ರಬಕವಿ ನಗರದ ಗಟ್ಟಗಿ ಬಸವೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಭಾರತೀಯ ಸ್ವರಾಜ್ಯ ಸಂಸ್ಥೆ, ಕನ್ನೂರಿನ ಆಶ್ರಯದಲ್ಲಿ ರಬಕವಿ ಶಾಖೆಯ ವತಿಯಿಂದ ಆಯೋಜಿಸಿದ್ದ ಗುರು ಪೂರ್ಣಿಮಾ ಸತ್ಸಂಗ ಸಮಾರಂಭದಲ್ಲಿ ಗುರುಸಿದ್ಧೇಶ್ವರ ಶ್ರೀಗಳು, ರಾಮಪುರ ಭಸ್ಮೆ ಮಹಾರಾಜರು, ಸಾಹಿತಿ ಸಿದ್ದರಾಜ ಪೂಜಾರಿ, ಗಿರೀಶ ಮುತ್ತೂರ, ಡಾ.ಬಿ.ಎನ್.ಬಾಗಲಕೋಟೆ ಇತರರಿದ್ದರು.
- ರಾಮಪುರ ಶಿವಾನಂದ ಕುಟೀರದ ಭಸ್ಮೆ ಮಹಾರಾಜರು ಹೇಳಿಕೆ
- ಗುರು ಪೂರ್ಣಿಮಾ ಸತ್ಸಂಗ ಸಮಾರಂಭ
ತಂದೆ-ತಾಯಿ, ಸ್ನೇಹಿತರು, ಬಂಧು-ಬಳಗ, ಪ್ರಕೃತಿ ಸೇರಿ ನಮ್ಮ ಜೀವನದಲ್ಲಿ ಅನೇಕರು ವಿವಿಧ ರೀತಿಯಲ್ಲಿ ಗುರುಗಳಾಗಿ ಮಾರ್ಗದರ್ಶನ ಮಾಡುತ್ತಾರೆ. ಆಶೀರ್ವದಿಸುವ ಗುರುಗಳ ಹೃದಯ ವಿಶಾಲವಾಗಿದ್ದು, ಅಂತಹ ಎಲ್ಲ ಗುರುಗಳಿಗೆ ಗೌರವ ಸಲ್ಲಿಸುವುದು ನಮ್ಮ ಧರ್ಮವಾಗಿದೆ ಎಂದು ರಾಮಪುರ ಶಿವಾನಂದ ಕುಟೀರದ ಭಸ್ಮೆ ಮಹಾರಾಜರು ಹೇಳಿದರು.
ರಬಕವಿ ನಗರದ ಗಟ್ಟಗಿ ಬಸವೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಭಾನುವಾರ ರಾತ್ರಿ ಭಾರತೀಯ ಸ್ವರಾಜ್ಯ ಸಂಸ್ಥೆ, ಕನ್ನೂರಿನ ಆಶ್ರಯದಲ್ಲಿ ರಬಕವಿ ಶಾಖೆಯ ವತಿಯಿಂದ ಆಯೋಜಿಸಿದ್ದ ಗುರು ಪೂರ್ಣಿಮಾ ಸತ್ಸಂಗ ಸಮಾರಂಭದ ಸಮ್ಮುಖ ವಹಿಸಿ ಅವರು ಆಶೀರ್ವಚನ ನೀಡಿದರು.
ಗುರು ಎಂದರೆ ಕೇವಲ ಪಾಠ ಹೇಳುವ ಶಿಕ್ಷಕರಷ್ಟೇ ಅಲ್ಲ. ಜೀವನದ ದಿಕ್ಕು ತೋರಿಸುವ ಪ್ರತಿಯೊಬ್ಬರೂ ಗುರುಗಳೇ. ಅವರಿಂದಲೇ ವ್ಯಕ್ತಿತ್ವ ವಿಕಸನ, ಸಂಸ್ಕಾರ ಹಾಗೂ ಆತ್ಮವಿಶ್ವಾಸ ಬೆಳೆಯುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ನೀಡಿರುವ ಸ್ಥಾನ ಅತ್ಯುನ್ನತವಾಗಿದ್ದು, ಆ ಪರಂಪರೆಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.
ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಗುರು-ಶಿಷ್ಯ ಪರಂಪರೆ ಭಾರತೀಯ ಸಂಸ್ಕೃತಿಯ ಜೀವನಾಡಿಯಾಗಿದ್ದು, ಗುರುಗಳ ಮಾರ್ಗದರ್ಶನದಲ್ಲಿ ನಡೆಯುವ ಜೀವನವೇ ಸಾರ್ಥಕ ಜೀವನ ಎಂದು ತಿಳಿಸಿದರು.
ಸಾಹಿತಿ ಸಿದ್ದರಾಜ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ರಬಕವಿ ಘಟಕದ ಅಧ್ಯಕ್ಷ ಗಿರೀಶ ಮುತ್ತೂರ, ಡಾ.ಬಿ.ಎನ್.ಬಾಗಲಕೋಟೆ, ಶ್ರೀನಿವಾಸ ಬಾಗಲಕೋಟೆ, ಸದಾನಂದ ಜೋತಾವರ, ಶಿವಾನಂದ ಜೋತಾವರ, ಚಿದಾನಂದ ಸೊಲ್ಲಾಪುರ, ಪ್ರಕಾಶ ವಜ್ರಮಟ್ಟಿ, ಗಜಾನನ ತೆಗ್ಗಿ ಇತರರಿದ್ದರು.