ಬಾಗಲಕೋಟೆ ಜಿಲ್ಲೆಯ ನದಿ ಪಾತ್ರದಲ್ಲೇ ಅಕ್ರಮ ಮರಳುಗಾರಿಕೆ ನಡೆಸುತ್ತಿರುವುದನ್ನು ದಾಳಿ ವೇಳೆ ಪತ್ತೆ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು.
- ಮೊದಲ ಸಲ ಮೇಲುಗೈ ಸಾಧಿಸಿದ್ದ ಅಕ್ರಮಕೋರರು
- ಎರಡನೇ ರೇಡ್ ಫುಲ್‌ಸಕ್ಸಸ್
- ಪ್ಲಾೃನ್ ಬದಲಿಸಿದ್ದ ಅಧಿಕಾರಿಗಳು
ಬಾಗಲಕೋಟೆ: ಜಿಲ್ಲೆಯಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿರುವ ಅಕ್ರಮ ಮರಳು ದಂಧೆ ಕಡಿವಾಣ ಹಾಕಲು ಲೋಕಾಯುಕ್ತ ಅಧಿಕಾರಿಗಳು ಎಂಟ್ರಿ ಪಡೆದು ಬುಧವಾರ ಬೃಹತ್ ಪ್ರಮಾಣದಲ್ಲಿ ರೇಡ್ ಮಾಡಿ, ಅಕ್ರಮಕೋರರು ಮತ್ತು ಅವರಿಗೆ ಬೆಂಬಲವಾಗಿ ನಿಂತಿದ್ದ ಪ್ರಭಾವಿಗಳಿಗೆ ನಡುಕ ಹುಟ್ಟಿಸಿದ್ದಾರೆ.
ಆದರೆ, ಲೋಕಾಯುಕ್ತ ಅಧಿಕಾರಿಗಳು ಮೇ 20ರಂದು ನಡೆಸಿರುವ ದಾಳಿಗೂ ಮುನ್ನ ಇದೇ ತೆರನಾಗಿ ಯೋಜಿತ ರೇಡ್ ಮಾಡಲು ಮುಂದಾಗಿ, ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಇನ್ನೇನು ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ ಮಾಡಬೇಕು ಎನ್ನುವಷ್ಟರಲ್ಲೇ ವಿಷಯ ಸೊರಿಕೆ ಆಗಿ, ಲೋಕಾ ಅಧಿಕಾರಿಗಳ ಪ್ಲಾನ್ ಉಲ್ಟಾ ಆಗುವಂತೆ ಮಾಡಿತ್ತು.
ಕಳೆದ 15 ದಿನಗಳ ಹಿಂದೆ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡಿದ್ದ 100 ಜನರ ತಂಡ ಹಾಗೂ ಹೆಚ್ಚಿನ ಭದ್ರತೆಗಾಗಿ ಎರಡು ಕೆಎಸ್‌ಆರ್‌ಪಿ ತುಕಡಿಗಳ ಜೊತೆ ಏಕಕಾಲಕ್ಕೆ ಅಕ್ರಮ ಮರಳು ಕೇಂದ್ರಗಳ ಮೇಲೆ ಬೃಹತ್ ದಾಳಿ ನಡೆಸಲು ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದರು.
ಬಾಗಲಕೋಟೆ ಲೋಕಾ ಅಧಿಕಾರಿಗಳ ನೇತೃತ್ವದಲ್ಲಿ 9 ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ಸಹ ಬೆಳಗ್ಗೆ 7 ಗಂಟೆಗೆ ಹಾಜರಿರಲು, ಎಲ್ಲೆಲ್ಲಿ ದಾಳಿ ನಡೆಸಬೇಕು ಎನ್ನುವ ಬಗ್ಗೆ ಸಂಪೂರ್ಣ ನೀಲನಕ್ಷೆ ತಯಾರಿಸಿ, ಕೆಎಸ್‌ಆರ್‌ಪಿ ಯುನಿಟ್‌ಗೂ ಬರುವಂತೆ ತಿಳಿಸಲಾಗಿತ್ತು.
