ಜಮಖಂಡಿಯಲ್ಲಿ ನಡೆದ ಕವಿಗೋಷ್ಠಿ, ಸಾಧಕರ ಸನ್ಮಾನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಾಹಿತಿ ಮ.ಕೃ. ಮೇಗಾಡಿ ಉದ್ಘಾಟಿಸಿದರು. ಇಂದಿರಾ ಜಲದುರ್ಗ, ಡಾ. ಸಂಗಮೇಶ ಮಟೋಳಿ, ಶಿವಾನಂದ ಶೆಲ್ಲಿಕೇರಿ, ಪ್ರೊ. ಬಸವರಾಜ ಕಡ್ಡಿ ಇದ್ದಾರೆ.
- ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿಕೆ
- ಕವಿಗೋಷ್ಠಿ
- ಸಾಧಕರಿಗೆ ಸನ್ಮಾನ
ಜಮಖಂಡಿ: ಕಿತ್ತೂರು ಕರ್ನಾಟಕ ಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಜಮಖಂಡಿಯ ಮಹಿಮೆಯನ್ನು ನಾಡಿಗೆ ಪರಿಚಯಿಸುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ. ಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸುತ್ತಿದೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.
ಇಲ್ಲಿನ ಸರ್ಕಾರಿ ಪಿ.ಬಿ. ಹೈಸ್ಕೂಲ್‌ನ ಡಾ. ಗುರುದೇವ ರಾನಡೆ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕ, ಸಾಹಿತ್ಯ ಸೌರಭ ವೇದಿಕೆ ಹಾಗೂ ವೀರೇಶ್ವರ ಪ್ರಕಾಶನದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿ, ಸಾಧಕರ ಸನ್ಮಾನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಲೆಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಮಾಡುವ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡುತ್ತಿದೆ. ಪ್ರತಿಭೆಗಳನ್ನು ಸನ್ಮಾನಿಸುವುದರಿಂದ ಪ್ರತಿಭಾವಂತರ ಆಯುಷ್ಯ ವೃದ್ಧಿಯಾಗುತ್ತದೆ ಎಂದರು.
ಬಸವಜ್ಯೋತಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ. ಬಸವರಾಜ ಕಡ್ಡಿ ಮಾತನಾಡಿ, ಪ್ರತಿಭೆ ಮತ್ತು ಸಾಧನೆ ಎಂದಿಗೂ ಆಕಸ್ಮಿಕವಲ್ಲ. ನಿರಂತರವಾದ ಪ್ರಾಮಾಣಿಕ ಪ್ರಯತ್ನ ಮತ್ತು ತಪಸ್ಸಿನಿಂದ ಸಾಧನೆ ಸಾಧ್ಯ ಎಂದರು.
ನಿವೃತ್ತ ಪ್ರಾಚಾರ್ಯ ಡಾ. ಸಂಗಮೇಶ ಮಟೋಳಿ ಮಾತನಾಡಿ, ಪ್ರತಿಭೆಯನ್ನು ಗುರುತಿಸುವ ಗುಣ ಸಂಘ-ಸಂಸ್ಥೆಗಳಿಗೆ ಇರದಿದ್ದರೆ ಸಾಧಕರು ಬೆಳಕಿಗೆ ಬರುವುದಿಲ್ಲ. ದೈಹಿಕ ಕಸರತ್ತು ಪ್ರದರ್ಶಿಸುವವರು ಸಹ ಕವಿಗಳು, ಸಾಹಿತಿಗಳ ಜೊತೆ ಪಾಲುದಾರರಾಗಬೇಕು ಎಂದು ತಿಳಿಸಿದರು.
ಕಸಾಪ ರಬಕವಿ-ಬನಹಟ್ಟಿ ತಾಲೂಕು ಘಟಕದ ಅಧ್ಯಕ್ಷ ಮ.ಕೃ. ಮೇಗಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾತೃ ಭಾಷೆ ಕನ್ನಡವನ್ನು ಮಾತನಾಡುವಾಗ ಹೃದಯ ತುಂಬಿ ಬರುತ್ತದೆ ಎಂದರು.
ಸರ್ಕಾರಿ ಪಿ.ಬಿ. ಹೈಸ್ಕೂಲ್ ಶಿಕ್ಷಕಿ ಇಂದಿರಾ ಜಲದುರ್ಗ ಮಾತನಾಡಿ, ಬದುಕು ನಮ್ಮದೆ ಆಗಿರುತ್ತದೆ. ಆದರೆ, ಬದುಕಿಗೆ ಬೇಕಾಗುವ ಮಾತುಗಳು ಬೇರೆಯವರಾಗಿರುತ್ತವೆ. ಬದುಕಿಗೆ ಬೇಕಾಗುವ ಮಾತುಗಳು ವೇದಿಕೆಗಳ ಮೂಲಕ ಕೇಳಿಬರುತ್ತವೆ ಎಂದು ತಿಳಿಸಿದರು.
ಡಾ. ಶ್ರೀದೇವಿ ಸುವರ್ಣಖಂಡಿ, ಗಣಪತಿ ಗಲಗಲಿ, ಭಾಗ್ಯಶ್ರೀ ಕೋಟಿ, ಚಿದಾನಂದ ಜಡಿಮಠ, ಚಂದ್ರಕಲಾ ಜನಗೊಂಡ, ಪ್ರವೀಣ ಕುಲಕರ್ಣಿ, ಬಾಹುಬಲಿ ಬಿರಾದಾರ ಪಾಟೀಲ, ಗುರುನಾಥ ಸುತಾರ ಇದ್ದರು. ಪ್ರಾಚಾರ್ಯ ಡಾ. ಟಿ.ಪಿ. ಗಿರಡ್ಡಿ ಸ್ವಾಗತಿಸಿದರು, ಉಪನ್ಯಾಸಕ ಮೌನೇಶ ಬಡಿಗೇರ ನಿರೂಪಿಸಿದರು. ಪ್ರೊ. ಆರ್.ಕೆ. ಹೊಸಟ್ಟಿ ವಂದಿಸಿದರು.