ಬಾಗಲಕೋಟೆ ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ವಿಚಾರ ಸಂಕಿರಣ ಕೊಠಡಿಯಲ್ಲಿ ನಡೆದ ಒಂದು ದಿನದ ಕಾರ್ಯಾಗಾರದಲ್ಲಿ ಇಳಕಲ್ಲಿನ ವಿಜಯ ಮಹಾಂತೇಶ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಬಿ.ಬಿರಾದಾರ ಮಾತನಾಡಿದರು. ಡಾ.ಬಿ.ಎಂ.ಬಡಿಗೇರ, ಐಕ್ಯೂಎಸಿ ಸಂಯೋಜಕ ಡಾ.ಎ.ಯು. ರಾಠೋಡ, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ.ಸುರೇಶ ಆರ್. ಇದ್ದರು.
- ಪ್ರಾಚಾರ್ಯ ಡಾ.ಎಸ್.ಬಿ.ಬಿರಾದಾರ ಅಭಿಮತ
- ಒಂದು ದಿನದ ಕಾರ್ಯಾಗಾರ
ಬಾಗಲಕೋಟೆ: ಸಂವಹನ ಕೌಶಲ ಬೆಳೆಸಿಕೊಂಡರೆ ಯಾವುದೇ ಭಾಷೆಯನ್ನು ಸುಲಭವಾಗಿ ಅರ್ಥೈಸಿಕೊಂಡು ವ್ಯವಹರಿಸಲು ಸಾಧ್ಯ, ಅದು ಇಂಗ್ಲೀಷ್ ಭಾಷೆಗೂ ಹೊರತಾಗಿಲ್ಲ ಎಂದು ಇಳಕಲ್ಲಿನ ವಿಜಯ ಮಹಾಂತೇಶ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಬಿ. ಬಿರಾದಾರ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ವಿಚಾರ ಸಂಕಿರಣ ಕೊಠಡಿಯಲ್ಲಿ ಮಂಗಳವಾರ ಇಂಗ್ಲೀಷ್ ವಿಭಾಗದ ವತಿಯಿಂದ ರಾಜ್ಯ ಮಟ್ಟದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಮಾತನಾಡುವ, ಬರೆಯುವ ಹಾಗೂ ನೀಯೋಜಿತ ಕಾರ್ಯದ ಬರವಣಿಗೆಯ ಕುರಿತಾದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಾತನಾಡುವ ಕಲೆಯನ್ನು ಬೆಳೆಸಿಕೊಂಡರೆ ಬರೆಯುವ ಶೈಲಿಯೂ ಗೊತ್ತಾಗುತ್ತದೆ. ಕನ್ನಡ ಮಾತೃ ಭಾಷೆಯಾಗಿದ್ದರಿಂದ ಕಲಿಕೆಗೆ ಸರಳವಾಗಿದೆ. ಅದರಂತೆ ಇಂಗ್ಲಿಷ್ ಅರಿಯಲು ಸುತ್ತಲಿನ ಪರಿಸರವೂ ಅಗತ್ಯ ಎಂದರು.
ಉತ್ತಮ ಸಂವಹನಕಾರರಾದರೆ ಆತ್ಮವಿಶ್ವಾಸ ಹೆಚ್ಚುತ್ತದೆ. ಮಾತನಾಡುವ ಕೌಶಲ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳು ಬದ್ಧತೆ ಅಳವಡಿಸಿಕೊಳ್ಳಬೇಕು. ಇಂಗ್ಲೀಷ್ ಕಲಿಯಲು ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳುವುದರ ಜೊತೆಗೆ ಹಲವು ದಾರಿಗಳಿದ್ದು, ನಮಗೆ ನಾವೇ ಗುರುಗಳಾಗಬೇಕು. ಅಲ್ಲದೆ ಬರೆಯುವ ಸಂದರ್ಭದಲ್ಲಿ ಸಂಕೇತ ಮತ್ತು ಪದಗಳ ಬಳಕೆ ಸರಿಯಾಗಿರುವಂತೆ ನೋಡಿಕೊಳ್ಳಿ ಎಂದರು.
ಪ್ರಾಚಾರ್ಯ ಎಸ್.ಆರ್. ಮುಗನೂರಮಠ ಮಾತನಾಡಿ, ಮನುಷ್ಯನಲ್ಲಿ ಕನಸು ಕಾಣುವ, ಚಿಂತನೆ ಮಾಡುವ ಗುಣವಿರಬೇಕು. ಮೆದುಳಿನಲ್ಲಿನ ವರ್ಣಿಕೆ ಮತ್ತು ಬ್ರೋಕಾ ಮಾತುಗಳನ್ನು ಹೇಳುವ ಅಂಶಗಳಾಗಿವೆ. ಮಾತನಾಡುವ ಮತ್ತು ಬರವಣಿಗೆ ಕೌಶಲಗಳಿಗೆ ನಾವೇ ಜವಾಬ್ದಾರರು. ಬರಹವಾಗಬೇಕಾದರೆ ಯೋಚನೆ ಮತ್ತು ಭಾಷಾ ಬಳಕೆ ಅವಶ್ಯಕ. ಓದುವ ಹವ್ಯಾಸ ಇದ್ದಾಗ ಮಾತ್ರ ಬರೆಯುವ ಸಾಮರ್ಥ್ಯ ಹೆಚ್ಚುತ್ತದೆ, ಬರಹಕ್ಕೆ ವೈಶಿಷ್ಟತೆ ಮುಖ್ಯ ಎಂದು ತಿಳಿಸಿದರು.
ಬಾಗಲಕೋಟೆಯ ಮಹಿಳಾ ಸರ್ಕಾರಿ ಪ್ರಥಮ ದರ್ಜೆಯ ಮಹಾವಿದ್ಯಾಲದ ಪ್ರಾಧ್ಯಾಪಕ ಡಾ.ಬಿ.ಎಂ. ಬಡಿಗೇರ, ಐಕ್ಯೂಎಸಿ ಸಂಯೋಜಕರಾದ ಡಾ.ಎ.ಯು. ರಾಠೋಡ, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ.ಸುರೇಶ ಆರ್, ಕಾರ್ಯಕ್ರಮ ಸಂಯೋಜಕ ಎಸ್.ವಿ. ಕಟ್ಟಿ ಇತರರಿದ್ದರು.