ಮುಧೋಳದ ನಿಂಗಾಪುರದ ರಂಗನಗೌಡ ಕಮಕೇರಿ ಅವರ ತೋಟದಲ್ಲಿ ಭೂ ಕುಸಿದಿರುವುದು.
- ಗ್ರಾಮಸ್ಥರಲ್ಲಿ ಆತಂಕ
- ನಿಖರ ಕಾರಣ ಪತ್ತೆಯಾಗಿಲ್ಲ
- ತಡವಾಗಿ ಬೆಳಕಿಗೆ ಬಂದ ಪ್ರಕರಣ
ಮುಧೋಳ : ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ಹದಿನೈದು ದಿನಗಳ ಹಿಂದೆ ಭೂಕುಸಿತ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನಿಂಗಾಪುರ ಗ್ರಾಮದ ರೈತ ರಂಗನಗೌಡ ಕಮಕೇರಿ ಅವರ ಕಬ್ಬಿನ ಗದ್ದೆಯಲ್ಲಿ 20 ಅಡಿ ಆಳ ಮತ್ತು 10 ಅಡಿ ಅಗಲದಷ್ಟು ಭೂಮಿ ಕುಸಿದಿದೆ. ಈ ದೃಶ್ಯವನ್ನು ಕಂಡು ರೈತರು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಭೂ ಕುಸಿತಕ್ಕೆ ನಿಖರವಾದ ಕಾರಣವೇನು? ಎಂಬುದು ಇನ್ನೂ ಪತ್ತೆಯಾಗಿಲ್ಲ. ಮುಧೋಳ ತಹಸೀಲ್ದಾರರು ಹಾಗೂ ಭೂ ವಿಜ್ಞಾನಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸ್ಟೋನ್ ಬ್ಲಾಸ್ಟ್ ಕಾರಣವೇ?
ಭೂಮಿ ಕುಸಿಯಲು ನೆಲಮಟ್ಟದಲ್ಲಾದ ಜಲಸ್ತರದ ಬದಲಾವಣೆಯೇ? ಅಥವಾ ಗ್ರಾಮದ ಪಕ್ಕದಲ್ಲಿರುವ ಸಿಮೆಂಟ್ ಕಂಪನಿ ನಡೆಸುತ್ತಿರುವ ಸ್ಟೋನ್ ಬ್ಲಾಸ್ಟ್ ಕಾರಣವೇ? ಎಂಬ ದ್ವಂದ್ವ ಗ್ರಾಮಸ್ಥರನ್ನು ಕಾಡುತ್ತಿದೆ. ಸ್ಟೋನ್ ಬ್ಲಾಸ್ಟ್ನಿಂದ ಸುತ್ತಲಿನ ಗ್ರಾಮಗಳ ಮನೆಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದು ರೈತ ರಂಗನಗೌಡ ಕಮಕೇರಿ ಆರೋಪಿಸುತ್ತಾರೆ. ಸ್ಟೋನ್ ಬ್ಲಾಸ್ಟಿಂಗ್ ತಕ್ಷಣ ನಿಲ್ಲಿಸಬೇಕು ಮತ್ತು ಭೂ ಕುಸಿತಕ್ಕೆ ಕಾರಣವೇನು? ಎಂಬುದನ್ನು ಪತ್ತೆಹಚ್ಚಿ ರೈತರ ಆತಂಕ ದೂರ ಮಾಡುವ ಜವಾಬ್ದಾರಿ ಸಂಬಂಧಿಕ ಇಲಾಖೆಗೆ ಸೇರಿದೆ.
"
ಕಬ್ಬಿನ ಗದ್ದೆಯಲ್ಲಿ ಭೂಮಿ ಕುಸಿದಿದೆ. ಕಳೆದ 15 ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು, ಕೃಷಿ ಚಟುವಟಿಕೆ ನಡೆಸಲು ಭಯಪಡುವಂತಾಗಿದೆ. ತಕ್ಷಣ ಸಂಬಂಧಿತ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕಾರಣ ಕಂಡುಹಿಡಿಯಬೇಕು.
— | ರಂಗನಗೌಡ ಕಮಕೇರಿ ನಿಂಗಾಪುರ, ಗ್ರಾಮದ ರೈತ
"
ಭೂ ಕುಸಿತದ ಬಗ್ಗೆ ಜಿಲ್ಲಾ ಮಟ್ಟದ ಗಣಿ ಮತ್ತು ಭೂ ವಿಜ್ಞಾನದ ಭೂ ವಿಜ್ಞಾನಿಗಳ ಗಮನಕ್ಕೆ ತರಲಾಗಿದೆ. ಅವರಿಂದ ಮಾಹಿತಿ ಬಂದ ನಂತರ ತಿಳಿಸಲಾಗುವುದು.
— | ಡಾ. ಚಿಕ್ಕಪ್ಪ ನಾಯಿಕ, ತಹಸೀಲ್ದಾರ್ ಮುಧೋಳ