ಕೆಲವಡಿ ಗ್ರಾಮದಲ್ಲಿನ ಲಕ್ಷ್ಮೀರಂಗನಾಥ ದೇವಸ್ಥಾನ. 
ಬಾಗಲಕೋಟೆ

ಕನಕರಾಯನಿಗೆ ಮದ್ಯವೇ ನೈವೇದ್ಯ..!

ಪ್ರಮುಖ ಮುಖ್ಯಾಂಶಗಳು

  • ನಾಳೆ ಕೆಲವಡಿ ರಂಗನಾಥ ದೇವರ ಇತಿಹಾಸ ಪ್ರಸಿದ್ಧ ರಥೋತ್ಸವ
  • ಅಪಾರ ಭಕ್ತರ ಆಗಮನ
  • ದೇವರಿಗೆ ಮದ್ಯವನ್ನು ನೈವೇದ್ಯ
ಸಂಗಯ್ಯ ಸಿಂದಗಿಮಠ ಗುಳೇದಗುಡ್ಡ: ಸಮೀಪದ ಲಿಂಗಾಪುರ ಗ್ರಾಮದ ಕನಕರಾಯನ ಜಾತ್ರೆಯಲ್ಲಿ ಭಕ್ತರು ದೇವರಿಗೆ ಮದ್ಯವನ್ನು ನೈವೇದ್ಯವಾಗಿ ಅರ್ಪಿಸುವ ವಿಶಿಷ್ಟ ಸಂಪ್ರದಾಯ ಇಂದು ಕೂಡ ನಡೆದುಕೊಂಡು ಬರುತ್ತಿದೆ.
ಸಮೀಪದ ಕೆಲವಡಿ ಗ್ರಾಮದ ಲಕ್ಷ್ಮೀರಂಗನಾಥ ದೇವರ ಜಾತ್ರೆ ಸಂದರ್ಭದಲ್ಲೂ ಮಾದಲಿ, ಹುಗ್ಗಿ ಜತೆಗೆ ಮದ್ಯವನ್ನು ನೈವೇದ್ಯವಾಗಿ ಅರ್ಪಿಸುವ ಪದ್ಧತಿ ಇದೆ. ಭಕ್ತರು ಮನೆಗಳಲ್ಲಿ ತಯಾರಿಸಿದ ಹುಗ್ಗಿಯನ್ನು ಗಡಿಗೆಯಲ್ಲಿ ಹಾಗೂ ಹೆಡಿಗೆಯಲ್ಲಿ (ಪುಟ್ಟಿ) ರೊಟ್ಟಿಯನ್ನು ತುಂಬಿಕೊಂಡು ದೇವಸ್ಥಾನಕ್ಕೆ ತಂದು ದೇವರಿಗೆ ನೈವೇದ್ಯ ಸಲ್ಲಿಸುತ್ತಾರೆ. ಇದರೊಂದಿಗೆ ತೀರ್ಥವಾಗಿ ಮದ್ಯವನ್ನು ಕೂಡ ಅರ್ಪಿಸುವುದು ವಿಶೇಷವಾಗಿದೆ.
ಕೆಲವಡಿ ರಂಗನಾಥ ದೇವರ ಜಾತ್ರೆಗೆ ಮುನ್ನಾದಿನ ಲಿಂಗಾಪುರದಲ್ಲಿ ಕನಕರಾಯನ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ದೇವರಿಗೆ ಮದ್ಯವನ್ನು ನೈವೇದ್ಯವಾಗಿ ಅರ್ಪಿಸುವ ಸಂಪ್ರದಾಯವನ್ನು ಭಕ್ತರು ಭಕ್ತಿಭಾವದಿಂದ ಪಾಲಿಸುತ್ತಾರೆ.
ಈ ಆಚರಣೆ ಕುರಿತು ದೇವಸ್ಥಾನದ ಪೂಜಾರಿಗಳ ಪ್ರಕಾರ, ಸಮುದ್ರ ಮಥನ ಸಂದರ್ಭದಲ್ಲಿ `ಸುರ' ಹೊರಬಂದಾಗ ದೇವತೆಗಳು ಅದನ್ನು ಸೇವಿಸಿದರೆಂಬ ಪುರಾಣದ ಹಿನ್ನೆಲೆಯಂತೆ, ವಿಷ್ಣು ಸ್ವರೂಪನಾದ ರಂಗನಾಥ ದೇವರಿಗೆ ಮದ್ಯವನ್ನು ನೈವೇದ್ಯವಾಗಿ ಅರ್ಪಿಸುವ ರೂಢಿ ಬೆಳೆದಿರಬಹುದು ಎಂದು ಹೇಳಲಾಗುತ್ತದೆ.
ಜಾತ್ರೆಗೆ ನಿಂಗಾಪುರ, ತಿಮ್ಮಸಾಗರ, ಹಂಸನೂರು, ಹಿರೇಬೂದಿಹಾಳ, ಖಾಜಿಬೂದಿಹಾಳ, ಹಂಗರಗಿ, ಕಟಗೇರಿ, ಸೂಳಿಕೇರಿ, ನೀರಲಕೇರಿ ಸೇರಿ ಸುತ್ತಮುತ್ತಲಿನ ಅನೇಕ ಗ್ರಾಮಗಳ ಜತೆಗೆ ಹೈದರಾಬಾದ್, ಲಾಥೂರ, ಮುಂಬೈ, ಗೋವಾ ಮೊದಲಾದ ಪ್ರದೇಶಗಳಿಂದಲೂ ಭಕ್ತರು ಆಗಮಿಸುತ್ತಾರೆ.
ಬುಧವಾರ ಲಿಂಗಾಪುರ ಗ್ರಾಮದಲ್ಲಿ ಕನಕರಾಯನ ಜಾತ್ರೆ ನಡೆಯಲಿದ್ದು, ಮಾ. 12ರಂದು ಕೆಲವಡಿ ಗ್ರಾಮದ ಲಕ್ಷ್ಮೀರಂಗನಾಥ ದೇವರ ಜತ್ರೆ ನಡೆಯಲಿದೆ. ಅಂದು ಬೆಳಗ್ಗೆ 11 ಗಂಟೆಗೆ ಲಕ್ಷ್ಮೀರಂಗನಾಥ ಸ್ವಾಮಿಯ ಕಳಸದ ಮೆರವಣಿಗೆ ನಡೆಯಲಿದ್ದು, ಸಂಜೆ 5 ಗಂಟೆಗೆ ಮಹಾ ರಥೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಲಿದೆ.