ಬಾಗಲಕೋಟೆಯ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕುವೆಂಪು ಸ್ಮರಣೆ ಕಾರ್ಯಕ್ರಮ ಡಾ.ಮಾಧವರಂಗ ಎಂ. ಉದ್ಘಾಟಿಸಿದರು. ಬಿವಿವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ.ಸಜ್ಜನ (ಬೇವೂರ), ಪ್ರಾಚಾರ್ಯೆ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಉಪಪ್ರಾಚಾರ್ಯ ಡಾ.ಸಿ.ಎಸ್.ಹಿರೇಮಠ, ಕನ್ನಡ ಬಳಗದ ಅಧ್ಯಕ್ಷ ಡಾ.ಶಿವಾನಂದ ಹುಲಕುಂದ ಇದ್ದರು.  
ಬಾಗಲಕೋಟೆ

ಶ್ರೀಸಾಮಾನ್ಯನಿಗೂ ಮಹತ್ವ ತಂದುಕೊಟ್ಟ ಕವಿ ಕುವೆಂಪು

ಪ್ರಮುಖ ಮುಖ್ಯಾಂಶಗಳು

  • ನಿಜಲಿಂಗಪ್ಪ ಮೆಡಿಕಲ್ ಕಾಲೇಜ್‌
  • ಕುವೆಂಪು ಸ್ಮರಣೆ
  • ನೇತ್ರ ತಜ್ಞ ಡಾ.ಮಾಧವರಂಗ ಅಭಿಮತ
ಬಾಗಲಕೋಟೆ: ಕನ್ನಡ ಸಾಹಿತ್ಯಕ್ಕೆ ವೈಚಾರಿಕತೆ ತಂದುಕೊಟ್ಟ ದಾರ್ಶನಿಕ ಕುವೆಂಪು. ಅವರು ತಮ್ಮ ಕೃತಿಗಳಲ್ಲಿ ಶ್ರೀಸಾಮಾನ್ಯನಿಗೂ ಮಹತ್ವ ತಂದುಕೊಟ್ಟರು. ಪ್ರೇಮ, ಪ್ರಕೃತಿ ಮತ್ತು ಅಧ್ಯಾತ್ಮ ಕುವೆಂಪು ಅವರ ಬರವಣಿಗೆಯ ಮಹತ್ವದ ಸಂಗತಿಗಳಾಗಿವೆ ಎಂದು ಧಾರವಾಡದ ನೇತ್ರತಜ್ಞ ಡಾ.ಮಾಧವರಂಗ ಎಂ.ಪಿ ಅವರು ಅಭಿಪ್ರಾಯಪಟ್ಟರು.
ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜೀವರಸಾಯನಶಾಸ್ತ್ರ ವಿಭಾಗ, ಎನ್‌ಎಸ್‌ಎಸ್ ಘಟಕ ಮತ್ತು ಕನ್ನಡ ಬಳಗದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕುವೆಂಪು ಸ್ಮರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಕುವೆಂಪು ಆತ್ಮ ಚೈತನ್ಯ ಅವರ ಕೃತಿಗಳ ರೂಪದಲ್ಲಿ ಎಲ್ಲ ಕನ್ನಡಿಗರನ್ನೂ ಮುಟ್ಟಿದೆ. ಪ್ರಸ್ತುತ ಸಂದರ್ಭದಲ್ಲಿ ವೈಚಾರಿಕತೆಗಾಗಿ ಕುವೆಂಪು ಅವರ ಕೃತಿಗಳನ್ನು ಮತ್ತೆಮತ್ತೆ ಓದುವುದು ಅಗತ್ಯವಾಗಿದೆ. ಕುವೆಂಪು ಅವರ ಕೃತಿಗಳ ಓದಿನಿಂದ ಎಲ್ಲರಲ್ಲೂ ವಿಶ್ವಮಾನವ ಪ್ರಜ್ಞೆ ಜಾಗೃತಗೊಳ್ಳಲಿ ಎಂದರು.
ಬಿವಿವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ.ಸಜ್ಜನ (ಬೇವೂರ) ಮಾತನಾಡಿ, ಕುವೆಂಪು ಕನ್ನಡದ ಅಸ್ಮಿತೆ ಮತ್ತು ದಂತಕಥೆ. ಕನ್ನಡಕ್ಕೆ ನಾಡಗೀತೆ ಹಾಗೂ ರೈತಗೀತೆ ಕೊಟ್ಟ ಕವಿ ಅವರು ಎಂದು ನುಡಿದು ಕುವೆಂಪು ಅವರ ಬದುಕಿನ ಮಹತ್ವದ ಘಟನೆಗಳನ್ನು ಹೇಳಿದರು.
ಡಾ. ಸಂಗಪ್ಪ ಕಾಶಿನಕುಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಕವಿತಾ ಹಿರೇಮಠ ಸ್ವಾಗತಿಸಿದರು. ಡಾ.ಭಾಸ್ಕರ ಮಾರಾ ಕುವೆಂಪು ಅವರ ಜೀವನ ಮತ್ತು ಸಾಧನೆಯನ್ನು ತಿಳಿಸಿದರು. ಪ್ರಾಚಾರ್ಯೆ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಉಪಪ್ರಾಚಾರ್ಯ ಡಾ.ಸಿ.ಎಸ್. ಹಿರೇಮಠ, ಕನ್ನಡ ಬಳಗದ ಅಧ್ಯಕ್ಷ ಡಾ. ಶಿವಾನಂದ ಹುಲಕುಂದ, ಅಂಗ ರಚನಾ ವಿಭಾಗದ ಮುಖ್ಯಸ್ಥ ಡಾ. ಸಂಜೀವ ಕೊಳಗಿ, ಶರೀರಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುರೇಖಾರಾಣಿ, ಎನ್‌ಎಸ್‌ಎಸ್ ಘಟಕದ ಸಂಯೋಜಕ ಡಾ. ಶ್ರೀನಿವಾಸ ಪಾಟೀಲ ಇದ್ದರು. ಡಾ. ಬ್ರಿಜೇಶ ಪಾಟೀಲ ಪರಿಚಯಿಸಿದರು. ಡಾ. ಮಹಾಂತೇಶ ಬೂತಾಳ ವಂದಿಸಿದರು.