ಬನಹಟ್ಟಿಯಲ್ಲಿ ಪ್ರಜಾಸೌಧಕ್ಕಾಗಿ ನೆಡಯುತ್ತಿರುವ ಸರದಿ ಸತ್ಯಾಗ್ರಹದಲ್ಲಿ ಭಾನುವಾರ ಡಾ.ಅಕ್ಬರ್ ತಾಂಬೋಳಿ ಮಾತನಾಡಿದರು. ಹಾರೂನಸಾಬ ಅತ್ತಾರ, ಸದಾಶಿವ ಬೇವಿನಮರದ ಇದ್ದರು.
- ಡಾ.ಅಕ್ಬರ್ ತಾಂಬೋಳಿ ಹೇಳಿಕೆ
- ಸರದಿ ಸತ್ಯಾಗ್ರಹ 31ನೇ ದಿನಕ್ಕೆ
- ತಪ್ಪು ನಿರ್ಧಾರ ಮಾಡಿದವರು ಇನ್ನಾದರೂ ತಿದ್ದಿಕೊಳ್ಳಲಿ.
ರಬಕವಿ-ಬನಹಟ್ಟಿ: ಪ್ರಜಾಸೌಧ ಬನಹಟ್ಟಿಯಲ್ಲಿಯೇ ನಿರ್ಮಾಣವಾಗಬೇಕೆಂಬ ಆಗ್ರಹಿಸಿ ನಡೆಯುತ್ತಿರುವ ಸರದಿ ಸತ್ಯಾಗ್ರಹ ಭಾನುವಾರ 30ನೇ ದಿನಕ್ಕೆ ಕಾಲಿಟ್ಟಿದೆ.
ಡಾ.ಅಕ್ಬರ್ ತಾಂಬೋಳಿ ಮಾತನಾಡಿ, ತಪ್ಪು ನಿರ್ಧಾರ ಮಾಡಿದವರು ಇನ್ನಾದರೂ ತಿದ್ದಿಕೊಳ್ಳಲಿ. ಹೋರಾಟದ ಸ್ವರೂಪ ಬದಲಾಗುವ ಪರಿಸ್ಥಿತಿ ಬರುವ ಮುನ್ನವೇ ಸರ್ಕಾರ ನ್ಯಾಯಯುತ ನಿರ್ಧಾರ ಕೈಗೊಳ್ಳಬೇಕು. ಇನ್ನು ಜನರ ತಾಳ್ಮೆಯನ್ನು ಪರೀಕ್ಷಿಸುವ ಕೆಲಸ ಯಾರಿಂದಲೂ ಆಗಬಾರದು. ಅಧಿಕಾರಿಗಳಾಗಿರಲಿ ಅಥವಾ ರಾಜಕಾರಣಿ ಗಳಾಗಿರಲಿ, ಯಾವುದೇ ರೀತಿಯ ರಾಜಕೀಯ ಆಟ ಅಥವಾ ಕುತಂತ್ರಕ್ಕೆ ಬನಹಟ್ಟಿಯ ಜನ ಅವಕಾಶ ನೀಡುವುದಿಲ್ಲ. ಜನರ ನ್ಯಾಯಯುತ ಹಕ್ಕಿನ ಹೋರಾಟವಾಗಿದೆ ಎಂದರು.
ಪ್ರಸ್ತುತ ಕೈಗೊಂಡಿರುವ ನಿರ್ಧಾರ ಪುನರ್ ಪರಿಶೀಲಿಸಿ, ತಾಲೂಕಿನ ಅರ್ಹ ಪಟ್ಟಣ ಹಾಗೂ ಈಡೀ ಪ್ರದೇಶಕ್ಕೆ ಸುಲಭವಾಗಿ ತಲುಪಬಹುದಾದ ಕೇಂದ್ರಿಕೃತ ಸ್ಥಳವಾದ ಬನಹಟ್ಟಿಯಲ್ಲಿ ಪ್ರಜಾಸೌಧ ನಿರ್ಮಿಸಬೇಕು. ಅವೈಜ್ಞಾನಿಕ ನಿರ್ಧಾರದಿಂದ ಹಿಂದೆ ಸರಿದು ಜನರ ಹಿತದೃಷ್ಟಿಯಿಂದ ಆಡಳಿತಾತ್ಮಕವಾಗಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜಕಾರಣಿಗಳ ಮಾತಿಗೆ ಮಣಿದು ಅಧಿಕಾರಿಗಳು ನಿರ್ಧಾರ ಕೈಗೊಂಡರೆ, ಅದರ ಪರಿಣಾಮ ಅಧಿಕಾರಿಗಳ ಕರ್ತವ್ಯ ಹಾಗೂ ಅಧಿಕಾರದ ಮೇಲೆಯೇ ಬೀಳಬಹುದು. ತಮ್ಮ ಕೈಗಳನ್ನು ತಾವೇ ಕಟ್ಟಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವ ಮುನ್ನ ವಾಸ್ತವಾಂಶಗಳನ್ನು ಪರಿಶೀಲಿಸಿ ನಿರ್ಧಾರ ಬದಲಿಸಬೇಕು ಎಂದು ಆಗ್ರಹಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಶಂಕರ ಸೊರಗಾಂವಿ, ಮುಖಂಡರಾದ ಹಾರೂನಸಾಬ ಅತ್ತಾರ, ಸದಾಶಿವ ಬೇವಿನಮರದ ಇತರರಿದ್ದರು.