ಬಾಗಲಕೋಟೆ ನವನಗರದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನೂತನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕಟ್ಟಡ ಲೋಕಾರ್ಪಣೆ ಸಮಾರಂಭ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಉದ್ಘಾಟಿಸಿದರು. ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಅನೀಲಕುಮಾರ ದಡ್ಡಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ, ಜಿಲ್ಲಾಧಿಕಾರಿ ಸಂಗಪ್ಪ ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಇದ್ದರು. 
ಬಾಗಲಕೋಟೆ

ದೇಶಿ ತಳಿ ಉಳಿಸಿ ಬೆಳೆಸುವ ಕೆಲಸವಾಗಲಿ

ಪ್ರಮುಖ ಮುಖ್ಯಾಂಶಗಳು

  • ಸಚಿವ ಆರ್.ಬಿ. ತಿಮ್ಮಾಪೂರ ಹೇಳಿಕೆ
  • ಜಿಲ್ಲಾ ಕೃಷಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ
ಬಾಗಲಕೋಟೆ: ಅನ್ನದಾತರು ತಲೆತಲಾಂತರದಿಂದ ಬೆಳೆಯಲಾಗುತ್ತಿರುವ ದೇಶಿ ತಳಿಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ನವನಗರದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಮತು ಕೃಷಿ ಸಂಬಂಧಿಸಿದ ಇಲಾಖೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನೂತನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕಟ್ಟಡ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಡೆ ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರ ಕೊಡಬೇಕು. ಇನ್ನೊಂದು ಕಡೆ ಅದಕ್ಕೆ ತಕ್ಕಂತೆ ಆಹಾರ ಉತ್ಪಾದನೆ ಮಾಡಬೇಕಿದೆ. ಇದರ ನಡುವೆ ಆಹಾರ ಧಾನ್ಯದಲ್ಲಿ ರುಚಿ ಕಳೆದುಕೊಳ್ಳುತ್ತಿರುವುದು ಆತಂಕ ಮೂಡಿಸಿದೆ ಎಂದರು.
ಹೆಚ್ಚಿನ ಉತ್ಪಾದನೆ ಮಾಡುವ ಉದ್ದೇಶದಿಂದ ಅನೇಕ ರಾಸಾಯನಿಕಗಳನ್ನು ಸಿಂಪರಣೆ ಮಾಡಲಾಗುತ್ತಿದೆ. ಇದರಿಂದ ಮಣ್ಣಿನ ಫಲವತ್ತತೆ ಕಳೆದುಕೊಳ್ಳುವುದರ ಜೊತೆಗೆ ರುಚಿ ಕೂಡಾ ಹಾಳುಮಾಡಿಕೊಳ್ಳಲಾಗುತ್ತಿದೆ. ಆರೋಗ್ಯವಂತ ಜೀವನಕ್ಕೆ ಬೇಕಾಗುವ ಆಹಾರ ಉತ್ಪಾದನೆ ಆಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ದೇಶಿ ತಳಿಗಳನ್ನು ಉಳಿಸಿ ಸಂರಕ್ಷಿಸುವ ಕೆಲಸ ಮಾಡುತ್ತಿದೆ. ರೈತರಿಗೆ ದೇಶಿ ತಳಿಗಳ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ತರಬೇತಿ ಸಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಅಂದಾಜು 99.74 ಲಕ್ಷ ರೂ. ಗಳ ವೆಚ್ಚದಲ್ಲಿ ಸುಸಜ್ಜಿತವಾಗಿ ಕೃಷಿ ತರಬೇತಿ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ತರಬೇತಿ ಕೇಂದ್ರದಲ್ಲಿ ಊಟ ವಸತಿಯೊಂದಿಗೆ ತರಬೇತಿ ನೀಡಲಾಗುತ್ತದೆ. ಅಲ್ಲದೆ ಜಿಲ್ಲೆಯಲ್ಲಿ ರೈತರು ಬೆಳೆಯುವ ತರಕಾರಿ, ಹಣ್ಣು ಸೇರಿ ಇತರೆ ಬೆಳೆಗಳು ಹಾಳಾಗದಂತೆ ಶೇಖರಿಸಲು ನಬಾರ್ಡ ಯೋಜನೆಯಡಿ 9.51 ಕೋಟಿ ರೂ. ಗಳ ವೆಚ್ಚದಲ್ಲಿ 2500 ಮೆಟ್ರಿಕ್ ಟನ್ ಸಾಮರ್ಥ್ಯವುಳ್ಳ ಶೀತಲ ಘಟಕ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಒಂದಾದ ಕಬ್ಬು ಬೆಳೆಯಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ ನಿರ್ವಹಣೆಗಾಗಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ 14 ಸಕ್ಕರೆ ಕಾರ್ಖಾನೆ ವ್ಯಾಪ್ತಿಯಡಿ 1000 ಹೆಕ್ಟೇರ್ ಪ್ರದೇಶದಲ್ಲಿ ರೈತರನ್ನು ಆಯ್ಕೆ ಮಾಡಿಕೊಂಡು ಹನಿ ನೀರಾವರಿ ಘಟಕ ಅನುಷ್ಠಾನ, ಕಬ್ಬಿನ ಬೆಳೆಯಲ್ಲಿ ಕೃತಕ ಬುದ್ದಿಮತ್ತೆ (ಎಐ) ತಂತ್ರಜ್ಞಾನ ಮೂಲಕ ಕಬ್ಬು ಬೆಳೆ ಪ್ರಾತ್ಯಕ್ಷಿಕತೆ ಮಾಡಲಾಗುತ್ತಿದೆ. ಇದರಿಂದ ನೀರಿನ ಮಿತವ್ಯಯ ಬಳಕೆ, ರಸಗೊಬ್ಬರ ಉಳಿತಾಯ, ಕೀಟನಾಶಕದ ಅವಲಂಬನೆ ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮಾತನಾಡಿ, ಬೆಳೆಯುತ್ತಿರುವ ಜನ ಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆ ಪ್ರಮಾಣ ಹೆಚ್ಚಿಸುವ ಅಗತ್ಯವಿದೆ. ಒಂದು ಜನಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಆದರೆ ಭೂಮಿ ಹೆಚ್ಚಳವಾಗುವುದಿಲ್ಲ. ಇದನ್ನು ಅರಿಯಬೇಕಿದೆ. ಹೊಸ ಹೊಸ ತಳಿಗಳ ಸಂಶೋಧನೆಯಿಂದ ಉತ್ಪಾದನೆ ಪ್ರಮಾಣ ಹೆಚ್ಚಿಸಿ ಈಗ ಬೇರೆ ದೇಶಕ್ಕೆ ರಪ್ತು ಮಾಡಲಾಗುತ್ತಿದೆ. ಹೆಚ್ಚಿನ ಉತ್ಪಾದನೆ ಮಾಡುವದರ ಜೊತೆಗೆ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ರಾಜ್ಯಮಟ್ಟದ ಕೃಷಿ ಪ್ರಶಸ್ತಿ ಪಡೆದ ಸುನೀತಾ ಮನೋಹರ ಮೇಟಿ, ರಾಮನಗೌಡ ಪಾಟೀಲ, ಸಿದ್ದುಬಾ ಪಾಂಡು ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಅನೀಲಕುಮಾರ ದಡ್ಡಿ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಮಹಾಂತೇಶ ಹಟ್ಟಿ, ಜಿಲ್ಲಾಧಿಕಾರಿ ಸಂಗಪ್ಪ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ತೋವಿವಿಯ ಡೀನ್ ಡಾ. ತಮ್ಮಯ್ಯ, ಕೃಷಿ ಜಂಟಿ ನಿರ್ದೇಶಕ ರುದ್ರೇಶ ಟಿ.ಎಸ್. ಉಪ ಕೃಷಿ ನಿರ್ದೇಶಕರಾದ ಕೆ.ಎಸ್. ಅಗಸನಾಳ, ಮಂಜುಳಾ ಬಸವರಡ್ಡಿ, ಸಹಾಯಕ ಕೃಷಿ ನಿರ್ದೇಶಕ ಆರ್.ಬಿ. ಬಿದರಿ ಇತರರು ಉಪಸ್ಥಿತರಿದ್ದರು.