ಮುಧೋಳ ತಾಲೂಕಿನ ಕಸಬಾಜಂಬಗಿ ಭಾಗದಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಮರಳನ್ನು ಅಧಿಕಾರಿಗಳು ಪರಿಶೀಲನೆ ಮಾಡಿದರು. ಎಸಿ ಶ್ವೇತಾ ಬೀಡಿಕರ ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಇದ್ದರು.
- ಮಾಫಿಯಾ ದಂಧೆಗೆ ಕಡಿವಾಣ
- ನಿರಂತರ ನಿಗಾ ವಹಿಸಿರುವ ಅಧಿಕಾರಿಗಳು
- ಲೋಕಾಯುಕ್ತ ದಾಳಿಯ ನಂತರ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಮಾಡುತ್ತಿದ್ದವರ ವಿರುದ್ಧ ಅಧಿಕಾರಿಗಳು ಸಮರ ಸಾರಿದ್ದಾರೆ
ಮುಧೋಳ: ಲೋಕಾಯುಕ್ತ ದಾಳಿಯ ನಂತರ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಮಾಡುತ್ತಿದ್ದವರ ವಿರುದ್ಧ ಅಧಿಕಾರಿಗಳು ಸಮರ ಸಾರಿದ್ದಾರೆ. ಘಟಪ್ರಭಾ ನದಿ ತೀರದ ಗ್ರಾಮಗಳಲ್ಲಿ ತೀವ್ರ ನಿಗಾ ವಹಿಸಲಾಗಿದ್ದು, ಮರಳು ಮಾಫಿಯಾ ಚಟುವಟಿಕೆಗಳಿಗೆ ತಡೆ ಬಿದ್ದಿದೆ.
ನಾಲ್ವರ ವಿರುದ್ಧ ಪ್ರಕರಣ ದಾಖಲು
ಲೋಕಾಯುಕ್ತ ದಾಳಿಯ ಬಳಿಕ ಅಕ್ರಮ ಮರಳುಗಾರಿಕೆ ಕಡಿಮೆಯಾಗಿದ್ದರೂ, ಕೆಲವರು ಸಂಗ್ರಹಿಸಿಟ್ಟಿದ್ದ ಮರಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಈ ಸಂಬಂಧ ತಾಲೂಕಿನ ವಿವಿಧ ಕಡೆಗಳಲ್ಲಿ ಈವರೆಗೆ ಒಟ್ಟು 9 ಪ್ರಕರಣಗಳನ್ನು ದಾಖಲಿಸಲಾಗಿದೆ.
ಒಂಟಗೋಡಿ ಮತ್ತು ಚನ್ನಾಳ ಗ್ರಾಮದಲ್ಲಿ ಮರಳು ಸಂಗ್ರಹಿಸಿ ಮಾರಾಟ ಮಾಡಿದ ಆರೋಪದ ಮೇಲೆ ಕೃಷ್ಣಪ್ಪ ಲಕ್ಷ್ಮಣ ಕುರಿ ಮತ್ತು ಹನಮಂತ ವೆಂಕಪ್ಪ ಅಪರೋಜಿ ಎಂಬುವವರ ಮೇಲೆ ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾಗೆಯೇ ಬರಗಿ ಗ್ರಾಮದ ಘಟಪ್ರಭಾ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡುತ್ತಿದ್ದ ಸುನಂದಾ ಕೃಷ್ಣಪ್ಪ ಗುಲಗಾಲಜಂಬಗಿ ಮತ್ತು ಮಾನಪ್ಪ ರಾಮಪ್ಪ ಗುಲಗಾಲಜಂಬಗಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸರ್ಕಾರದ ಪರವಾಗಿ ಆಯಾ ಗ್ರಾಮಗಳ ಆಡಳಿತಾಧಿಕಾರಿಗಳು ಮುಧೋಳ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅಕ್ರಮ ಸ್ಥಳಗಳಿಗೆ ಎಸಿ ಭೇಟಿ, ಕಟ್ಟುನಿಟ್ಟಿನ ಸೂಚನೆ:
ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರು ಕಸಬಾಜಂಬಗಿ, ಜೀರಗಾಳ, ಜಂಬಗಿ ಕೆ.ಡಿ. ಸೇರಿ ನದಿ ತೀರದ ವಿವಿಧ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ, ವಲಯ ಅರಣ್ಯಾಧಿಕಾರಿ ಎಚ್.ಬಿ. ಡೋಣಿ, ಲೋಕೋಪಯೋಗಿ ಹಾಗೂ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‌ಗಳು ಮತ್ತು ಪಿಡಿಒಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಟಾಸ್ಕ್ ೆರ್ಸ್ ಸಭೆಯಲ್ಲಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮಾತನಾಡಿ, ತಾಲೂಕಿನ ಘಟಪ್ರಭಾ ನದಿ ತೀರದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ತಡೆಯುವಲ್ಲಿ ಸಾಮೂಹಿಕ ಕಾರ್ಯದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅಕ್ರಮ ಮರಳುಗಾರಿಕೆ ತಡೆಯುವಲ್ಲಿ ಮುಲಾಜಿಲ್ಲದೆ ಕಾರ್ಯ ನಿರ್ವಹಿಸಬೇಕು. ಲೋಕಾಯುಕ್ತ ದಾಳಿ ಬಳಿಕ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಸ್ತಬ್ಧಗೊಂಡಿದೆ. ಇದೇ ವಾತಾವರಣವನ್ನು ನಾವು ಕಾಪಾಡಿಕೊಂಡು ಹೋಗಬೇಕು. ಹಿಂದೆ ಆಗಿರುವ ಲೋಪವನ್ನು ಸರಿಪಡಿಸಿಕೊಂಡು ಮುಂದಿನ ದಿನದಲ್ಲಿ ಪ್ರಕೃತಿ ರಕ್ಷಣೆಗೆ ಮಹತ್ವ ನೀಡುವ ಮರಳನ್ನು ಸಂರಕ್ಷಿಸುವ ಕೆಲಸ ಮಾಡೋಣ. ಇದೆಲ್ಲ ಘಟನೆಗಳಿಂದ ನದಿ ದಡದ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಹೇಳಿದರು.
"
ಲೋಕಾಯುಕ್ತ ದಾಳಿ ಬಳಿಕ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಸ್ತಬ್ಧಗೊಂಡಿದೆ. ಇದೇ ವಾತಾವರಣವನ್ನು ನಾವು ಕಾಪಾಡಿಕೊಂಡು ಹೋಗಬೇಕು. ಅಕ್ರಮ ಮರಳುಗಾರಿಕೆ ತಡೆಯುವಲ್ಲಿ ಸಾಮೂಹಿಕ ಕಾರ್ಯ ಅಗತ್ಯವಿದ್ದು, ಪ್ರಕತಿ ರಕ್ಷಣೆಗೆ ಮಹತ್ವ ನೀಡುವ ಮರಳನ್ನು ಸಂರಕ್ಷಿಸುವ ಕೆಲಸ ಮಾಡೋಣ.
- ಶ್ವೇತಾ ಬೀಡಿಕರ, ಉಪವಿಭಾಗಾಧಿಕಾರಿ ಜಮಖಂಡಿ.