ಬಾಗಲಕೋಟೆ ಜಿ.ಪಂ. ನೂತನ ಸಭಾಭವನದಲ್ಲಿ ಮಂಗಳವಾರ ಜಿಲ್ಲಾ ಅಭಿವೃದ್ಧಿ ಸಂಯೋಜನಾ ಸಮಿತಿ ಹಾಗೂ ಜಿಲ್ಲಾಮಟ್ಟದ ಬ್ಯಾಂಕ್‌ಗಳ ಪರಿಶೀಲನಾ ಸಭೆ ನಡೆಯಿತು. ಸಂಸದ ಪಿ.ಸಿ.ಗದ್ದಿಗೌಡರ, ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಒ ಶಶಿಧರ ಕುರೇರ, ವಿವಿಧ ಬ್ಯಾಂಕ್ ಮ್ಯಾನೇಜರ್‌ಗಳು ಇದ್ದರು.
- ಸಂಸದ ಗದ್ದಿಗೌಡರ ಸೂಚನೆ
- ಡಿಸಿಸಿ ಮತ್ತು ಡಿಎಲ್‌ಆರ್‌ಸಿ ಪ್ರಗತಿ ಪರಿಶೀಲನಾ ಸಭೆ
ಬಾಗಲಕೋಟೆ: ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆ, ಮುದ್ರಾ, ಕೃಷಿ, ಪ್ರಧಾನಮಂತ್ರಿ ವಿಶ್ವಕರ್ಮ ಹಾಗೂ ಶಿಕ್ಷಣ ಸಾಲಗಳ ಮಂಜೂರಾತಿಯಲ್ಲಿ ಬ್ಯಾಂಕ್‌ಗಳು ವೇಗ ಹೆಚ್ಚಿಸುವ ಮೂಲಕ ಅರ್ಹ ಫಲಾನುಭವಿಗಳಿಗೆ ಸಾಲಸೌಲಭ್ಯ ತಲುಪಿಸುವಲ್ಲಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಂಸದ ಪಿ.ಸಿ.ಗದ್ದಿಗೌಡರ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಮಂಗಳವಾರ ಹಮ್ಮಮ್ಮಿಕೊಂಡಿದ್ದ ಜಿಲ್ಲಾ ಅಭಿವೃದ್ಧಿ ಸಂಯೋಜನಾ ಸಮಿತಿ ಹಾಗೂ ಜಿಲ್ಲಾಮಟ್ಟದ ಬ್ಯಾಂಕ್‌ಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರದ ವಿವಿಧ ಯೋಜನೆಗಳ ಪ್ರಗತಿ, ಬ್ಯಾಂಕ್‌ಗಳ ಸಾಲ ವಿತರಣೆ ಸ್ಥಿತಿ, ಸ್ವ-ಉದ್ಯೋಗ ಯೋಜನೆಗಳ ಅನುಷ್ಠಾನ ಹಾಗೂ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳ ಕುರಿತು ಪರಿಶೀಲನೆ ಮಾಡಿದ ಅವರು, ನಬಾರ್ಡ್ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲ. ಯೋಜನೆಗಳ ಅರಿವು ಮೂಡಿಸಬೇಕು. ಮುದ್ರಾ ಯೋಜನೆಗಳ ಅನುಷ್ಠಾನ, ಬಾಕಿ ಇರುವ ಸಾಲ ಅರ್ಜಿಗಳ ತ್ವರಿತ ಪರಿಹಾರ ದೊರೆಯುವ ಕೆಲಸವಾಗಬೇಕು. ಜನಸಾಮಾನ್ಯರಿಗೆ ಬ್ಯಾಂಕಿಂಗ್ ಸೇವೆಗಳು ಸರಳವಾಗಿ ದೊರೆಯಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಬ್ಯಾಂಕಿನಿಂದ ಅನುಕೂಲ ತೆಗೆದುಕೊಳ್ಳುವುದು ಬಹಳ ಕಷ್ಟವಾಗುತ್ತಿದೆ. ಸಾಲ ಕೊಡುವಲ್ಲಿ ವಿನಾಕಾರಣ ಅಲೆದಾಡಿಸಬೇಡಿ. ಸಾಲದ ಅರ್ಜಿಗಳು ಬಾಕಿ ಉಳಿಯಬಾರದು. ಎಲ್ಲ ಅರ್ಜಿಗಳಿಗೆ ಅನುಮೋದನೆ ನೀಡುವ ಕಾರ್ಯವಾದಾಗ ಮಾತ್ರ ಯೋಜನೆ ಲಾಭ ದೊರೆಯಲು ಸಾಧ್ಯವಾಗುತ್ತದೆ. ಬ್ಯಾಂರ‍್ಸಗಳ ಸಹಾನುಭೂತಿಯಿಂದ ಕೆಲಸಮಾಡಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಮಾತನಾಡಿ, ಮುಖ್ಯವಾಗಿ ಉತ್ಪನ್ನಗಳ ಸಂಗ್ರಹಣೆ, ಪ್ರಕ್ರಿಯೆ ಹಾಗೂ ಪ್ಯಾಕೇಜ್‌ಗಳಿಗೆ ಸಂಬಂಧಿಸಿದ ಸಾಲ ಸೌಲಭ್ಯಗಳಿಗೆ ಪ್ರಸ್ತಾವನೆಗಳು ಬಂದಲ್ಲಿ ಅವುಗಳಿಗೆ ಅನುಮೋದನೆ ಕೊಡುವ ಕೆಲಸವಾಗಬೇಕು. ಬ್ಯಾಂರ‍್ಸ್ಗಳು ಜವಾಬ್ದಾರಿಯಿಂದ ಕೆಲಸ ಮಾಡದೇ ಇದ್ದೆ ಯೋಜನೆಗಳ ಲಾಭ ಅರ್ಹ ಫಲಾನುಭವಿಗಳಿಗೆ ಸಿಗುವದಿಲ್ಲ. ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಬ್ಯಾಂರ‍್ಸ್ಗಳಿಂದ ಆಗಬೇಕು ಎಂದು ತಿಳಿಸಿದರು.
ನಬಾರ್ಡನ ಡಿಡಿಎಂ ಮಂಜುನಾಥ ರೆಡ್ಡಿ, ಆರ್‌ಬಿಐನ ವಿಜಯಶ್ರೀ, ಕೆನರಾ ಬ್ಯಾಂಕ್‌ನ ಎಜಿಎಂ ಸತ್ಯನ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಎಜಿಎಂ ಪರಮೇಶ್ವರ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಜಕುಮಾರ ಹೂಗಾರ ಸೇರಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.