ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ನಡೆದ ಶ್ರೀಶೈಲ ಧರ್ಮರಥದ ಭವ್ಯ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡ ಅಪಾರ ಭಕ್ತ ಸಮೂಹ. 
ಬಾಗಲಕೋಟೆ

ಹಿಪ್ಪರಗಿಯಲ್ಲಿ ಕಂಗೊಳಿಸಿದ ಕೃಷ್ಣಾ ಆರತಿ ಸಂಭ್ರಮ

ಪ್ರಮುಖ ಮುಖ್ಯಾಂಶಗಳು

  • ಡಾ. ಮುರುಗೇಶ ನಿರಾಣಿ ಜನ್ಮದಿನ
  • ಹಿಪ್ಪರಗಿಯಲ್ಲಿ ಭಕ್ತಿ ಅಭಿಮಾನದ ಸಂಗಮ
  • ಶ್ರೀಶೈಲದಿಂದ ಆಗಮಿಸಿದ್ದ ಧರ್ಮ ರಥದ ಭವ್ಯ ಶೋಭಾಯಾತ್ರೆ ಹಿಪ್ಪರಗಿ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಿತು.
ಜಮಖಂಡಿ: ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಮಾಜಿ ಸಚಿವ, ಉದ್ಯಮಿ ಡಾ. ಮುರುಗೇಶ ನಿರಾಣಿ ಅವರ 61ನೇ ಜನ್ಮದಿನದ ಅಂಗವಾಗಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಆಯೋಜಿಸಿದ್ದ ಕೃಷ್ಣಾ ಆರತಿ ಸಂಭ್ರಮ ಭಕ್ತಿ, ಸಂಭ್ರಮ, ಸಾಂಸ್ಕೃತಿಕ ವೈಭವ ಹಾಗೂ ಅಭಿಮಾನದ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಯಿತು.
ಕೃಷ್ಣಾ ನದಿ ತೀರದಲ್ಲಿ ನಡೆದ ಈ ಅದ್ದೂರಿ ಕಾರ್ಯಕ್ರಮಕ್ಕೆ ಇಡೀ ಹಿಪ್ಪರಗಿ ಗ್ರಾಮವೇ ಹಬ್ಬದ ಸಿಂಗಾರ ತೊಟ್ಟಿತ್ತು. ತ್ರಿವರ್ಣ ಬಣ್ಣದ ದೀಪಗಳಿಂದ ಅಲಂಕರಿಸಿದ್ದ ಹಿಪ್ಪರಗಿ ಬ್ಯಾರೇಜ್ ರಾತ್ರಿ ವೇಳೆ ವಿದ್ಯುತ್ ದೀಪಗಳ ಬೆಳಕಿನಲ್ಲಿ ಕಂಗೊಳಿಸಿ, ನೋಡುಗರ ಕಣ್ಮನ ಸೆಳೆಯಿತು. ಕೃಷ್ಣಾ ತೀರದ ಈ ಬೆಳಕಿನ ವೈಭವ ಕಾರ್ಯಕ್ರಮದ ಮೆರುಗನ್ನು ಮತ್ತಷ್ಟು ಹೆಚ್ಚಿಸಿತು.

ಶ್ರೀಶೈಲ ಧರ್ಮ ರಥಕ್ಕೆ ಭಕ್ತರ ಭವ್ಯ ಸ್ವಾಗತ

ಶ್ರೀಶೈಲದಿಂದ ಆಗಮಿಸಿದ್ದ ಧರ್ಮ ರಥದ ಭವ್ಯ ಶೋಭಾಯಾತ್ರೆ ಹಿಪ್ಪರಗಿ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಿತು. ಧರ್ಮರಥದ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಭಕ್ತಿ ಭಾವದಿಂದ ಸ್ವಾಗತಿಸಿದರು. ಶೋಭಾಯಾತ್ರೆಯಲ್ಲಿ ಕರಡಿ ಮಜಲು, ಶಹನಾಯಿ ವಾದನ, ಡೊಳ್ಳು ಸೇರಿ ವಿವಿಧ ವಾದ್ಯಮೇಳಗಳು ಮೊಳಗಿದ್ದು, ಗ್ರಾಮದಲ್ಲಿ ಧಾರ್ಮಿಕ ಉತ್ಸವದ ವಾತಾವರಣ ನಿರ್ಮಾಣವಾಗಿತ್ತು.
ಜುನಾ ಅಖಾಡದ ಸಹಜಾನಂದ ದೇವಗಿರಿ ಬಾಬಾ ಸೇರಿ ವಿವಿಧ ಯೋಗಿಗಳು, ನಾಡಿನ ಹೆಸರಾಂತ ಮಠಾಧೀಶರು ಹಾಗೂ ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಹಿಪ್ಪರಗಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಮತ್ತು ಅಭಿಮಾನಿಗಳು ಭವ್ಯ ಮೆರವಣಿಗೆಯ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು.

ಶ್ರೀಶೈಲ ಪಂಡಿತರಿಂದ ಹೋಮ-ಹವನ

ಕೃಷ್ಣಾ ನದಿ ತೀರದಲ್ಲಿರುವ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀಶೈಲದಿಂದ ಆಗಮಿಸಿದ್ದ ಪಂಡಿತರು ಹಾಗೂ ಅರ್ಚಕರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಹೋಮ-ಹವನ, ವಿಶೇಷ ಪೂಜೆ ಭಕ್ತಿ ಭಾವದಿಂದ ನಡೆದವು. ಕೃಷ್ಣಾ ನದಿಗೆ ಆರತಿ ಸಲ್ಲಿಸುವ ಮೂಲಕ ನದಿಗೆ ಕೃತಜ್ಞತೆ ಅರ್ಪಿಸಲಾಯಿತು.

ಪುಷ್ಪ ವೃಷ್ಠಿಯಲ್ಲಿ ಅಭಿಮಾನ ಮೆರೆದ ಜನತೆ

ಮಾಜಿ ಸಚಿವ ಡಾ. ಮುರುಗೇಶ ನಿರಾಣಿ ಅವರು ಶೋಭಾಯಾತ್ರೆಯಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ಅಭಿಮಾನಿಗಳು ರಸ್ತೆಯ ಇಕ್ಕೆಲಗಳಿಂದ ಪುಷ್ಪವೃಷ್ಠಿ ಮಾಡುವ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ಹೂಮಳೆಯ ನಡುವೆ ಬೃಹತ್ ಕಬ್ಬು ಹಾಗೂ ಸೇಬು ಹಣ್ಣಿನ ಹಾರದ ಮೂಲಕ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಆತ್ಮೀಯ ಸ್ವಾಗತ ಕೋರಿದರು.
ನಾಡಿನ ವಿವಿಧ ಮಠಾಧೀಶರು, ಸಂತರು, ಧಾರ್ಮಿಕ ಮುಖಂಡರು, ಗಣ್ಯರು, ಗ್ರಾಮಸ್ಥರು ಹಾಗೂ ಅಪಾರ ಸಂಖ್ಯೆಯ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.