ಆದರೆ, ಲೋಕಾಯುಕ್ತ ಅಧಿಕಾರಿಗಳು ಎರಡು ಕೆಎಸ್‌ಆರ್‌ಪಿ ತುಕಡಿಗಳನ್ನು ಕರೆದುಕೊಂಡು ಏನು ಮಾಡುತ್ತಾರೆ? ಎನ್ನುವ ಬಗ್ಗೆ ಆಂತರಿಕವಾಗಿ ಚರ್ಚೆ ನಡೆದು, ಕೊನೆ ಗಳಿಗೆಯಲ್ಲಿ ಅಕ್ರಮ ಮರಳುಗಾರಿಕೆ ಮೇಲೆ ದಾಳಿ ನಡೆಸಲಿದ್ದಾರೆ ಎನ್ನುವ ಸುಳಿವು ಸಿಕ್ಕಿತ್ತು. ಈ ಸುದ್ದಿ ಮಿಂಚಿನಂತೆ ಅಕ್ರಮಕೋರರ ಕಿವಿಗೆ ಮುಟ್ಟಿಸಿದ್ದಲ್ಲದೇ ಅಲರ್ಟ್ ಆಗಿರುವಂತೆ ಸಂದೇಶವನ್ನು ಯಾರೋ ತಲುಪಿಸಿಬಿಟ್ಟಿದ್ದರು.
ಇದರಿಂದ ಅಕ್ರಮಕೋರರು ಮತ್ತು ಅವರಿಗೆ ಬೆಂಬಲವಾಗಿ ನಿಂತಿರುವ ಪ್ರಭಾವಿಗಳು ಮತ್ತು ಅಕ್ರಮ ದಂಧೆಯ ಪಾಲುದಾರರು ಎಚ್ಚೆತ್ತುಕೊಂಡು ಏಕಾಏಕಿ ಅಕ್ರಮ ದಂಧೆಯನ್ನು ನಿಲ್ಲಿಸಿದರು. ಇದು ಲೋಕಾಯುಕ್ತ ಅಧಿಕಾರಿಗಳಿಗೆ ತಿಳಿಯುತ್ತಿದ್ದಂತೆ ರಾತ್ರೋ ರಾತ್ರಿ ದಾಳಿಯನ್ನು ಕೈಬಿಟ್ಟರು. ಇದರಿಂದ ಅತ್ಯಂತ ವ್ಯವಸ್ಥಿತವಾಗಿ ದಾಳಿ ನಡೆಸುವ ಪ್ಲಾನ್ ಸಂಪೂರ್ಣ ಉಲ್ಟಾ ಹೊಡೆದಿದ್ದರಲ್ಲೇ ಎಡವಟ್ಟು ಆಗಿದ್ದೆಲ್ಲಿ? ಎನ್ನುವ ಕುರಿತು ಚಿಂತನ-ಮಂಥನಗಳು ನಡೆಸಿ, ಮುಂದಿನ ಸಲ ಯಾವುದೇ ಸುಳಿವೂ ನೀಡದೇ, ತಮ್ಮ ಸಿಬ್ಬಂದಿಗೂ ಮಾಹಿತಿ ನೀಡದೇ, ಕೆಎಸ್‌ಆರ್‌ಪಿ ಬಳಕೆಯನ್ನು ನಿಲ್ಲಿಸಿ, ದಿಢೀರ್ ದಾಳಿ ನಡೆಸಲು ತೀರ್ಮಾನಿಸಲಾಯಿತು ಎಂದು ತಿಳಿದು ಬಂದಿದೆ.
