ಹುನಗುಂದ-ಕರಡಿ ರಸ್ತೆಯು ಸಂಪೂರ್ಣ ಹಾಳಾಗಿರುವುದು.  
ಬಾಗಲಕೋಟೆ

ಆಯ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ...!

ಪ್ರಮುಖ ಮುಖ್ಯಾಂಶಗಳು

  • ಸಂಚಾರ ಮಾಡುವ ಮುನ್ನ ಜೋಕೆ
  • ಪ್ರಮುಖ ರಸ್ತೆ ಹಾಳು
  • ಹುನಗುಂದ ತಾಲೂಕಿನ ಹತ್ತು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯೇ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ
ಹುನಗುಂದ: ನಿತ್ಯವೂ ಜನರು ಈ ರಸ್ತೆಯಲ್ಲಿ ಸಂಚಾರ ಮಾಡಬೇಕು. ಆದರೆ ಜೋಪಾನವಾಗಿ ವಾಹನ ಓಡಿಸಬೇಕು. ಸ್ವಲ್ಪ ಆಯ ತಪ್ಪಿದರು ಅಪಾಯ ಕಟ್ಟಿಟ್ಟ ಬುತ್ತಿ...!
ಹುನಗುಂದ ತಾಲೂಕಿನ ಹತ್ತು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯೇ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಅಮರಾವತಿ, ಬಿಂಜವಾಡಗಿ, ಘಟ್ಟಿಗನೂರ, ನಿಡಸನೂರ ಕ್ರಾಸ್ ಮಾರ್ಗವಾಗಿ ಕರಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಸಂಚರಿಸುವ ರಸ್ತೆಯು ದುರಸ್ತಿ ಕಾಣದೇ ವರ್ಷಗಳೇ ಗತಿಸಿವೆ. ಈ ರಸ್ತೆ ಅವಲಂಬಿಸಿರುವ ಗ್ರಾಮೀಣ ಭಾಗದ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ದೊಡ್ಡ ಪ್ರಮಾಣದ ತಗ್ಗು ಗುಂಡಿಗಳಿಂದ ಆವೃತವಾದ ರಸ್ತೆಯಲ್ಲಿ ಬೈಕ್ ಸವಾರರು, ಬಸ್, ಟಂ-ಟಂ, ಆಟೋ, ಟ್ರ್ಯಾಕ್ಟರ್ ಸೇರಿ ವಿವಿಧ ವಾಹನಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಿದೆ.
ನಾನಾ ಕೆಲಸ, ಕಾರ್ಯಗಳಿಗೆ ಹುನಗುಂದ- ಬಾಗಲಕೋಟೆ ನಗರಗಳಿಗೆ ಸಮಯಕ್ಕೆ ಸರಿಯಾಗಿ ಸಂಚರಿಸಲು ಆಗದೇ ಸಂಕಟ ಪಡುವಂತಾಗಿದೆ. ಮೈ-ಕೈ ನೋವಿನಿಂದ ನಿತ್ಯವೂ ನರಕಯಾತನೆ ಅನುಭವಿಸುವಂತಾಗಿದೆ. ಬೈಕ್ ಸವಾರರು ಈ ರಸ್ತೆಯಲ್ಲಿರುವ ಗುಂಡಿಗಳನ್ನು ತಪ್ಪಿಸಲು ಹೋಗಿ ಅಪಘಾತಕ್ಕೆ ತುತ್ತಾಗಿ ತೀವ್ರ ಸಮಸ್ಯೆಗಳಿಗೆ ನರಳುತ್ತಿದ್ದಾರೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚಾರ ಅತ್ಯಂತ ದುರ್ಲಭ. ಬೇಸಿಗೆಯಲ್ಲಿ ಧೂಳಿನ ಮಜ್ಜನ ಗ್ಯಾರಂಟಿ.
ಹುನಗುಂಂದ ತಾಲೂಕಿನ ದೊಡ್ಡ ಹೋಬಳಿಯಾದ ಕರಡಿ ಗ್ರಾಮಕ್ಕೆ ಸಂಚರಿಸಲು ಮುಖ್ಯಮಾರ್ಗವಾಗಿರುವ 12 ಕಿ.ಮೀ ರಸ್ತೆ ಸುಧಾರಣಗೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
"

ನಮ್ಮ ಗ್ರಾಮದಿಂದ ನಿತ್ಯ ನೂರಾರು ಜನರು, ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ತಾಲೂಕು ಕೇಂದ್ರವಾದ ಹುನಗುಂದ ಪಟ್ಟಣಕ್ಕೆ ಹಾಗೂ ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ ನಗರಕ್ಕೆ ತೆರಳುತ್ತಿದ್ದಾರೆ. ಆದರೆ ಈ ರಸ್ತೆಯಲ್ಲಿ ಸಂಚರಿಸುವುದು ಅಪಾಯಕಾರಿಯಯಾಗಿದೆ. ಬೇಸಿಗೆಯಲ್ಲಿ ಧೂಳಿನ ಮಜ್ಜನವಾದರೆ ಮಳೆಗಾಲದಲ್ಲಿ ಗುಂಡಿಗಳ ಕಲುಷಿತ ನೀರಿನ ಮಜ್ಜನ ಗ್ಯಾರಂಟಿ. ಅಧಿಕಾರಿಗಳು ಗಮನ ಹರಿಸಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ.
-ಯಲ್ಲಪ್ಪ ಕರಡಿ ಪ್ರಯಾಣಿಕ