ಮುಧೋಳದಲ್ಲಿ ಬಣಜಿಗ ಸಮಾಜದ ಮುಖಂಡರು 2ಎ ಅಡಿಯಲ್ಲೇ ಉದ್ಯೋಗ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಗ್ರೇಡ್-2ತಹಸೀಲ್ದಾರ್ ಎ.ಕೆ.ಇಂಡಿಕರ ಅವರಿಗೆ ಮನವಿ ಸಲ್ಲಿಸಿದರು. ಡಾ. ರವಿ ನಂದಗಾAವ, ಸುರೇಶ ಅಕ್ಕಿಮರಡಿ, ಲಾವಣ್ಯ ಉದಪುಡಿ, ನಿಂಗಣ್ಣ ಜಂಗಾಲಿ ಇತರರಿದ್ದರು.
- ಗ್ರೇಡ್-2ತಹಸೀಲ್ದಾರ್ ಎ.ಕೆ.ಇಂಡಿಕರ ಮೂಲಕ ಸರ್ಕಾರಕ್ಕೆ ಮನವಿ
- ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಆಗ್ರಹ
ಮುಧೋಳ: ಬಣಜಿಗ ಸಮುದಾಯಕ್ಕೆ ಶಿಕ್ಷಣದಂತೆ ಸರ್ಕಾರಿ ಉದ್ಯೋಗದಲ್ಲಿಯೂ ವರ್ಗ 2ಎ ಅಡಿಯಲ್ಲೇ ಸಂಪೂರ್ಣ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ತಾಲೂಕು ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿ ಗ್ರೇಡ್-2ತಹಸೀಲ್ದಾರ್ ಎ.ಕೆ.ಇಂಡಿಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ತಾಲೂಕು ಘಟಕದ ಅಧ್ಯಕ್ಷ ಅಶೋಕ ಪಟ್ಟಣಶೆಟ್ಟಿ ಮಾತನಾಡಿ, ಬಣಜಿಗ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೇಮಕಾತಿಗಳಲ್ಲಿ ಸೂಕ್ತ ಅವಕಾಶ ದೊರೆಯುತ್ತಿಲ್ಲ. ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಯಲ್ಲಿ ಒಂದೇ ವರ್ಗದ ಮಾನದಂಡ ಅನ್ವಯಿಸಬೇಕು ಎಂದು ಒತ್ತಾಯಿಸಿದರು.
ಸಮಾಜದ ಮುಖಂಡ ಪ್ರಕಾಶ ರಾಮತೀರ್ಥ ಮಾತನಾಡಿ, ಶಿಕ್ಷಣಕ್ಕೆ 2ಎ ಮೀಸಲಾತಿ ನೀಡಲಾಗುತ್ತಿದ್ದರೂ ಉದ್ಯೋಗ ನೇಮಕಾತಿಯಲ್ಲಿ 3ಬಿ ಎಂದು ಪರಿಗಣಿಸಲಾಗುತ್ತಿದೆ. ಈ ದ್ವಂದ್ವ ನೀತಿಯಿಂದ ಅರ್ಹತೆ ಹೊಂದಿರುವ ಯುವಕರಿಗೂ ಸರ್ಕಾರಿ ಉದ್ಯೋಗದ ಅವಕಾಶ ತಪ್ಪುತ್ತಿದೆ. ಹೀಗಾಗಿ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸರ್ಕಾರ ಸ್ಪಷ್ಟ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಅಜೀತ ಹೊನವಾಡ ಮಾತನಾಡಿ, ಸಮಾಜದ ಬೇಡಿಕೆಯನ್ನು ಸರ್ಕಾರ ಕೂಡಲೇ ಪರಿಗಣಿಸಿ 2ಎ ಅಡಿಯಲ್ಲೇ ಉದ್ಯೋಗ ಮೀಸಲಾತಿ ಕಲ್ಪಿಸುವ ಮೂಲಕ ನ್ಯಾಯ ಒದಗಿಸಬೇಕು ಎಂದರು.
ಸಂವಿಧಾನದ ಸದಾಶಯಕ್ಕೆ ಇದು ವ್ಯತಿರಿಕ್ತವಾಗಿದ್ದು, ಬಣಜಿಗ ಸಮುದಾಯವನ್ನು 16(4) ಅಡಿಯಲ್ಲಿ ಬದಲಿಗೆ ಗ್ರೂಪ್ ಬಿ ಅಡಿಯಲ್ಲಿಯೇ ಮರುವರ್ಗೀಕರಿಸಬೇಕು. ಹೈಕೋರ್ಟ್ ಆದೇಶದ ಪ್ರಕಾರ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ಸೂಕ್ತ ಆದೇಶ ಹೊರಡಿಸುವಂತೆ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಯನ್ನು ಮನವಿ ಮೂಲಕ ಪ್ರಾರ್ಥಿಸಲಾಯಿತು.
ನಗರ ಘಟಕದ ಅಧ್ಯಕ್ಷ ಡಾ. ರವಿ ನಂದಗಾಂವ, ಯುವ ಘಟಕದ ಅಧ್ಯಕ್ಷ ಸುರೇಶ ಅಕ್ಕಿಮರಡಿ, ಮಹಿಳಾ ಘಟಕದ ಅಧ್ಯಕ್ಷೆ ಲಾವಣ್ಯ ಉದಪುಡಿ, ನೌಕರರ ಘಟಕದ ಅಧ್ಯಕ್ಷ ನಿಂಗಣ್ಣ ಜಂಗಾಲಿ ಸೇರಿ ಹಲವರು ಭಾಗವಹಿಸಿದ್ದರು.