ಈಗ ಯಾಮಾರಿದ ಅಕ್ರಮಕೋರರು
ಕೆಲ ಅಧಿಕಾರಿ ಮತ್ತು ಸಿಬ್ಬಂದಿಯನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ಮೆರೆದಾಡುತ್ತಿರುವ ಅಕ್ರಮ ಮರಳುಕೋರರು ಮತ್ತು ಪಾಲುದಾರರು ಯಾವಾಗ ಲೋಕಾಯುಕ್ತ ದಾಳಿ ವಿಫಲವಾಯಿತೋ ತಮ್ಮನ್ನು ಟಚ್ ಮಾಡುವವರು ಯಾರು? ಎಂದು ಮೂರ‌್ನಾಲ್ಕು ದಿನಗಳಲ್ಲಿ ಮತ್ತೆ ಬೇಕಾಬಿಟ್ಟಿಯಾಗಿ ನೆಲ ಬಗೆದು ಮರಳು ಎತ್ತುವ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಿದರು. ಸ್ಥಳೀಯ ಅಧಿಕಾರಿಗಳಂತೂ ತಮ್ಮ ಕಡೆಗೆ ತಿರುಗಿ ನೋಡಲ್ಲ. ಕೆಲ ಜನಪ್ರತಿನಿಧಿಗಳು ಮತ್ತು ಅವರ ಆಪ್ತರ ಶ್ರೀರಕ್ಷೆ ಇರುವುದರಿಂದ ಮಳೆ ಶುರುವಾಗುವ ಮುನ್ನವೇ ಸಿಕ್ಕಿದ್ದು ಸೀರುಂಡೆ ತರ ಹಿಟ್ಯಾಚಿ, ಜೆಸಿಬಿ, ಯಾಂತ್ರಿಕೃತ ದೋಣಿಗಳನ್ನು ಬಳಕೆ ಮಾಡಿಕೊಂಡು ನದಿ ಪಾತ್ರಗಳು ಸೇರಿದಂತೆ ಮರಳು ಸಿಗುವಡೆ ಆಹೋರಾತ್ರಿ ಅಕ್ರಮ ದಂಧೆ ತೀವ್ರಗೊಳಿಸಿದರು.
ಆದರೆ, ಮೊದಲ ಪ್ರಯತ್ನದಲ್ಲಿ ದಾಳಿ ಕೈಬಿಟ್ಟಿದ್ದ ಲೋಕಾಯುಕ್ತರು ರೇಡ್ ಮಾಡಲು ಶುಭ ಮುಹೂರ್ತ ಸಿದ್ಧತೆ ಮಾಡಿಕೊಂಡಿದ್ದರು. ಮೊದಲ ಸಲದಂತೆ ಲೋಕಾಯುಕ್ತರು ದಾಳಿ ನಡೆಸಲು ಮುಂದಾದರೆ ಆ ಮಾಹಿತಿ ತಮಗೆ ಒಂದು ದಿನ ಮೊದಲೇ ಗೊತ್ತಾಗುತ್ತದೆ ಎನ್ನುವ ಅಹಂನಲ್ಲಿ ಇದ್ದ ಅಕ್ರಮಕೋರರು ಮೈಮರೆತು ಮರಳು ಎತ್ತತೊಡಗಿದ್ದರು.
