ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ ಭಾನುವಾರ ಸಂಜೆ ಕೃಷ್ಣಾ ನದಿಗೆ ಹರಿದು ಬಂದ ನೀರಿನ ದೃಶ್ಯ.
- ರಾಜಾಪೂರ ಬ್ಯಾರೇಜ್
- ಕೃಷ್ಣಾ ನದಿಗೆ ನೀರು
ರಬಕವಿ/ಬನಹಟ್ಟಿ: ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಕೃಷಿ ಮತ್ತು ಕುಡಿಯುವ ನೀರಿನ ಪ್ರಮುಖ ಆಧಾರವಾಗಿರುವ ಹಿಪ್ಪರಗಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿಯುತ್ತಿರುವ ಸಂದರ್ಭದಲ್ಲೇ ಮಾ. ೩೦ರಂದು ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಇದರ ಪರಿಣಾಮವಾಗಿ ಈ ಭಾಗದ ಜನರಿಗೆ ಸ್ವಲ್ಪ ಮಟ್ಟಿನ ನಿರಾಳತೆ ದೊರೆತಿದೆ.
೬ ಟಿಎಂಸಿ ಸಾಮರ್ಥ್ಯದ ಹಿಪ್ಪರಗಿ ಜಲಾಶಯದಲ್ಲಿ ಇತ್ತೀಚೆಗೆ ಕೇವಲ ೨.೩೭ ಟಿಎಂಸಿ ನೀರು ಮಾತ್ರ ಸಂಗ್ರಹವಿದ್ದು, ದಿನಂಪ್ರತಿ ಸುಮಾರು ೦.೦೭ ಟಿಎಂಸಿ ನೀರು ಖಾಲಿಯಾಗುತ್ತಿತ್ತು. ಇದರಿಂದ ಬೇಸಿಗೆಯ ಕೊನೆಯ ದಿನಗಳಲ್ಲಿ ನೀರಿನ ಅಭಾವ ಎದುರಾಗುವ ಭೀತಿ ಜನರಲ್ಲಿ ಮೂಡಿತ್ತು.
ಆದರೆ ಮಹಾರಾಷ್ಟ್ರದಿಂದ ನೀರು ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಜಲಾಶಯದ ನೀರಿನ ಮಟ್ಟದಲ್ಲಿ ದಿನಕ್ಕೆ ಸುಮಾರು ೧೦ ಸೆಂ.ಮೀ. ಏರಿಕೆ ಕಂಡುಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಡುಗಡೆಗೊಂಡಿರುವ ನೀರಿನ ನಿಖರ ಪ್ರಮಾಣದ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲದಿದ್ದರೂ, ಬೇಸಿಗೆಯ ನೀರಿನ ಸಂಕಷ್ಟ ತಗ್ಗಿಸಲು ಇದು ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.