ಗುಳೇದಗುಡ್ಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಭರವಸೆ ಕೋಶ ಮತ್ತು ಕನ್ನಡ ವಿಭಾಗ ಹಾಗೂ ರಾಷ್ಟ್ರೀಯ ಸಂಶೋಧನಾ ವೇದಿಕೆ ಸಹಯೋಗದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ಪ್ರಾಂಶುಪಾಲ ಡಾ. ಅರುಣಕುಮಾರ ಗಾಳಿ ಉದ್ಘಾಟಿಸಿದರು. ಡಾ. ಸಂಗಮೇಶ ಕಲ್ಯಾಣಿ, ಪ್ರೊ. ಸಂಪತ್ತ ಲಮಾಣಿ, ಪ್ರೊ. ಕ್ಕೀರಪ್ಪ ಚೆನ್ನಪಗೌಡ್ರ, ಪ್ರಭಾರಿ ಪ್ರಾಂಶುಪಾಲ ಪ್ರೊ. ರೇವಣಸಿದ್ಧಪ್ಪ, ಡಾ. ಬಸವರಾಜ ನಾಯಕ, ಪ್ರೊ. ಸಂತೋಷ ಎಚ್.ಎಲ್., ಪ್ರೊ. ಭುವನೇಶ್ವರಿ ಬಡಿಗೇರ, ನಾಗರಾಜ ಕಪ್ಪಲಿ ಇದ್ದರು. 
ಬಾಗಲಕೋಟೆ

ಕಾಯಕ ತತ್ವದಿಂದ ಸಮಸಮಾಜ ಬದುಕು

ಪ್ರಮುಖ ಮುಖ್ಯಾಂಶಗಳು

  • ಡಾ. ಅರುಣಕುಮಾರ ಗಾಳಿ ಅಭಿಮತ
  • ಸಾಹಿತ್ಯದಲ್ಲಿ ಕಾಯಕ ತತ್ವ ಕುರಿತು ವಿಚಾರಗೋಷ್ಠಿ
  • ವಚನ ಸಾಹಿತ್ಯದಲ್ಲಿ ಕಾಯಕ ತತ್ವ ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ
ಗುಳೇದಗುಡ್ಡ : ಸಕಲ ಶರಣರ ಕಾಯಕ ತತ್ವಗಳಲ್ಲಿರುವ ಸಮ ಸಮಾಜದ ವಿಚಾರಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಬಾಗಲಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಅರುಣಕುಮಾರ ಗಾಳಿ ಹೇಳಿದರು.
ಗುಳೇದಗುಡ್ಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಭರವಸೆ ಕೋಶ ಮತ್ತು ಕನ್ನಡ ವಿಭಾಗ ಹಾಗೂ ರಾಷ್ಟ್ರೀಯ ಸಂಶೋಧನಾ ವೇದಿಕೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಚನ ಸಾಹಿತ್ಯದಲ್ಲಿ ಕಾಯಕ ತತ್ವ ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿ, ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಶ್ರದ್ಧೆಯಿಂದ ತಮ್ಮ ಕಾಯಕಗಳೊಂದಿಗೆ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದರು.
12ನೇ ಶತಮಾನದ ವಚನ ಸಾಹಿತ್ಯದ ಬಸವಣ್ಣನವರ ಶರಣ ಕೂಟದಲ್ಲಿ ಮಾದರ ಚೆನ್ನಯ್ಯ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಉರಲಿಂಗ ಪೆದ್ದಿ, ಸಮಗಾರ ಹರಳಯ್ಯ ಸಕಲೇಶ ಮಾದರಸ ಆಯ್ದಕ್ಕಿ ಲಕ್ಕಮ್ಮ, ಆಯ್ದಕ್ಕಿ ಮಾರಯ್ಯ ಮುಂತಾದ ವಚನಕಾರರ ಕಾಯಕ ತತ್ವಗಳು ಇಂದಿಗೂ ಮಾನವ ಕುಲವನ್ನು ಬೆಳಗುತ್ತಿವೆ. ಸಾಮಾಜಿಕ ಬದುಕಿಗೆ ಕಾಯಕತ್ವವೇ ಮುಖ್ಯವೆಂದು ವಚನಗಳಲ್ಲಿ ಸಾರಿದ್ದಾರೆ. ಎಲ್ಲಾ ವಚನಕಾರರ ಕಾಯಕ ತತ್ವವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಸಂಶೋಧನಾ ವೇದಿಕೆ ಗೌರವಾಧ್ಯಕ್ಷ ಡಾ. ಸಂಗಮೇಶ ಕಲ್ಯಾಣಿ ಮಾತನಾಡಿ, ಕಾಯವಿಲ್ಲದೆ ಕಾಯಕವಿಲ್ಲ ನಿಷ್ಕಾಮ ಭಕ್ತಿಯಿಂದ ಗಳಿಕೆಯನ್ನು ನಿರಾಪೇಕ್ಷಿಸಿ ಕಾಯಕ ಮಾಡಿದಾಗ ಆದು ಸಾರ್ಥಕಗೊಳಿಸಿದಾಗ ಶಿವಶರಣ ವಚನಗಳಲ್ಲಿ ಕಂಡು ಬರುತ್ತದೆ. ಅಂತೆಯೇ ಕಾಯಕವೇ ಕೈಲಾಸ. ಇಡೀ ಶರಣ ಕುಲವೇ ಮಾನವ ಕುಲಕ್ಕೆ ಮಾದರಿಯಾಗಿದೆ ಎಂದರು.
ಪ್ರೊ. ಸಂಪತ್ತ ಲಮಾಣಿ ಮಾತನಾಡಿ, ವಚನಕಾರರ ವಚನಗಳಲ್ಲಿರುವ ಕಾಯಕ ತತ್ವ ಮತ್ತು ಕಾರ್ಲ್‌ಮಾರ್ಕ್ಸ್‌ನ ತತ್ವದಂತೆ ಪ್ರತಿಯೊಬ್ಬರೂ ದುಡಿದು ಉಣ್ಣಬೇಕು ಎಂಬುದು ಅರಿತುಕೊಂಡು ಬದುಕು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರೊ. ಕ್ಕೀರಪ್ಪ ಚೆನ್ನಪಗೌಡ್ರ ಆಶಯ ನುಡಿ ಹೇಳಿ, ವಚನಗಳಲ್ಲಿ ಕಾಯಕ ತತ್ವ ಎಂಬ ವಿಷಯದ ಮೇಲೆ ವಿಚಾರ ಸಂಕಿರಣ ಆಯೋಜನೆ ಮಾಡಿದ್ದು ವಿದ್ಯಾರ್ಥಿಗಳ ಕಲಿಕೆ ಪೂರಕವಾಗಿದೆ ಎಂದರು.
ಪ್ರಭಾರಿ ಪ್ರಾಂಶುಪಾಲ ಪ್ರೊ. ರೇವಣಸಿದ್ಧಪ್ಪ, ಡಾ. ಬಸವರಾಜ ನಾಯಕ, ಪ್ರೊ. ಸಂತೋಷ ಎಚ್.ಎಲ್., ಪ್ರೊ. ಭುವನೇಶ್ವರಿ ಬಡಿಗೇರ, ನಾಗರಾಜ ಕಪ್ಪಲಿ ಇದ್ದರು. ಪ್ರೊ. ಈಶ್ವರಪ್ಪ ಸ್ವಾಗತಿಸಿದರು. ಡಾ. ಮೀನಪ್ಪ ಅಳ್ಳಿಚೆಂಡಿ ನಿರೂಪಿಸಿದರು, ಡಾ. ಸಂತೋಷ ಕಾಳನ್ನವರ ವಂದಿಸಿದರು.

