗೊಂಡಿದೆ ಎಂದರು.
ಜಗದೇವ ಗಲಗಲಿ ಏಕವ್ಯಕ್ತಿ ನಾಟಕ ಪ್ರದರ್ಶಿಸಿದರು. ಬಿ.ಆರ್. ಬನಸೋಡೆ ಅವರು ಸಾಂಧರ್ಬಿಕ ಹಾಡುಗಳನ್ನು ಹಾಡಿದರು. ಬಿವಿವಿ ಸಂಘದ ಆಡಳಿತಾಧಿಕಾರಿ ವಿ.ಆರ್. ಶಿರೋಳ, ಪ್ರಸಾರ ರಂಗದ ವಿಭಾಗದ ನಿರ್ದೇಶಕ ಪಿ.ಎನ್. ಶಿಂಪಿ, ಪ್ರಾಚಾರ್ಯ ಎಸ್.ಆರ್. ಮೂಗನೂರಮಠ ಮತ್ತಿತರರು ಇದ್ದರು.