ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ಸೋಮವಾರ ಸಂಜೆ ಸುರಿದ ಮಳೆಯ ವೇಳೆ ಸಿಡಿಲು ಬಡಿದು ಎಮ್ಮೆ ಮತ್ತು ಎಮ್ಮೆ ಕರು ಸಾವನ್ನಪ್ಪಿದೆ.
ಬಾಗಲಕೋಟೆ : ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆ ಮಳೆಗಿಂತ ಗಾಳಿ ಮತ್ತು ಸಿಡಿಲಿನ ಅಬ್ಬರವೇ ಹೆಚ್ಚಾಗಿದ್ದರಿಂದ ಸಾಕಷ್ಟು ಹಾನಿಯಾಗಿರುವ ವರದಿಯಾಗಿದೆ.
ಸಿಡಿಲಿನ ಹೊಡೆತಕ್ಕೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ಮುತ್ತಪ್ಪ ನಿಂಗಪ್ಪ ವಾಲಿಕಾರ ಎನ್ನುವವರಿಗೆ ಸೇರಿದ್ದ ಒಂದು ಎಮ್ಮೆ ಹಾಗೂ ಒಂದು ಎಮ್ಮೆ ಕರು ಸಾವನ್ನಿದೆ. ಕೆಲವಡೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೂ ಹಾನಿಯಾಗಿದೆ.
ಭಾರಿ ಗಾಳಿ ಬೀಸಿದ್ದರಿಂದ ಬೀಳಗಿ, ಬಾಗಲಕೋಟೆ, ಮುಧೋಳ ತಾಲೂಕಿನಲ್ಲಿ ೧೫ಕ್ಕೂ ಹೆಚ್ಚು ತಗಡಿನ ಪತ್ರಾಸ್‌ಗಳು ಹಾರಿ ಹೋಗಿವೆ. ಮರ‍್ನಾಲ್ಕು ಮನೆಗಳಿಗೂ ಹಾನಿಯಾಗಿದೆ. ಅಲ್ಲಲ್ಲಿ ಮಳೆ, ಗಾಳಿಗೆ ವಿದ್ಯುತ್ ಕಂಬಗಳು ಮತ್ತು ಗಿಡ ಮರಗಳು ಉರುಳಿ ಬಿದ್ದಿರುವ ವರದಿಯಾಗಿದೆ. ಮಳೆಯಿಂದ ಆಗಿರುವ ಹಾನಿಯ ಪ್ರಮಾಣವನ್ನು ಸರ್ವೆ ಮಾಡಬೇಕಿದೆ.