ಎರಡು ವಿಚಾರ ಗೋಷ್ಠಿಗಳು

ಒಂದನೇ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾದ ಗದಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಸಿದ್ಧಲಿಂಗೇಶ ಸಜ್ಜನಶೆಟ್ಟರ ಅವರು ಉರಲಿಂಗ ಪೆದ್ದಿ ವಚನಗಳಲ್ಲಿ ಕಾಯಕ ತತ್ವ, ಯರಗಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ರಾಜಶೇಖರ ಬಿರಾದರ ಡೋಹರ ಕಕ್ಕಯ್ಯನವರ ವಚನಗಳಲ್ಲಿ ಕಾಯಕ ತತ್ವ, ಹಾಗೂ ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರೊ. ಸಂಗಮೇಶ ಬ್ಯಾಳಿ ಅವರು ಮಾದರ ಚನ್ನಯ್ಯನ ವಚನಗಳಲ್ಲಿ ಕಾಯಕ ತತ್ವ ಎಂಬ ವಿಷಯಗಳ ವಿಷಯ ಮಂಡಿಸಿದರು. ಸಾಹಿತಿ ಡಾ. ಪ್ರಕಾಶ ನರಗುಂದ ಅಧ್ಯಕ್ಷತೆ ವಹಿಸಿದ್ದರು.
ಎರಡನೇ ಗೋಷ್ಠಿಯಲ್ಲಿ ಬಾದಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಚಂದ್ರಶೇಖರ ಹೆಗಡೆ ಅವರು ಸಕಲೇಸ ಮಾದರಸರ ವಚನಗಳಲ್ಲಿ ಕಾಯಕ ತತ್ವ, ನವನಗರ ಸ.ಪ್ರ.ದ. ಕಾಲೇಜಿನ ಉಪನ್ಯಾಸಕ ಡಾ. ಚಂದ್ರಶೇಖರ ಕಾಳನ್ನವರ ಅವರು ಗಜೇಶ ಮಸಣಯ್ಯ ಪುಣ್ಯಸೀ ವಚನಗಳಲ್ಲಿ ಕಾಯಕ ತತ್ವ ಕುರಿತು ವಿಷಯ ಮಂಡಿಸಿದರು. ಮೋಡಿಲಿಪಿ ತಜ್ಞ ಡಾ. ಸಂಗಮೇಶ ಕಲ್ಯಾಣಿ ಅಧ್ಯಕ್ಷತೆ ವಹಿಸಿದ್ದರು.