ಮೇ 20ರಂದು ಏಕಕಾಲಕ್ಕೆ ದಾಳಿ ನಡೆಸಲು ತೀರ್ಮಾನಿಸಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳು, ಈ ಬಲ ಕೆಎಸ್‌ಆರ್‌ಪಿ ಕರೆಸದೇ, ವಿವಿಧ ಜಿಲ್ಲೆಗಳ ಲೋಕಾಯುಕ್ತರನ್ನು ಹಿಂದಿನ ರಾತ್ರಿಯೇ ಅಲ್ಲಲ್ಲಿ ಇರುವಂತೆ ಮಾಡಿಕೊಂಡು ದೂರದ ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬಾಗಲಕೋಟೆ ಜಿಲ್ಲೆಗೆ ಹೊಂದಿಕೊಂಡಂತೆ ರೆಡಿ ಇರಲು ಹೇಳಿದರು. ಬೆಳಗ್ಗೆ 7ಕ್ಕೆ ಏಕಕಾಲಕ್ಕೆ 36 ಸ್ಥಳಗಳ 24 ಪ್ರದೇಶಗಳಲ್ಲಿ ಅಕ್ರಮ ಮರಳು ಅಡ್ಡೆಗಳ ಮೇಲೆ ಬೃಹತ್ ದಾಳಿ ನಡೆಸಿ, ಅದರಲ್ಲಿ ಸಕ್ಸಸ್ ಆಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜಮಖಂಡಿ, ಬೀಳಗಿ ಮೇಲೂ ಕಣ್ಣು
ಲೋಕಾ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ಅದು ಇಳಕಲ್ಲ, ಹುನಗುಂದ, ಗುಳೇದಗುಡ್ಡ, ಬಾದಾಮಿ ಮತ್ತು ಮುಧೋಳ ತಾಲೂಕುಗಳಲ್ಲಿ ಅಕ್ರಮ ಪತ್ತೆ ಮಾಡಿದ್ದಾರೆ. ಹಾಗೆಂದು ಜಮಖಂಡಿ ಮತ್ತು ಬೀಳಗಿ ತಾಲೂಕುಗಳಲ್ಲಿ ಅಕ್ರಮ ಮರಳುಗಾರಿಕೆ ಇಲ್ಲವೆಂದಲ್ಲ. ಇತರೆಡೆಗಿಂತ ಅಲ್ಲಿಯೂ ಕಡಿಮೆ ಏನಿಲ್ಲ. ನದಿ ಬಗೆಯುವ ಕೆಲಸ ಆಹೋರಾತ್ರಿ ನಡೆಯುತ್ತಲೇ ಇವೆ. ಅಲ್ಲಿ ಅಧಿಕೃತವಾಗಿ ಯಾರೂ ಪರವಾನಗಿ ತೆಗೆದುಕೊಂಡಿಲ್ಲ. ಹೀಗಾಗಿ ಅಲ್ಲಿ ಅಧಿಕೃತ ಪಾಯಿಂಟ್‌ಗಳಲ್ಲಿ ನಿಯಮ ಉಲ್ಲಂಘಿಸಿ ಮರಳು ಎತ್ತುತ್ತಿರುವ ಬಗ್ಗೆ ಸದ್ಯಕ್ಕೆ ಲೋಕಾಯುಕ್ತರಿಗೆ ಖಚಿತ ಮಾಹಿತಿ ಸಿಕ್ಕಿಲ್ಲ ಎನ್ನಲಾಗಿದೆ. ಕೃಷ್ಣಾ ನದಿಯನ್ನು ಬಗೆಯುವ ಕೆಲಸ ಜಮಖಂಡಿ ಉಪ ವಿಭಾಗದಲ್ಲಿ ದೊಡ್ಡಮಟ್ಟದಲ್ಲೇ ನಡೆಯುತ್ತಿದೆ. ಪ್ರಭಾವಿಗಳ ಹೆಸರು ಮತ್ತು ಅವರ ಆಪ್ತರ ಮೇಲುಸ್ತುವಾರಿಯಲ್ಲೇ ಅಕ್ರಮ ದಂಧೆ ನಡೆಯುತ್ತಿದೆ. ಹೀಗಾಗಿ ಸ್ಥಳೀಯ ಅಧಿಕಾರಿಗಳಿಂದ ಅವರಿಗೆ ಯಾವುದೇ ಅಡೆತಡೆ ಇಲ್ಲವಾಗಿದೆ. ಇದೀಗ ಲೋಕಾಯುಕ್ತರು ಅಲ್ಲಿನ ಅಕ್ರಮದ ಬಗ್ಗೆಯೂ ಗಮನ ಹರಿಸಿದ್ದಾರೆ ಎಂದು ತಿಳಿದು ಬಂದಿದೆ.