ಬಾಗಲಕೋಟೆ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ವೀರಣ್ಣ ಚರಂತಿಮಠ ಅವರ ಉಮೇದುವಾರಿಕೆ ಸಲ್ಲಿಕೆ ವೇಳೆ ಪಾಲ್ಗೊಂಡಿದ್ದ ಭಾರಿ ಜನ ಸಂಖ್ಯೆ. 
ಬಾಗಲಕೋಟೆ

ಕೋಟೆನಗರಿ ಕಮಲ ಪಡೆ ಶಕ್ತಿ ಪ್ರದರ್ಶನ

ಪ್ರಮುಖ ಮುಖ್ಯಾಂಶಗಳು

  • ಬಾಗಲಕೋಟೆ ನಗರದಲ್ಲಿ ಭವ್ಯ ಶೋಭಾ ಯಾತ್ರೆ
  • ಶಾಸಕ ವೀರಣ್ಣ ಚರಂತಿಮಠ ಬಲ ಪ್ರದರ್ಶನ
  • ಹರಿದು ಬಂದ ಜನ ಸಾಗರ
ಬಾಗಲಕೋಟೆ: ಬಾಗಲಕೋಟೆ ಮತಕ್ಷೇತ್ರದ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಸೋಮವಾರ ಬೃಹತ್ ಶೋಭಾಯಾತ್ರೆ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
ಶುಭ ಮೂಹರ್ತ ನೋಡಿಕೊಂಡು ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಸೋಮವಾರ ಬೃಹತ್ ಸಾರ್ವಜನಿಕ ಮೆರವಣಿಗೆ ನಡೆಸಿದರು. ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರ ಪಡೆ ಸೇರಿಸುವ ಮೂಲಕ ಬಲ ಪ್ರದರ್ಶನ ಮಾಡಿದರು. ಜನ ಸಾಗರವೇ ಹರಿದು ಬಂದಿತ್ತು.
ಬಾಗಲಕೋಟೆ ತಾಲೂಕಿನ ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನ ಹಾಗೂ ನಗರದ ಬಿವಿವಿ ಸಂಘದ ಕಣವಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ದೊರೆಯಿತು. ಅಲಂಕೃತ ತೆರದ ವಾಹನ ವೀರಣ್ಣ ಚರಂತಿಮಠ ಏರುತ್ತಿದ್ದಂತೆ ಕಾರ್ಯಕರ್ತರು, ಅಭಿಮಾನಿಗಳು ಕೇಕೇ, ಚಪ್ಪಾಳೆ ತಟ್ಟಿ ಸ್ವಾಗತ ಕೋರಿದರು.
ಬಿವಿವಿ ಸಂಘದ ಒಳಾಂಗಣದ ರಸ್ತೆ ಮೂಲಕ ಬೃಹತ್ ಶೋಭಾ ಯಾತ್ರೆ ಬೀಳೂರು ಅಜ್ಜನ ಗುಡಿಗೆ ಆಗಮಿಸಿತು. ನಂತರ ಶೋಭಾ ಯಾತ್ರೆಯು ಟೀಕಿನಮಠ, ಅಡತ್ ಬಜಾರ್, ಪೊಲೀಸ್ ಚೌಕ್, ಟಾಂಗಾ ಸ್ಟಾಂಡ್, ವಲ್ಲಬಾಯಿ ಚೌಕ್, ಎಂ.ಜಿ ರೋಡ, ಬಸವೇಶ್ವರ ವೃತ್ತದ ಮೂಲಕ ಹೊಳೆ ಆಂಜನೇಯ ದೇವಸ್ಥಾನಕ್ಕೆ ತಲುಪಿ ಮುಕ್ತಾಯವಾಯಿತು. ಅಡತ್ ಬಜಾರ್, ವಲ್ಲಾಬಾಯಿ ಚೌಕ್, ಎಂ.ರಸ್ತೆಯಲ್ಲಿ ವೀರಣ್ಣ ಚರಂತಿಮಠ ಅವರಿಗೆ ಹೂವಿನ ಹಾರ ಅದ್ದೂರಿ ಸ್ವಾಗತ ಕೋರಿದರು. ಘೋಷಣೆಗಳು ಪ್ರತಿಧ್ವನಿಸಿದವು.
ಶೋಭಾಯಾತ್ರೆಯಲ್ಲಿ ವಿವಿಧ ವಾದ್ಯಗಳು, ಕರಡಿ ಮಜ್ಜಲು ತಂಡಗಳು ಭಾಗವಹಿಸಿದವು. ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಅಭಿಮಾನಿಗಳು, ಹಿತೈಷಿಗಳು ಪಾಲ್ಗೊಂಡಿದ್ದರು. ಪ್ರಮುಖ ಬೀದಿಗಳಲ್ಲಿ ಕಮಲ ಬಾವುಟ ರಾರಾಜಿಸಿತು. ಶಕ್ತಿ ಪ್ರದರ್ಶನ ಮೂಲಕ ಎದುರಾಳಿಗಳಿಗೆ ಪಂಥಾಹ್ವಾನ ನೀಡಿದರು. ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಗೊಳಿಸಿತು. ರಸ್ತೆಯ ಇಕ್ಕಲೆಗಳಲ್ಲಿ ಹಿರಿಯರು, ಮಹಿಳೆಯರು ವೀರಣ್ಣ ಚರಂತಿಮಠರತ್ತ ವಿಕ್ಟರಿ ಸಿಂಬಲ್ ತೋರಿಸಿ ನಗೆಬೀರಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ, ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ, ಸಂಸದ ಪಿ.ಸಿ. ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಸಚಿವರಾದ ಬಿ. ಶ್ರೀರಾಮುಲು, ಮುರುಗೇಶ ನಿರಾಣಿ, ಅರವಿಂದ ಲಿಂಬಾವಳಿ, ಎನ್.ಮಹೇಶ್, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ, ಕುಮಾರ ಯಳ್ಳಿಗುತ್ತಿ, ರಾಜು ನಾಯ್ಕರ, ಡಾ. ದೇವರಾಜ ಪಾಟೀಲ, ಅಶೋಕ ಲಿಂಬಾವಳಿ, ಶಿವಾನಂದ ಟವಳಿ, ಪ್ರಭು ಹಡಗಲಿ, ಡಾ. ಶೇಖರ ಮಾನೆ, ಮತ್ತಿತರರು ಭಾಗವಹಿಸಿದ್ದರು.